ಮಡಿಕೇರಿ, ಜು. 7: ಪೌರ ಕಾರ್ಮಿಕರ ಹಿತ ಕಾಯುವದು ಮತ್ತು ಅವರನ್ನು ಸಮಾಜದ ಮುಖ್ಯ ವಾಹಿನಿಗೆ ತರುವದು ಸಮಾಜದ ಕೆಲಸವಾಗಬೇಕು ಎಂದು ಗಣ್ಯರು ಕರೆ ನೀಡಿದ್ದಾರೆ. “ಪ್ರಜಾಸತ್ಯ”ಪತ್ರಿಕೆಯ ವತಿಯಿಂದ ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ಇಂದು ನಡೆದ ಪೌರ ಕಾರ್ಮಿಕರಿಗೆ ನೀಡಲಾಗುವ ಮೂರು ಹಂತದ ಹೆಪಟೈಟಿಸ್ ಬಿ ಲಸಿಕಾ ಕಾರ್ಯಕ್ರಮದ ಸಮಾರೋಪ ಸಮಾರಂಭ ನಡೆಯಿತು.

ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ನಗರ ಸಭಾಧ್ಯಕ್ಷೆ ಕಾವೇರಮ್ಮ ಸೋಮಣ್ಣ ನಗರದ ಶುಚಿತ್ವ ಕಾಪಾಡುವ ಹಾಗೂ ಎಲ್ಲಾ ಜನರ ಆಗುಹೋಗುಗಳಲ್ಲಿ ಪ್ರಮುಖ ಪಾತ್ರ ವಹಿಸುವ ಪೌರ ಕಾರ್ಮಿಕರು ಎಷ್ಟೇ ಕೆಲಸ ಮಾಡಿದರೂ ಜನರಿಗೆ ತೃಪ್ತಿ ಇರುವದಿಲ್ಲ.ಅವರ ಆರೋಗ್ಯವನ್ನು ಕಾಪಾಡುವ ದೃಷ್ಟಿಯಿಂದ ಹಾಗೂ ಅವರ ಮೇಲಿನ ಕಾಳಜಿಯಿಂದ ಈ ಲಸಿಕಾ ಕಾರ್ಯಕ್ರಮವನ್ನು ಆಯೋಜಿಸಿ ರುವದು ಸಂತಸದಾಯಕ ವಾಗಿದೆ ಎಂದರು.

ಉಪಾಧ್ಯಕ್ಷ ಟಿ.ಎಸ್.ಪ್ರಕಾಶ್ ಮಾತನಾಡಿ ಪೌರ ಕಾರ್ಮಿಕರಿಗಾಗಿ ಸರ್ಕಾರದಿಂದಲೂ ಹಲವಾರು ಕಾಳಜಿಯುತ ಕಾರ್ಯಕ್ರಮಗಳು ಆಗುತ್ತಿದ್ದು ಸಫಾಯಿ ಕರ್ಮಚಾರಿಗಳಿಗೆ ಅತ್ಯಾಧುನಿಕ ಸೌಕರ್ಯಗಳನ್ನು ಹೊಂದಿದ ಆಸ್ಪತ್ರೆಯಲ್ಲಿ ಚಿಕಿತ್ಸೆ ಮತ್ತು ಚಿಕಿತ್ಸೆಯ ವೆಚ್ಚ ಭರಿಸುವಂತಹ ಯೋಜನೆ ಜಾರಿಯಲ್ಲಿದೆ.ಆದರೆ ಇಂದು ಇಲ್ಲಿ ಆಗುತ್ತಿರುವ ಕಾರ್ಯಕ್ರಮವು ಸಮಾಜ ಕಾರ್ಯವಾಗಿದೆ. ಇಂದು ಪೌರ ಕಾರ್ಮಿಕರು ಮಳೆ,ಬಿಸಿಲೆನ್ನದೆ ,ರಜೆಯೂ ಮಾಡದೆ ಕೆಲಸ ನಿರ್ವಹಿಸುತ್ತಿದ್ದಾರೆ.ಇವರು ರಜೆ ಮಾಡಿದರೆ ರಸ್ತೆಯಲ್ಲಿ ನಡೆಯಲೂ ಸಾಧ್ಯವಿಲ್ಲ. ಕಾರ್ಮಿಕರಿಗೆ ಈಗ ನೀಡುತ್ತಿರುವ 14 ಸಾವಿರ ವೇತನ ಇನ್ನೂ ಹೆಚ್ಚಳವಾಗಬೇಕು. ಸುದರ್ಶನ ಬಡಾವಣೆಯಲ್ಲಿ 35 ಸೆಂಟ್ ಜಾಗವನ್ನು ನೀಡಲು ಸ್ಥಳ ನಿಗದಿಪಡಿಸಲಾಗಿದ್ದು ಈ ಕಾರ್ಯ ಆದಷ್ಟು ಶೀಘ್ರದಲ್ಲಿ ಪ್ರಾರಂಭವಾಗಲಿ. ಡಾ. ನವೀನ್‍ಕುಮಾರ್ ಅವರ ಸೇವಾ ಕಾರ್ಯ ಇದೇ ರೀತಿ ಮುಂದು ವರೆಯಲಿ ಎಂದರು.

ಡಿಹೆಚ್‍ಒ ಶ್ರೀರಂಗಪ್ಪ ಮಾತನಾಡಿ ಹೆಪಟೈಟಿಸ್ ಬಿ ಚುಚ್ಚು ಮದ್ದು ಲಸಿಕಾ ಕಾರ್ಯಕ್ರಮವು ಉತ್ತಮ ಕಾರ್ಯಕ್ರಮವಾಗಿದೆ. ಇಂದು ಪ್ರಪಂಚದಲ್ಲಿ ಶೇ.30 ಜನರಿಗೆ ಈ ಖಾಯಿಲೆ ಬರುತ್ತದೆ ಎಂದರಲ್ಲದೆ ಹೆಪಟೈಟಿಸ್ ಬಿ ರೋಗ ಲಕ್ಷಣಗಳು, ಕಾರಣಗಳ ಕುರಿತು ಮಾಹಿತಿ ನೀಡಿದರು.

ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಕಾರ್ಯಪ್ಪ ಮಾತನಾಡಿ ಈ ರೀತಿಯ ಶಿಬಿರ ಉತ್ತಮ ಕಾರ್ಯಕ್ರಮವಾಗಿದ್ದು ಅದರಲ್ಲೂ ಪೌರ ಕಾರ್ಮಿಕರಿಗೆ ಹೆಪಟೈಟಿಸ್ ಬಿ ಚುಚ್ಚು ಮದ್ದು ನೀಡುತ್ತಿರುವದು ಸಂತಸಕರ ವಿಚಾರ ಎಂದರು. ಜಿಲ್ಲಾ ಯೋಜನಾ ನಿರ್ದೇಶಕರು ಮತ್ತು ಪ್ರಬಾರ ಪೌರಾಯುಕ್ತ ಸಯ್ಯದ್ ಮುನೀರ್ ಅಹಮದ್ ಮಾತನಾಡಿ ಪೌರ ಕಾರ್ಮಿಕರು ನಗರದ ನರನಾಡಿಗಳಿದ್ದಂತೆ. ಹಾಗಾಗಿ ಅವರ ಆರೋಗ್ಯದ ಕಾಳಜಿಗಾಗಿ ಈ ರೀತಿಯ ಕಾರ್ಯಕ್ರಮ ಆಯೋಜಿಸುತ್ತಿರುವದು ಉತ್ತಮ ಪ್ರಕ್ರಿಯೆಯಾಗಿದೆ.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಜಾಸತ್ಯ ಸಂಪಾದಕರು ಮತ್ತು ವ್ಯವಸ್ಥಾಪಕ ನಿರ್ದೇಶಕ ಡಾ.ಬಿ.ಸಿ.ನವೀನ್ ಕುಮಾರ್ ಮಾತನಾಡಿ ಇಂತಹ ಕಾರ್ಯಕ್ರಮ ವನ್ನು ಸಮಾಜ ಸೇವೆ ಎಂದು ಹೇಳುವದು ತಪ್ಪು ಇದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಪೌರ ಕಾರ್ಮಿಕರನ್ನು ಮುಖ್ಯ ವಾಹಿನಿಗೆ ತರುವ ಕೆಲಸವಾಗಬೇಕು .ಭಾರತ ದೇಶದಲಿ 10 ಲಕ್ಷ ಪೌರ ಕಾರ್ಮಿಕರಿ ದ್ದಾರೆ.ಸಾಕಷ್ಟು ಪೌರಕಾರ್ಮಿಕರು ದೈಹಿಕ ಮತ್ತು ಮಾನಸಿಕ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ನಗರವನ್ನು ಸ್ವಚ್ಛವಾಗಿರಿಸುವದು ಪ್ರತಿಯೊಬ್ಬರ ಜವಾಬ್ದಾರಿ. ಹಾಗಾಗಿ ನಗರವನ್ನು ಸ್ವಚ್ಛವಾಗಿರಿಸಲು ಆಧುನಿಕ ತಂತ್ರಜ್ಞಾನ ಉಪಯೋಗಿಸುವದು ಒಳ್ಳೆಯದು ಎಂದು ಸಲಹೆ ನೀಡಿದರು.

ರಾಜೇಶ್ವರಿ ಪ್ರಾರ್ಥಿಸಿ, ತಾಹಿರ್ ಸ್ವಾಗತಿಸಿದರು. ಇದೇ ಸಂದರ್ಭ ನಗರಸಭೆಯ ವತಿಯಿಂದ ಡಾ.ಬಿ.ಸಿ.ನವೀನ್ ಕುಮಾರ್ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಜಿಲ್ಲಾಸ್ಪತ್ರೆಯ ಜಿಲ್ಲಾ ಸರ್ಜನ್ ಅಬ್ದುಲ್ ಅಜೀಜ್, ನಗರಸಭಾ ಸದಸ್ಯರಾದ ಲೀಲಾ ಶೇಷಮ್ಮ, ಜುಲೇಕಾಬಿ, ಸವಿತಾ ರಾಕೇಶ್, ಅನಿತಾ ಪೂವಯ್ಯ, ಅಮೀನ್ ಮೊಹಿಸಿನ್ ಹಿರಿಯ ನಾಗರಿಕ ವೇದಿಕೆಯ ಅಧ್ಯಕ್ಷ ಜಿ.ಟಿ.ರಾಘವೇಂದ್ರ ,ಮಾರ್ಗದರ್ಶಿ ಸಂಸ್ಥೆಯ ಕಾರ್ಯದರ್ಶಿ ಕೆ.ಬಿ.ರಾಘವಯ್ಯ, ಹಿಂದುಳಿದ ವರ್ಗಗಳ ಇಲಾಖಾಧಿಕಾರಿಯಾದ ಸುರೇಶ್ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.