ಮಡಿಕೇರಿ, ಜೂ. 22: ಕೇಂದ್ರ ಸಾಹಿತ್ಯ ಅಕಾಡೆಮಿಯಿಂದ ಕೊಡಮಾಡುವ ಪ್ರತಿಷ್ಠಿತ ಯುವ ಪುರಸ್ಕಾರ್ ಪ್ರಶಸ್ತಿ ಕೊಡಗು ಜಿಲ್ಲೆಯವರಾದ ಸಾಹಿತಿ ಶಾಂತಿ ಕೆ. ಅಪ್ಪಣ್ಣ ಅವರಿಗೆ ಲಭಿಸಿದೆ.ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿವರ ಇಂದು ಪ್ರಕಟಿಸಿದ್ದು, ಶಾಂತಿ ಅವರ ‘ಮನಸು ಅಭಿಸಾರಿಕೆ' ಈ ಕಥಾ ಸಂಕಲನಕ್ಕೆ ಪ್ರಶಸ್ತಿ ಲಭಿಸಿದೆ. ಕೊಡಗು ಜಿಲ್ಲೆಯಿಂದ ಶಾಂತಿ ಹಾಗೂ ಸ್ಮಿತಾ ಅಮೃತರಾಜ್ ಅವರುಗಳ ಕೃತಿಗಳು ಶಿಫಾರಸ್ಸಾಗಿದ್ದವು. ಅಂತಿಮವಾಗಿ ಶಾಂತಿ ಅವರ ಕೃತಿಗೆ ಪ್ರಶಸ್ತಿ ಬಂದಿದೆ.

(ಮೊದಲ ಪುಟದಿಂದ) ಶಾಂತಿ ಪ್ರಸ್ತುತ ಚೆನ್ನೈನಲ್ಲಿ ರೈಲ್ವೇಸ್‍ನಲ್ಲಿ ನರ್ಸ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಹಲವಾರು ಕಥೆಗಳು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಪ್ರಜಾವಾಣಿ ಕಥಾ ಸ್ಪರ್ಧೆ ಹಾಗೂ ವರ್ತಮಾನ ಡಾಟ್‍ಕಾಂ ಮಾಧ್ಯಮಗಳು ನಡೆಸಿದ ಸ್ಪರ್ಧೆಯಲ್ಲಿ ಬಹುಮಾನ ಪಡೆದುಕೊಂಡಿದ್ದಾರೆ. ಇವರ ‘ಮನಸು ಅಭಿಸಾರಿಕೆ' ಪುಸ್ತಕಕ್ಕೆ ಛಂದ ಪುಸ್ತಕ ಬಹುಮಾನ ಹಾಗೂ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‍ನಿಂದ ಕೊಡಮಾಡುವ ಪ್ರತಿಷ್ಠಿತ ಕೊಡಗಿನ ಗೌರಮ್ಮ ಪ್ರಶಸ್ತಿ ಕೂಡ ಲಭಿಸಿದೆ.

ಕಳೆದ ಫೆಬ್ರವರಿ ತಿಂಗಳಿನಲ್ಲಿ ಇವರಿಗೆ ಕೊಡಗಿನ ಗೌರಮ್ಮ ಪ್ರಶಸ್ತಿ ನೀಡಲಾಗಿತ್ತು. ಇದೀಗ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರ ಲಭ್ಯವಾಗಿದೆ. ಕಥೆ, ಕವಿತೆ ಇವರ ಆಸಕ್ತಿಯ ಕ್ಷೇತ್ರಗಳಾಗಿದ್ದು, ಕೊಳಲು ವಾದನ ಮತ್ತು ಕಥಕ್ ನೃತ್ಯಾಭ್ಯಾಸ ಮಾಡುತ್ತಿದ್ದಾರೆ.

ಅಭಿನಂದನೆ

ಶಾಂತಿ ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿರುವ ಹಿನ್ನೆಲೆಯಲ್ಲಿ ಕೊಡಗು ಜಿಲ್ಲಾ ಕ.ಸಾ.ಪ. ಅಧ್ಯಕ್ಷ ಲೋಕೇಶ್ ಸಾಗರ್, ಮಡಿಕೇರಿ ಅಧ್ಯಕ್ಷ ಕುಡೆಕಲ್ ಸಂತೋಷ್, ಸೋಮವಾರಪೇಟೆ ಅಧ್ಯಕ್ಷ ಜವರಪ್ಪ, ವೀರಾಜಪೇಟೆ ಅಧ್ಯಕ್ಷ ಮಧೋಶ್ ಪೂವಯ್ಯ ಹಾಗೂ ಪದಾಧಿಕಾರಿಗಳು ಅಭಿನಂದನೆ ಸಲ್ಲಿಸಿದ್ದಾರೆ.