ಮಡಿಕೇರಿ, ಜು. 7: ಕಡಿಮೆ ದರದಲ್ಲಿ ಮಳೆ ಕೊಯ್ಲು ನಿರ್ವಹಣೆ ವ್ಯವಸ್ಥೆಯನ್ನು ಮಾಡಿಕೊಡುವದಾಗಿ ಪತ್ರಿಕೆಯಲ್ಲಿ ಜಾಹೀರಾತು ಪ್ರಕಟಗೊಂಡಿತ್ತು. ಮಡಿಕೇರಿಯ ಪ್ರಮುಖ ವ್ಯಕ್ತಿಯ ಮಗಳು ಆ ಸಂಸ್ಥೆಯನ್ನು ಸಂಪರ್ಕಿಸಿದಳು. ಕುಶಾಲನಗರ ದಿಂದ ಸ್ಥಳ ಪರಿಶೀಲನೆ ಮಾಡಲು, ಮಧ್ಯಾಹ್ನ ಬರುವದಾಗಿ ಹೇಳಿದ ‘ಮಹಾನ್ ವಿಜ್ಞಾನಿ’ ನಿನ್ನೆ ಒಂದು ಗಂಟೆ ವೇಳೆಗೆ ಮಡಿಕೇರಿಗೆ ಬಂದು ಇದ್ದ ಬದ್ದ ರೀತಿಯಲ್ಲೆಲ್ಲಾ ತನ್ನ ಯೋಜನೆ ಬಗ್ಗೆ ವಿವರಿಸತೊಡಗಿದ. ಪ್ರಪಂಚದಲ್ಲಿಯೋ ತಾನು ಮಾತ್ರ ಆಹಾರ ಶ್ರೇಣಿಯ ಸ್ಟೀಲ್ ಕವಚವನ್ನು ಹೊಂದಿರುವ ಫಿಲ್ಟರನ್ನು ಸರಬರಾಜು ಮಾಡುವದಾಗಿಯೂ, ಬೆಲೆ ರೂ. 19500 ಇದ್ದರೂ ವಿಶೇಷ ರಿಯಾಯಿತಿ ರೂ. 1000 ನೀಡಿ ರೂ. 18500ಕ್ಕೆ ಸರಬರಾಜು ಮಾಡುವದಾಗಿ ಧಾರಾಳಿತನ ಮೆರೆದ!
ಜೊತೆಗೆ ಪೈಪು ಜೋಡಣೆಗೆ ರೂ. 6000 ಖರ್ಚಾಗುವದಾಗಿ ತಿಳಿಸಿದ. ಕುಟುಂಬದವರೊಬ್ಬರು ಕೂಡಲೇ ಮೊಬೈಲ್ನಲ್ಲಿ ಇಂಟರ್ನೆಟ್ ಬಳಸಿ ಹುಡುಕಾಡಿದಾಗ ಯಂತ್ರೋಪಕರಣಗಳನ್ನು ಹೊಂದಿರುವ ಫಿಲ್ಟ್ರ್ನ ಬೆಲೆಯೇ ಗರಿಷ್ಠ ರೂ. 8000 ಎಂದಿರುವದನ್ನು ಆತನ ಗಮನಕ್ಕೆ ತಂದಾಗ ಅದು ತೀರಾ ಸಣ್ಣದಿದ್ದು,
(ಮೊದಲ ಪುಟದಿಂದ) ತಮ್ಮ ಮಾಲು ಅದಕ್ಕಿಂತ 3 ಪಟ್ಟು ದೊಡ್ಡದಿರುತ್ತದೆ ಎಂದು ಸಮಜಾಯಿಷಿಕೆ ನೀಡಿದ. ಕೊಚ್ಚಿ ಹೋಗುವ ನೀರನ್ನು ನೇರವಾಗಿ ಬೋರ್ವೆಲ್ ಒಳಗೆ ಬಿಡುವದಾಗಿ ಯೂ ಅದು ತುಂಬಿದೊಡನೆ ತಾನು ಅಳವಡಿಸುವ ಗೇಟ್ವಾಲ್ವ್ ಮುಚ್ಚಬೇಕೆಂದು ಸಲಹೆ ನೀಡಿದ. ಬತ್ತಿರುವ ಬೋರ್ವೆಲ್ಗಳಲ್ಲೂ ನೀರು ತುಂಬುತ್ತಿರುವ ಬಗ್ಗೆ ತನ್ನ ‘ಮ್ಯಾಜಿಕ್ ವಿದ್ಯೆ’ಯನ್ನು ವಿವರಿಸಿದ.
ನಂಬಿದ ಮನೆ ಮಾಲೀಕರು ರೂ. 2000 ಮುಂಗಡ ನೀಡಿದೊಡನೆ, ನಾಳೆ ಕೆಲಸ ಆರಂಭಿಸುವದಾಗಿ ಹೇಳಿದ. ಶುಕ್ರವಾರ ಮಧ್ಯಾಹ್ನ ಮನೆ ಮುಂದೆ ಕಾರೊಂದು ನಿಂತಿತು. ಒಬ್ಬ ಮೇಸ್ತ್ರಿಯೊಡನೆ ಇಬ್ಬರು ಕೆಲಸಗಾರರು ಬೊರ್ವೆಲ್ಗೆ ಪೈಪ್ ಅಳವಡಿಸಲು ನೆಲ ಅಗೆಯಲು ಆರಂಭಿಸಿದರು. ಆ ವೇಳೆಗೆ ಮನೆಯತ್ತ ಬಂದ ಮತ್ತೊಬ್ಬ ಸದಸ್ಯ ಮೂಲೆಯಲ್ಲಿದ್ದ ಫಿಲ್ಟರ್ಅನ್ನು ತೋರಿಸುವಂತೆ ಸೂಚಿಸಿದರು. ಮೂರು ಬದಿಗಳಲ್ಲೂ ಪೈಪ್ ಹೊಂದಿದ್ದ ಫಿಲ್ಟರ್ ಸುಮಾರು ಒಂದೂವರೆ ಅಡಿ ಎತ್ತರ 1 ಅಗಲದ ಸ್ಟೀಲ್ ಹೊದಿಕೆಯನ್ನು ಹೊಂದಿತ್ತು. ಮೇಲಿನ ಮುಚ್ಚಳ ತೆರೆದಾಗ ಬಿಳಿ ಮಿಶ್ರಿತ ಕಪ್ಪು ಕಲ್ಲುಗಳು ಕಂಡು ಬಂದವು. ಮಧ್ಯಭಾಗದಲ್ಲಿ ಇದ್ದ ಕಬ್ಬಿಣದ ‘ಮೆಷ್’ ಒಂದು ಅಲ್ಲಾಡುತಿತ್ತು. ಫಿಲ್ಟರನ್ನು ತಲೆ ಕೆಳಗೆ ಮಾಡಿದೊಡನೆ ಬಿಳಿಕಲ್ಲು ಮಿಶ್ರಿತ ಕಲ್ಲಿದ್ದಲಿನಂತಹ ಸುಮಾರು 5 ಕೆ.ಜಿ. ಪದಾರ್ಥ ನೆಲಕ್ಕೆ ಬಿತ್ತು. ಇದರ ಅಡಿಯಲ್ಲಿ ಶೇಖರಿಸಿ ಇಡಲ್ಪಟ್ಟ ಮರಳು ಭಾಗಕ್ಕೆ ತಗಡಿನಿಂದ ಸೀಲ್ ಮಾಡಲಾಗಿತ್ತು.
ಮಾರಾಟಗಾರನನ್ನು ದೂರವಾಣಿ ಮೂಲಕ ಸಂಪರ್ಕಿಸಿ ದಾಗ ತಾನು ಕೆಲಸ ನಿಲ್ಲಿಸುವದಾಗಿ ಯೂ ಮಾಲನ್ನು ಹಿಂದಕ್ಕೆ ಪಡೆಯುವದಾಗಿಯೂ ಮೆಲುಧ್ವನಿ ಯಲ್ಲಿ ತಿಳಿಸಿದ. ತಕ್ಷಣ ತನ್ನ ಕೆಲಸಗಾರರಿಗೆ ದೂರವಾಣಿ ಮೂಲಕ ಎಲ್ಲವನ್ನೂ ಮೊಬೈಲ್ನಲ್ಲಿ ವೀಡಿಯೋ ಮಾಡುವಂತೆ ಸೂಚಿಸಿದ. ಇದಕ್ಕೆ ಕುಟುಂಬದವರು ಆಕ್ಷೇಪಿಸಿದರು. ಕೆಲಸ ನಿಲ್ಲಿಸಲಾಯಿತು. ಮಡಿಕೇರಿಯ ವ್ಯಕ್ತಿಯೊಬ್ಬ ರೂ. 2000 ಪಾವತಿಸಿದ ಮಾಲ್ನೊಂದಿಗೆ ಅಲ್ಲಿದ್ದವರೆಲ್ಲಾ ಕಾಲ್ಕಿತ್ತರು. ಸರಳವಾಸ್ತು ಹೆಸರಿನಲ್ಲಿ, ದೇವರುಗಳ ಹೆಸರುಗಳಲ್ಲಿ ಕೊಡಗಿನ ಜನತೆಯ ಮುಗ್ಧತೆಯನ್ನು ದುರುಪಯೋಗ ಮಾಡುವ ಹಲವರ ಪಟ್ಟಿಗೆ ಇದೂ ಒಂದು ಸೇರ್ಪಡೆ.
-ಚಿದ್ದು