ಕೂಡಿಗೆ, ಜು. 7: ಕೂಡಿಗೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ನಿವಾಸಿ ಕೆ.ಇ. ಮಾದಪ್ಪ ಎಂಬವರು ತಮ್ಮ ಸರ್ವೇ ನಂ 31/4ರಲ್ಲಿರುವ ವಾಸದ ಮನೆಗೆ ವಿದ್ಯುಚ್ಛಕ್ತಿ ಸಂಪರ್ಕಕ್ಕೆ ನಿರಾಕ್ಷೇಪಣಾ ಪತ್ರ ಪಡೆಯಲು ಅರ್ಜಿ ಸಲ್ಲಿಸಿ, ಸರ್ಕಾರ ನಿಗಧಿಪಡಿಸಿದ ಶುಲ್ಕಕ್ಕಿಂತ ಹೆಚ್ಚಿನ ಹಣವನ್ನು ನೀಡಿ ನಿರಾಕ್ಷೇಪಣಾ ಪತ್ರವನ್ನು ಪಡೆದಿದ್ದರು. ನಿಯಮದ ಪ್ರಕಾರ 250 ರೂ.ಗಳು ಮಾತ್ರ ಗ್ರಾಮ ಪಂಚಾಯಿತಿ ಶುಲ್ಕವಾಗಿ ಪಡೆಯುವ ಬದಲು 55,000 ರೂ. ಗಳನ್ನು ಪಡೆದು ರಸೀದಿಯನ್ನು ನೀಡಿ, ನಿರಾಕ್ಷೇಪಣಾ ಪತ್ರವನ್ನು ನೀಡಲಾಗಿತ್ತು.
ಈ ವಿಷಯವಾಗಿ ಹೆಚ್ಚುವರಿ ಹಣವನ್ನು ಹಿಂದಿರುಗಿಸಬೇಕೆಂದು ಆದೇಶ ನೀಡಬೇಕೆಂಬ ಮನವಿ ಬಂದ ಹಿನ್ನೆಲೆಯಲ್ಲಿ ಮಾದಪ್ಪ ಅವರಿಂದ ಪಡೆದ 54,750 ರೂ. ಹೆಚ್ಚುವರಿ ಹಣವನ್ನು ಅರ್ಜಿದಾರರಿಗೆ ಹಿಂದಿರುಗಿಸುವಂತೆ ತಾಲೂಕು ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ್ ಅವರು ಆದೇಶಿಸಿ, ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಕ್ತ ವರದಿಯನ್ನು ಲಿಖಿತವಾಗಿ ಸೋಮವಾರಪೇಟೆ ತಾಲೂಕು ಪಂಚಾಯಿತಿಗೆ ವರದಿ ಸಲ್ಲಿಸುವಂತೆ ಕೂಡಿಗೆ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗೆ ಆದೇಶಿಸಿದ್ದರು.
ಆ ವಿಚಾರಕ್ಕೆ ಸಂಬಂಧಪಟ್ಟಂತೆ ಪಂಚಾಯಿತಿಯ ಅಭಿವೃದ್ಧಿ ಶುಲ್ಕವಾಗಿ ಹೆಚ್ಚುವರಿ ಹಣ ಪಡೆದು ಅಭಿವೃದ್ಧಿ ಕಾರ್ಯಕ್ಕೆ ಉಪಯೋಗಿಸಲಾಗಿದ್ದು, ಹಣವನ್ನು ಮಾದಪ್ಪ ಅವರಿಗೆ ಹಿಂದಿರುಗಿಸಲು ಸಾಧ್ಯವೇ ಇಲ್ಲ. ಆದ್ದರಿಂದ ಈ ಉಲ್ಲೇಖಿತ ಆದೇಶವನ್ನು ತಡೆಹಿಡಿಯಬೇಕೆಂದು ಕೂಡಿಗೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರು ಮತ್ತು ಸದಸ್ಯರು
(ಮೊದಲ ಪುಟದಿಂದ) ತಾಲೂಕು ಕಾರ್ಯನಿರ್ವಹಣಾಧಿಕಾರಿಯವರಿಗೆ ಮನವಿ ಸಲ್ಲಿಸಿದ ಹಿನ್ನೆಲೆಯಲ್ಲಿ ತಾಲೂಕು ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ್ ಆದೇಶವನ್ನು ತಡೆ ಹಿಡಿದು ಪರಿಶೀಲನೆ ನಡೆಸಲು ಕಡತಗಳನ್ನು ಕಳುಹಿಸಲು ತಿಳಿಸಿದ್ದಾರೆ.
ಈ ವಿಚಾರವಾಗಿ ಕೂಡಿಗೆ ಗ್ರಾಮ ಪಂಚಾಯಿತಿಯಲ್ಲಿ ತುರ್ತು ಸಭೆ ನಡೆಸಿ ಜಿಲ್ಲಾ ಮುಖ್ಯ ಕಾರ್ಯನಿರ್ವಹಣಾಧಿüಕಾರಿಗಳಿಗೆ ಮೇಲ್ಮನವಿ ಸಲ್ಲಿಸಲು ಸಭೆಯಲ್ಲಿ ಒಕ್ಕೊರಲಿನ ತೀರ್ಮಾನ ಕೈಗೊಳ್ಳಲಾಯಿತು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಗ್ರಾ.ಪಂ. ಅಧ್ಯಕ್ಷೆ ಪ್ರೇಮಲೀಲ ಮಾತನಾಡಿ, ಗ್ರಾಮ ಪಂಚಾಯಿತಿಯ 2011ರ ಬೈಲಾದ ಪ್ರಕಾರ ಶುಲ್ಕವಾಗಿ ಹೆಚ್ಚುವರಿ ಹಣ ಪಡೆದುಕೊಂಡು ಅಭಿವೃದ್ಧಿ ಕಾರ್ಯಕ್ಕೆ ಉಪಯೋಗಿಸಲಾಗಿದ್ದು, ಹಣ ಹಿಂದಿರುಗಿಸಲು ಸಾಧ್ಯವಿಲ್ಲ. ಜಿಲ್ಲಾ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಮನವಿ ಸಲ್ಲಿಸಲು ಈ ಸಭೆಯಲ್ಲಿ ಒಕ್ಕೊರಲಿನ ತೀರ್ಮಾನ ಕೈಗೊಳ್ಳಲಾಗಿದೆ. ಗ್ರಾಮದ ಅಭಿವೃದ್ಧಿಗೆ ಎಲ್ಲಾ ಸದಸ್ಯರುಗಳ ಸಹಕಾರ ಮುಖ್ಯವಾಗಿದೆ ಎಂದು ತಿಳಿಸಿದರು.
ಗ್ರಾ.ಪಂ.ನ ಪ್ರಭಾರ ಅಭಿವೃದ್ಧಿ ಅಧಿಕಾರಿ ಸ್ವಾಮಿ ನಾಯಕ್, ತಾಲೂಕು ಕಾರ್ಯನಿರ್ವಹಣಾಧಿಕಾರಿಗಳು ನೀಡಿರುವ ತಡೆಯಾಜ್ಞೆ ಪತ್ರವನ್ನು ಸಭೆಯಲ್ಲಿ ಮಂಡಿಸಿದರು.
ಈ ಸಂದರ್ಭ ಗ್ರಾ.ಪಂ. ಉಪಾಧ್ಯಕ್ಷ ಗಿರೀಶ್, ಸದಸ್ಯರುಗಳಾದ ರವಿ, ರಾಮಚಂದ್ರ, ಕೆ.ಜಿ. ಮೋಹಿನಿ, ಎಚ್.ಎಸ್. ರವಿ, ಕೆ.ಜೆ. ಮಂಜಯ್ಯ, ಪುಷ್ಪ, ಧನ್ಯ, ಕಲ್ಪನ, ರತ್ನಮ್ಮ ಇದ್ದರು.