ಕುಶಾಲನಗರ, ಜು. 7: ಕಳೆದ ಸಾಲಿನ ಗ್ರಾಮಸಭೆ ನಿರ್ಣಯಗಳನ್ನು ಸಂಬಂಧಿಸಿದ ಇಲಾಖೆಗಳಿಗೆ ಕಳುಹಿಸದೆ ನಿರ್ಲಕ್ಷ್ಯ ತಾಳಿರುವ ಗ್ರಾಮ ಪಂಚಾಯಿತಿ ಅಧ್ಯಕ್ಷರ ಬಗ್ಗೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ ಘಟನೆ ನಂಜರಾಯಪಟ್ಟಣ ಗ್ರಾಮಸಭೆಯಲ್ಲಿ ನಡೆಯಿತು.
ಹೊಸಪಟ್ಟಣ ಸಮುದಾಯ ಭವನದಲ್ಲಿ ನಡೆದ ಗ್ರಾಮಸಭೆಯಲ್ಲಿ ಮಾತನಾಡಿದ ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಸಿ.ಎಲ್. ವಿಶ್ವ, ಕಳೆದ ಬಾರಿ ನಡೆದ ಗ್ರಾಮಸಭೆಯಲ್ಲಿ ದುಬಾರೆ ರ್ಯಾಫ್ಟಿಂಗ್ ಕ್ರೀಡೆ, ಆನೆ ಕಂದಕ ಮತ್ತಿತರ ವಿಷಯಗಳ ಬಗ್ಗೆ ಗ್ರಾಮಸ್ಥರು ಚರ್ಚಿಸಿದ್ದರೂ ಅದನ್ನು ಅನುಷ್ಠಾನಗೊಳಿಸುವಲ್ಲಿ ಪಂಚಾಯಿತಿ ಅಧ್ಯಕ್ಷೆ ಮತ್ತು ಆಡಳಿತ ಮಂಡಳಿ ನಿರ್ಲಕ್ಷ್ಯ ವಹಿಸಿದೆ ಎಂದು ಆರೋಪಿಸಿದರು. ಈ ಸಂದರ್ಭ ಮಾತನಾಡಿದ ಅಧ್ಯಕ್ಷೆ ಜೈನಬಾ ತನಗೆ ಮಾಹಿತಿಯ ಕೊರತೆ ಇರುವದಾಗಿ ಸಭೆಯಲ್ಲಿ ಒಪ್ಪಿಕೊಂಡರು. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಆರ್.ಕೆ. ಚಂದ್ರ, ಬೋಪಯ್ಯ, ಮಾವಾಜಿ ದಾಮೋದರ್ ಮತ್ತಿತರರು ಆಡಳಿತ ಮಂಡಳಿ ನಡುವೆ ಗುಂಪುಗಾರಿಕೆ ನಡೆಯುತ್ತಿದ್ದು ಇದರಿಂದ ಗ್ರಾಮದ ಅಭಿವೃದ್ಧಿ ಕುಂಠಿತವಾಗಿದೆ ಎಂದು ಸಭೆಯಲ್ಲಿ ಪ್ರಸ್ತಾಪಿಸಿದರು.
ಸಭೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳ ಗೈರು ಹಾಜರಾತಿ ಹಾಗೂ ಬೆರಳೆಣಿಕೆಯ ಗ್ರಾಮಸ್ಥರು ಉಪಸ್ಥಿತರಿರುವ ಬಗ್ಗೆ ಅಧ್ಯಕ್ಷರ ಬಳಿ ಮಾಹಿತಿ ಬಯಸಿದರು. ಸಭೆಯಲ್ಲಿದ್ದ ಅರಣ್ಯ ಇಲಾಖೆಯ ಉಪ ವಲಯ ಅರಣ್ಯಾಧಿಕಾರಿ ಬಾನಂಡ ದೇವಿಪ್ರಸಾದ್, ಅರಣ್ಯದಂಚಿನಲ್ಲಿ ಕಂದಕ ನಿರ್ಮಿಸಿದ ಬಗ್ಗೆ ಸಭೆಗೆ ಮಾಹಿತಿ ಒದಗಿಸಿದರು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸುಮೇಶ್ ಮಾತನಾಡಿ, ಕಳೆದ ಸಾಲಿನ ಮತ್ತು ಈ ಸಾಲಿನ ಗ್ರಾಮಸಭೆಯ ನಿರ್ಣಯಗಳನ್ನು ಸಂಬಂಧಿಸಿದ ಇಲಾಖೆಗಳಿಗೆ ಕಳುಹಿಸಿ ಸಮಸ್ಯೆಗಳಿಗೆ ಪರಿಹಾರಕ್ಕೆ ಯತ್ನಿಸುವದಾಗಿ ತಿಳಿಸಿದರು. ಈ ಸಂದರ್ಭ ಜಿಲ್ಲಾ ಪಂಚಾಯ್ತಿ ಸದಸ್ಯ ಪಿ.ಎಂ. ಲತೀಫ್, ತಾಲೂಕು ಪಂಚಾಯಿತಿ ಸದಸ್ಯ ವಿಜು ಚಂಗಪ್ಪ ಹಾಗೂ ಸದಸ್ಯರು ಇದ್ದರು.