ಮಡಿಕೇರಿ, ಜು. 7: ಮಾಲ್ದಾರೆ ಕೃಷಿ ಪತ್ತಿನ ಸಹಕಾರ ಸಂಘದ ಗೋದಾಮಿನಿಂದ ಕಳೆದ ಏಪ್ರಿಲ್‍ನಲ್ಲಿ ಕಳವು ಮಾಡಲಾಗಿದ್ದ ಅಂದಾಜು ರೂ. 48 ಲಕ್ಷ ಮೌಲ್ಯದ 104 ಚೀಲ ಕರಿಮೆಣಸು ಪತ್ತೆ ಹಚ್ಚಿರುವ ಪೊಲೀಸರು ಆರೋಪಿ ಮೈಕಲ್ ವಿರುದ್ಧ ಕಾನೂನು ಕ್ರಮ ಕೈಗೊಂಡಿದ್ದಾರೆ.

ಮಾಲ್ದಾರೆ ಕೃಷಿ ಪತ್ತಿನ ಸಹಕಾರ ಸಂಘದ ನೌಕರನಾಗಿದ್ದ ಮೈಕಲ್ ದಿಢೀರ್ ಶ್ರೀಮಂತನಾಗುವ ದುರುದ್ದೇಶದಿಂದ ಸಂಘಕ್ಕೆ ವಂಚಿಸಿ ಕರಿಮೆಣಸು ಮಾರಾಟ ಮಾಡಿದ್ದಲ್ಲದೆ, ಕದ್ದ ದಾಸ್ತಾನು ಮಾರಾಟ ಹಣದಿಂದ ಪಿರಿಯಾಪಟ್ಟಣದಲ್ಲಿನ ಕಂಠಪುರ ಎಂಬಲ್ಲಿ ಜಮೀನು ಗುತ್ತಿಗೆ ಪಡೆದು ಶುಂಠಿ ಕೃಷಿಯಲ್ಲಿ ತೊಡಗಿದ್ದಾಗಿ ತನಿಖೆಯಿಂದ ಬಹಿರಂಗಗೊಂಡಿದೆ. ಆರೋಪಿ ನೀಡಿದ ಸುಳಿವಿನ ಮೇರೆಗೆ ಪೊಲೀಸರು, ಸಿದ್ದಾಪುರದ ವ್ಯಾಪಾರಿಯೊಬ್ಬರಿಂದ 104 ಚೀಲ (7345 ಕೆ.ಜಿ.) ಕರಿಮೆಣಸು ವಶಪಡಿಸಿಕೊಂಡಿದ್ದಾರೆ.

ಕಾರ್ಯಾಚರಣೆಯಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕ ಪಿ. ರಾಜೇಂದ್ರ ಪ್ರಸಾದ್ ಮಾರ್ಗದರ್ಶನದಲ್ಲಿ ಜಿಲ್ಲಾ ಅಪರಾಧ ಪತ್ತೆದಳ ನಿರೀಕ್ಷಕ ಕರೀಂ ರಾವ್‍ತರ್, ಎಎಸ್‍ಐ ಹೆಚ್. ವೈ. ಹಮೀದ್, ಸಿಬ್ಬಂದಿಗಳಾದ ಎನ್.ಟಿ. ತಮ್ಮಯ್ಯ ವಿ.ಜಿ. ವೆಂಕಟೇಶ್, ಕೆ.ಎಸ್. ಅನಿಲ್‍ಕುಮಾರ್, ಎಂ.ಎನ್. ನಿರಂಜನ್, ಬಿ.ಎಲ್. ಯೋಗೇಶ್ ಕುಮಾರ್, ಕೆ.ಆರ್. ವಸಂತ, ಕೆ.ಎಸ್. ಶಶಿಕುಮಾರ್, ಯು.ಎ. ಮಹೇಶ್ ಪಾಲ್ಗೊಂಡಿದ್ದರು. ಕಾರ್ಯ ತಂಡಕ್ಕೆ ಪೊಲೀಸ್ ಅಧೀಕ್ಷಕರು ನಗದು ರೂ. 10 ಸಾವಿರ ಬಹುಮಾನ ಘೋಷಿಸಿದ್ದಾರೆ. ಈ ಕರಿಮೆಣಸು ಕಳವು ಪ್ರಕರಣ ಸಂಬಂಧ ಮಾಲ್ದಾರೆ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಚೇರಂಡ ನಂದಾ ಸುಬ್ಬಯ್ಯ ಹಾಗೂ ಆಡಳಿತ ಮಂಡಳಿ ಪೊಲೀಸ್ ಪುಕಾರು ನೀಡಿ, ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಪಡಿಸಿದ್ದನ್ನು, ಈ ಸಂಬಂಧ ಪ್ರತಿಭಟನೆ ನಡೆದಿದ್ದನ್ನು ಇಲ್ಲಿ ಸ್ಮರಿಸಬಹುದು.