ಗೋಣಿಕೊಪ್ಪಲು, ಜು. 7: ಮಣ್ಣಿನ ಸವೆತದಿಂದ ಮೂಲಸ್ವರೂಪ ಕಳೆದುಕೊಳ್ಳುತ್ತಿವೆ. ನದಿಪಾತ್ರದ ಸಂರಕ್ಷಣೆಗೆ ಮುಂದಾಗಿರುವ ಆರ್ಟ್ ಆಫ್ ಲಿವಿಂಗ್ ಸಂಸ್ಥೆ 5 ವರ್ಷಗಳಲ್ಲಿ 3 ಲಕ್ಷ ಗಿಡ ನೆಟ್ಟು ಸಂರಕ್ಷಿಸುವ ಯೋಜನೆಗೆ ಮುಂದಾಗಿದೆ ಎಂದು ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಶಿಕ್ಷಕರ ಸಮಿತಿ ಸಂಘಟಕ ಅಳಮೇಂಗಡ ಡಾನ್ ರಾಜಪ್ಪ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ತಾ. 9 ರಂದು ನಡೆಯುವ ಗುರುಪೂರ್ಣಿಮೆಯಂದು ನಿಟ್ಟೂರು ಸಮೀಪವಿರುವ ಲಕ್ಷ್ಮಣತೀರ್ಥ ನದಿ ದಂಡೆಯಲ್ಲಿ ವನಮಹೋತ್ಸವ ದಿನಾಚರಣೆಯಾಗಿ ಆಚರಿಸಿ ಯೋಜನೆಗೆ ಚಾಲನೆ ನೀಡಲಾಗುವದು.

ನದಿ ದಂಡೆಯಲ್ಲಿ ಜಲಚರ, ಜೇನು ನೊಣಕ್ಕೆ ಆಹಾರ ಹಾಗೂ ಮಣ್ಣು ಸವೆಯದಂತೆ ಬೇರುಗಳ ಮೂಲಕ ನದಿ ದಂಡೆಗೆ ಬಲ ನೀಡುವ ಗಿಡ ನೆಡಲು ಮುಂದಾಗಿದೆ. ಆರ್ಟ್ ಆಫ್ ಲಿವಿಂಗ್ ಸಂಸ್ಥೆ ಇದಕ್ಕಾಗಿ ಸುಮಾರು 4 ರಿಂದ 5 ಲಕ್ಷ ಹಣ ವ್ಯಯಿಸುತ್ತಿದೆ. ಇದರಂತೆ ಗಿಡವನ್ನು ನೆಟ್ಟು ಸ್ಥಳೀಯರ ಮೂಲಕ ಗಿಡ ಸಂರಕ್ಷಣೆಗೆ ಒತ್ತು ನೀಡಲು ಮುಂದಾಗಿದೆ. ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ತಾಂತ್ರಿಕ ಸಲಹೆ ಹಾಗೂ ಗಿಡಗಳ ಉತ್ಪಾದನೆಯ ಸಹಕಾರದಲ್ಲಿ ಯೋಜನೆ ರೂಪುಗೊಳ್ಳುತ್ತಿದೆ ಎಂದರು.

ಈಗಾಗಲೇ ಕೊಡಗು ವಲಯ ಅರಣ್ಯ ಸಂರಕ್ಷಣಾಧಿಕಾರಿ ಮನೋಜ್‍ಕುಮಾರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಾರುಲತಾ ಸೋಮಲ್ ಅರಣ್ಯ ಮಹಾ ವಿದ್ಯಾಲಯದ ತಜ್ಞರೊಂದಿಗೆ ಚರ್ಚೆ ನಡೆಸಿ ಯೋಜನೆ ರೂಪಿಸಿದೆ. ನದಿದಂಡೆಯಲ್ಲಿ ವಾತಾವರಣಕ್ಕೆ ಒಗ್ಗಿಕೊಳ್ಳುವ ಗಿಡವನ್ನು ನೆಟ್ಟು ಸ್ಥಳೀಯರ ಸಹಕಾರದಲ್ಲಿ ಪೋಷಿಸಲಾಗುವದು ಎಂದರು.

ಪೊನ್ನಂಪೇಟೆ ಅರಣ್ಯ ಮಹಾ ವಿದ್ಯಾಲಯದ ಸಿಲ್ವಿಕಲ್ಚರ್ ವಿಭಾಗ ಮುಖ್ಯಸ್ಥ ಡಾ. ರಾಮಕೃಷ್ಣ ಹೆಗಡೆ ಮಾತನಾಡಿ, ನದಿ ದಂಡೆಗಳು ಮಣ್ಣಿನ ಸವೆತದಿಂದ ನದಿಪಾತ್ರದ ಮೂಲವನ್ನೇ ಕಳೆದುಕೊಂಡಿವೆ. ಇದರಿಂದಾಗಿ ಹೊಳೆಯ ನಿಜ ಸ್ವರೂಪ ಬದಲಾಗಿದೆ. ಸಮೀಪದ ಜಾಗಗಳು ನದಿಯಾಗಿ ತಿರುವು ಪಡೆದುಕೊಂಡಿರುವದು ದೊಡ್ಡ ಸಮಸ್ಯೆಯಾಗಿದೆ. ಕುರ್ಚಿ ಗ್ರಾಮದಿಂದ ನಾಲ್ಕೇರಿ, ಹರಿಹರ, ಕಾನೂರು, ನಿಟ್ಟೂರು, ಮಲ್ಲೂರು ಮೂಲಕ ಹರಿಯುವ ಲಕ್ಷ್ಮಣತೀರ್ಥ ನದಿಯ ದಂಡೆಯಲ್ಲಿ ಆರಂಭದ ಹಂತ ಗಿಡಗಳನ್ನು ನೆಡಲಾಗುತ್ತಿದೆ. ಈ ಬಾರಿ 5 ಸಾವಿರ ಗಿಡಗಳನ್ನು ನದಿ ದಂಡೆಯಲ್ಲಿ ಸಿಗುವ ಸ್ಥಳಾವಕಾಶದಂತೆ ನೆಡಲಾಗುತ್ತಿದೆ. ಹೊಂಗೆ, ಸುರ ಹೊನ್ನೆ, ಸಾಲುದೂಪ, ಕಾಡುಮಾವು, ಹೊಳೆಮತ್ತಿ, ಹೊಳೆಹಿಪ್ಪೆ ಇಂತಹ ಗಿಡಗಳನ್ನು ನೆಡಲಾಗುತ್ತಿದೆ. ಗಿಡಗಳು ಬೆಳೆದಂತೆ ಜಲಚರಗಳಿಗೆ ಆಹಾರ ದೊರಕಬೇಕು, ಜೇನು ನೊಣಗಳಿಗೆ ಹೂವಿನಿಂದ ಜೇನು ದೊರೆಯುವಂತಾಗಬೇಕು ಹಾಗೂ ನದಿಯಲ್ಲಿನ ಸವೆತ ನಿಯಂತ್ರಣಕ್ಕೆ ಬರಬೇಕು ಎಂಬ ಚಿಂತನೆಯಲ್ಲಿ ಗಿಡಗಳ ಆಯ್ಕೆ ಮಾಡಲಾಗುತ್ತಿದೆ ಎಂದರು.