ಮಡಿಕೇರಿ, ಜೂ. 23: ವಸತಿ ನಿಲಯ ಗುತ್ತಿಗೆ ಕಾರ್ಮಿಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರಾಜ್ಯ ಸಂಯುಕ್ತ ವಸತಿ ನಿಲಯ ಕಾರ್ಮಿಕರ ಸಂಘ ಎಐಟಿಯುಸಿ ಸಂಯೋಜಿತ ನೇತೃತ್ವದಲ್ಲಿ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.

ನಗರದ ಗಾಂಧಿ ಮೈದಾನದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ಸಾಗಿದ ಪ್ರತಿಭಟನಾಕಾರರು ರಾಜ್ಯ ಸರಕಾರದ ವಿರುದ್ಧ ಧಿಕ್ಕಾರ ಕೂಗಿ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.

ಬೇಡಿಕೆಗಳು: ಈಗಾಗಲೇ ಸೇವೆಯಲ್ಲಿರುವ ನೌಕರರ ಸಮಸ್ಯೆಯನ್ನು 2014ರಲ್ಲಿ ತಿದ್ದುಪಡಿಗೊಂಡ ಹೊಸ ನೇಮಕಾತಿ ನಿಯಮಗಳಿಂದ ಹೊರಗಿಟ್ಟು ಪರಿಹರಿಸಬೇಕು. ಸೇವೆಯಲ್ಲಿರುವ ನೌಕರರ ಸೇವೆಯನ್ನು ಖಾಯಂ ಮಾಡಲು ಸಾಧ್ಯವಾಗದಿದ್ದಲ್ಲಿ ಈ ನೌಕರರನ್ನು ನಿವೃತ್ತಿಯ ವಯಸ್ಸಿನವರಿಗೆ ಅವರು ನಿರ್ವಹಿಸುತ್ತಿರುವ ಹುದ್ದೆಗಳಲ್ಲಿಯೇ ಮುಂದುವರೆಸಬೇಕು.

ಸವೋಚ್ಛ ನ್ಯಾಯಾಲಯದ ಆದೇಶದಂತೆ ಸಮಾನ ಕೆಲಸಕ್ಕೆ ಸಮಾನ ವೇತನ ಕಾಯ್ದೆ ಅನ್ವಯ ನೌಕರರಿಗೆ ಖಾಯಂ ನೌಕರರಷ್ಟೇ ವೇತನ ಹಾಗೂ ಮತ್ತಿತರರ ಸೌಕರ್ಯಗಳನ್ನು ನೀಡಿ ನಿವೃತ್ತಿಯನ್ನು ಪಡೆಯಬೇಕು. ಹೊರಗುತ್ತಿಗೆ ಪದ್ಧತಿಯನ್ನು ಕೈಬಿಟ್ಟು ಇಲಾಖೆಯಿಂದಲೇ ನೇರವಾಗಿ ವೇತನವನ್ನು ಪಾವತಿಸಬೇಕು. ಮುಂತಾದ ಬೇಡಿಕೆ ಈಡೇರಿಸುವಂತೆ ಮನವಿಯಲ್ಲಿ ಒತ್ತಾಯಿಸಲಾಯಿತು.

ಈ ಸಂದರ್ಭ ಮಾತನಾಡಿದ ಸಂಘದ ಜಿಲ್ಲಾ ಸಂಚಾಲಕ ಮಲ್ಲಿಕಾರ್ಜುನ, ಸರಕಾರ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ನೌಕರರನ್ನು ವಜಾಗೊಳಿಸಿ ಹೊಸದಾಗಿ ನೇರ ನೇಮಕಾತಿ ಪ್ರಕ್ರಿಯೆಯಲ್ಲಿ ವಸತಿ ನಿಲಯಗಳ ಹುದ್ದೆಗಳನ್ನು ಭರ್ತಿಮಾಡಲು ಸೂಚಿಸಿದೆ. ಸಮಾಜ ಕಲ್ಯಾಣ ಇಲಾಖೆಯಲ್ಲಿ ಈಗಾಗಲೇ ಸೇವೆ ಸಲ್ಲಿಸುತ್ತಿರುವ ನೌಕರರು 1985ರಿಂದ ಇಲ್ಲಿಯವರೆಗೆ ಇಲಾಖೆಯಲ್ಲಿ ಜಾರಿಯಲ್ಲಿದ್ದ ನಿಯಮಗಳನ್ವಯ ಖಾಯಂ ನೇಮಕಾತಿಗೆ ಅರ್ಹರಾಗಿದ್ದಾರೆ. ಆದರಿಂದ ಅವರು ಸೇವೆ ಸಲ್ಲಿಸುತ್ತಿರುವ ಹುದ್ದೆಗಳಲ್ಲೇ ಅವರ ಸೇವೆಯನ್ನು ಖಾಯಂಗೊಳಿಸಬೇಕು ಎಂದು ಆಗ್ರಹಿಸಿದರು.

ಇದೇ ಸಂದರ್ಭ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಜಿಲ್ಲಾಡಳಿತದ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಸಂಘದ ಜಿಲ್ಲಾ ಸಂಚಾಲಕ ಎನ್.ಮುದ್ದು ಕೃಷ್ಣ, ಯಶೋಧರ್, ಸಂಘದ ಮುಖಂಡರಾದ ರವಿ ಕುಮಾರ್, ಮೂರ್ತಿ.ಎಂ.ಆರ್, ಜಯಶೀಲ, ಯೋಗೇಶ್, ಭಾಗ್ಯಮ್ಮ ಮತ್ತಿತರರು ಹಾಜರಿದ್ದರು.