ಸೋಮವಾರಪೇಟೆ, ಜು. 7: ನಗರದಲ್ಲಿರುವ ಹಿರಿಯ ಕಾರ್ಮಿಕ ನಿರೀಕ್ಷಕರ ಕಚೇರಿಯು ಸಂಪೂರ್ಣ ಶಿಥಿಲಾವಸ್ಥೆಗೆ ತಲುಪಿದ್ದು, ತಕ್ಷಣ ದುರಸ್ತಿಗೊಳಿಸಲು ಕ್ರಮ ಕೈಗೊಳ್ಳಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆಯ ಪದಾಧಿಕಾರಿಗಳು ತಾಲೂಕು ತಹಶೀಲ್ದಾರ್‍ಗೆ ಮನವಿ ಸಲ್ಲಿಸಿದರು.

ಸೋಮವಾರಪೇಟೆಯಲ್ಲಿರುವ ಶಾಸಕರ ಕಚೇರಿಗೆ ಹೊಂದಿಕೊಂಡಂತೆ ಇರುವ ಕಾರ್ಮಿಕ ಇಲಾಖಾ ಕಚೇರಿಯು ಇಂದೋ ನಾಳೆಯೋ ಬೀಳುವ ಸ್ಥಿತಿಗೆ ತಲುಪಿದೆ. ಛಾವಣಿ, ಮರಗಳು ಧರಾಶಾಹಿಯಾಗಲು ಎದುರು ನೋಡುತ್ತಿದೆ. ಕಟ್ಟಡವೂ ಶಿಥಿಲಾವಸ್ಥೆಗೆ ತಲುಪಿದ್ದು, ಕಚೇರಿಯೊಳಗೆ ನೀರು ಸಂಗ್ರಹವಾಗುತ್ತಿದೆ. ಪರಿಸ್ಥಿತಿ ಹೀಗಿದ್ದರೂ ಸಹ ಸಂಬಂಧಿಸಿದವರು ಇತ್ತ ಗಮನ ಹರಿಸದೇ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಸಂಘಟನೆಯ ತಾಲೂಕು ಅಧ್ಯಕ್ಷ ಕೆ.ಎನ್. ದೀಪಕ್ ಆರೋಪಿಸಿದರು.

ಕಾರ್ಮಿಕರ ಕಚೇರಿಗೆ ಸೂಕ್ತ ಕಿಟಕಿ ಬಾಗಿಲುಗಳೂ ಇಲ್ಲ. ಬೆಳಕಿನ ವ್ಯವಸ್ಥೆಯೂ ಮರೀಚಿಕೆಯಾಗಿದೆ. ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳ ಸ್ಥಿತಿ ಶೋಚನೀಯವಾಗಿದೆ. ಸರ್ಕಾರದಿಂದಲೇ ಸರ್ಕಾರಿ ಅಧಿಕಾರಿಗಳ ಶೋಷಣೆ ನಡೆಯುತ್ತಿದ್ದು, ಮೇಲ್ಛಾವಣಿ ಕುಸಿದು ಅಧಿಕಾರಿಗಳು ಮತ್ತು ಕಾರ್ಮಿಕರಿಗೆ ತೊಂದರೆ ಉಂಟಾಗುವ ಮೊದಲು ಕಟ್ಟಡ ದುರಸ್ತಿಗೆ ಕ್ರಮಕೈಗೊಳ್ಳಬೇಕೆಂದು ಪದಾಧಿಕಾರಿಗಳು ಒತ್ತಾಯಿಸಿದರು.

ಈ ಸಂಬಂಧಿತ ಮನವಿ ಪತ್ರವನ್ನು ತಾಲೂಕು ತಹಶೀಲ್ದಾರ್ ಮಹೇಶ್, ಲೋಕೋಪಯೋಗಿ ಇಲಾಖಾ ಅಭಿಯಂತರರು ಮತ್ತು ಶಾಸಕರ ಮೂಲಕ ಸರ್ಕಾರಕ್ಕೆ ಸಲ್ಲಿಸಲಾಯಿತು. ಈ ಸಂದರ್ಭ ಕರವೇ ನಗರಾಧ್ಯಕ್ಷ ಮಂಜುನಾಥ್, ಕಾರ್ಯದರ್ಶಿ ಕೆ.ಪಿ. ರವೀಶ್, ತಾಲೂಕು ಉಪಾಧ್ಯಕ್ಷ ಚಂದ್ರು, ಸಾಹಿತ್ಯ ಘಟಕ ಅಧ್ಯಕ್ಷ ಸುದರ್ಶನ್, ನ.ಲ. ವಿಜಯ, ಪದಾಧಿಕಾರಿಗಳಾದ ನಾಗೇಶ್ ಜಗನ್ನಾಥ್ ಸೇರಿದಂತೆ ಇತರರು ಉಪಸ್ಥಿತರಿದ್ದರು.