ಮಡಿಕೇರಿ, ಜೂ. 22 : ಎಸ್‍ಡಿಪಿಐ ಸಂಸ್ಥಾಪನಾ ದಿನಾಚರಣೆ ಆಚರಿಸಲಾಯಿತು. ದಿನಾಚರಣೆ ಅಂಗವಾಗಿ ನಗರದ ಪಕ್ಷದ ಕಚೇರಿಯಲ್ಲಿ ಜಿಲ್ಲಾಧ್ಯಕ್ಷ ಅಮೀನ್ ಮೊಹಿಸಿನ್ ಪಕ್ಷದ ಧ್ವಜಾರೋಹಣ ನೆರವೇರಿಸಿದರು.ಬಳಿಕ ಮಾತನಾಡಿದ ಅವರು, ಪಕ್ಷದ ಸಂಸ್ಥಾಪನಾ ದಿನ ಕೇವಲ ಆಚರಣೆಗೆ ಸೀಮಿತವಲ್ಲ. ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತನಿಗೂ ಸಮಾಜದಲ್ಲಿ ಬಹಳಷ್ಟು ಜವಾಬ್ದಾರಿಗಳಿದ್ದು, ಈ ನಿಟ್ಟಿನಲ್ಲಿ ಅಂಬೇಡ್ಕರ್ ಅವರ ಕನಸಿನಂತೆ ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಎಂಬ ಧ್ಯೇಯದೊಂದಿಗೆ ರಾಷ್ಟ್ರ ಕಟ್ಟಲು ಮುಂದಾಗಬೇಕೆಂದರು. ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವವರು ಜನವಿರೋಧಿ ಕಾಯ್ದೆಗಳನ್ನು ಜಾರಿಗೆ ತರುವ ಮೂಲಕ ಸಮಸ್ಯೆಗಳನ್ನು ಸೃಷ್ಟಿಸುತ್ತಿದ್ದು, ದೇಶದ ಆರ್ಥಿಕ ಪ್ರಗತಿ ಕುಂಟಿತವಾಗಿದೆ ಎಂದು ಆರೋಪಿಸಿದರು. ನಂತರ ಹಿಂದೂಸ್ತಾನ್ ಶಾಲೆಯ ವಿದ್ಯಾರ್ಥಿಗಳಿಗೆ ಸ್ವೆಟರ್ ವಿತರಣೆ ಮಾಡಲಾಯಿತು.

ಈ ಸಂದರ್ಭ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಅಡ್ಕಾರ್, ಉಪಾಧ್ಯಕ್ಷ ಲಿಯಾಕತ್ ಅಲಿ, ಜಿಲ್ಲಾ ಸಮಿತಿ ಸದಸ್ಯ ನೂರುದ್ದೀನ್, ಮಡಿಕೇರಿ ನಗರ ಅಧ್ಯಕ್ಷ ಪೀಟರ್, ಕಾರ್ಯದರ್ಶಿ ಮುಸ್ತಫ, ನಗರ ಸಭಾ ಸದಸ್ಯ ಮನ್ಸೂರ್, ಪಿಎಫ್‍ಐ ಜಿಲ್ಲಾಧ್ಯಕ್ಷ ಹ್ಯಾರಿಸ್, ಆಟೋ ಯೂನಿಯನ್ ಅಧ್ಯಕ್ಷ ನಯಾಝ್ ಸೇರಿದಂತೆ ಮತ್ತಿತರರು ಇದ್ದರು.