ಮಡಿಕೇರಿ, ಜೂ. 22: ಸಕಲೇಶಪುರ ಅರಣ್ಯ ಇಲಾಖಾ ಕಚೇರಿಯಲ್ಲಿ ಚಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದ ವ್ಯಕ್ತಿಯೊಬ್ಬರು ನಗರದ ಅರಣ್ಯ ಭವನದಲ್ಲಿ ನೇಣಿಗೆ ಶರಣಾಗಿರುವ ಘಟನೆ ನಡೆದಿದೆ.ಸಕಲೇಶಪುರದಲ್ಲಿ ಅರಣ್ಯ ಸಂಶೋಧನಾ ವಿಭಾಗದಲ್ಲಿ ಎಸಿಎಫ್ ಹುದ್ದೆ ಖಾಲಿ ಇದ್ದ ಕಾರಣ ಮಡಿಕೇರಿ ಅರಣ್ಯ ಸಂಶೋಧನಾ ವಿಭಾಗದ ಎಸಿಎಫ್ ಆಗಿರುವ ಪೂರ್ಣಿಮಾ ಅವರನ್ನು ಪ್ರಬಾರ ಅಧಿಕಾರಿಯಾಗಿ ಸಕಲೇಶಪುರ ವಿಭಾಗಕ್ಕೆ ನಿಯೋಜಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ನಿನ್ನೆ ದಿನ ಸಕಲೇಶಪುರದಿಂದ ಮಡಿಕೇರಿಗೆ ಅಲ್ಲಿ ಚಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದ ಮಂಜುನಾಥ್ (50) ಎಂಬವರು ಇಲಾಖಾ ವಾಹನದಲ್ಲಿ ರಾತ್ರಿ 10 ಗಂಟೆ ಸುಮಾರಿಗೆ ಪೂರ್ಣಿಮಾ ಅವರನ್ನು ಮಡಿಕೇರಿಗೆ ಕರೆ ತಂದು ಬಿಟ್ಟು ನಂತರ ಅರಣ್ಯ ಭವನದಲ್ಲೇ ತಂಗಿದ್ದರು. ಅವರು ಇಲ್ಲಿನ ವಾಚ್‍ಮೇನ್ ವಾಸುದೇವ ಜೊತೆಯಲ್ಲಿ ಉಳಿದುಕೊಂಡಿದ್ದರು.

ಬೆಳಿಗ್ಗೆ 6 ಗಂಟೆ ಸುಮಾರಿಗೆ ವಾಸುದೇವ ಅವರು ನೀರಿನ ಮೋಟರ್ ಚಾಲೂ ಮಾಡಲು ತೆರಳಿ ಹಿಂತಿರುಗುವ ಸಂದರ್ಭ ಮಂಜುನಾಥ್ ನೇಣಿಗೆ ಶರಣಾಗಿರುವದು ಕಂಡು ಬಂದಿತು ಎನ್ನಲಾಗಿದೆ. ಎರಡು ಮರಣ ಪತ್ರಗಳನ್ನು ಬರೆದಿಟ್ಟಿರುವ ಮಂಜುನಾಥ್

(ಮೊದಲ ಪುಟದಿಂದ) ಅವರು ಮೇಲಧಿಕಾರಿಗಳ ಕಿರುಕುಳ ಸಾವಿಗೆ ಕಾರಣ ಎಂದು ಬರೆದಿದ್ದು, ಸಕಲೇಶಪುರ ಡಿಸಿಎಫ್ ಅನುಪಮಾ, ಆರ್‍ಎಫ್‍ಓ ದಯಾನಂದ, ಚಾಲಕ ಸುರೇಶ್ ಎಂಬವರುಗಳು ಮರಗಳ್ಳತನ ಪ್ರಕರಣವೊಂದರ ಸಂಬಂಧ ತನಗೆ ಕಿರುಕುಳ ನೀಡುತಿದ್ದರೆಂದು ಬರೆದಿದ್ದಾರೆ ಎಂಬದಾಗಿ ಎಸ್‍ಪಿ ರಾಜೇಂದ್ರ ಪ್ರಸಾದ್ ತಿಳಿಸಿದ್ದಾರೆ.

ಮರಣ ಪತ್ರವನ್ನು ಪೊಲೀಸರು ವಶಕ್ಕೆ ತೆಗೆದುಕೊಂಡರು. ಮೃತ ಮಂಜುನಾಥ್ ಪತ್ನಿ ಹಾಗೂ ಪುತ್ರಿಯನ್ನು ಅಗಲಿದ್ದು, ಸಕಲೇಶಪುರದಿಂದ ಮಡಿಕೇರಿಗೆ ಬಂದಿದ್ದ ಪತ್ನಿ ಹಾಗೂ ಪುತ್ರಿಯ ಆಕ್ರಂದನ ಮನಕಲಕುವಂತಿತ್ತು. ಮೇಲಧಿಕಾರಿಗಳ ಕಿರುಕುಳ ಇದ್ದ ಬಗ್ಗೆ ತನ್ನೊಂದಿಗೆ ಹಲವಾರು ಬಾರಿ ಹೇಳಿಕೊಂಡಿದ್ದರು. ಇದೀಗ ಅನ್ಯಾಯವಾಗಿ ಅಂತ್ಯಕಂಡಿದ್ದಾರೆ ಎಂದು ಪತ್ನಿ ಗೋಳಾಡುತ್ತಿದ್ದರು. ಮೃತರ ಸಂಬಂಧಿಕರು ಅರಣ್ಯ ಇಲಾಖೆಯ ಉನ್ನತಾಧಿಕಾರಿಗಳು ಸ್ಥಳಕ್ಕೆ ಬರುವವರೆಗೂ ಮೃತದೇಹವನ್ನು ಕೊಂಡೊಯ್ಯಲು ಬಿಡುವದಿಲ್ಲ ಎಂದು ಪಟ್ಟು ಹಿಡಿದಿದ್ದರು. ಪೊಲೀಸರು ಮನವೊಲಿಸಿದ ಬಳಿಕ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಸಾಗಿಸಲಾಯಿತು. ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ಪತ್ನಿ ನೀಡಿದ ದೂರಿನನ್ವಯ ಪ್ರಕರಣ ದಾಖಲಾಗಿದೆ.