ಮಡಿಕೇರಿ, ಜೂ. 22: ಬೆಂಗಳೂರಿನಿಂದ ಮೈಸೂರು; ಮೈಸೂರಿನಿಂದ ಮಡಿಕೇರಿ; ಮಡಿಕೇರಿಯಿಂದ ಮಾಣಿವರೆಗೆ ಪ್ರಸ್ತುತ ಇರುವ ರಾಜ್ಯ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಪರಿವರ್ತಿಸಲು ಕೇಂದ್ರ ಸರಕಾರ ಯೋಜನೆ ಸಿದ್ಧಪಡಿಸಿದ್ದು, ಒಂದೆರೆಡು ವರ್ಷಗಳಲ್ಲಿ ಕಾರ್ಯರೂಪಕ್ಕೆ ಬರುವ ಸಾಧ್ಯತೆಗಳಿವೆ.2014ರಲ್ಲೇ ಈ ಯೋಜನೆ ಸಿದ್ಧಗೊಂಡಿದ್ದು, ಬೆಂಗಳೂರು, ಮೈಸೂರು, ಮಡಿಕೇರಿ, ಮಾಣಿ ರಾಜ್ಯ ಹೆದ್ದಾರಿಯನ್ನು 275 ರಾಷ್ಟ್ರೀಯ ಹೆದ್ದಾರಿಯನ್ನಾಗಿ ಮಾಡಿ ಮೇಲ್ದರ್ಜೆಗೇರಿಸುವ ನಿಟ್ಟಿನಲ್ಲಿ ಕರ್ನಾಟಕ ಸರಕಾರದ ರಾಷ್ಟ್ರೀಯ ಹೆದ್ದಾರಿ ಇಲಾಖೆಯು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಈ ಸಂಬಂಧ ಅಧ್ಯಯನ ನಡೆಸಲು ಜವಾಬ್ದಾರಿ ವಹಿಸಿದೆ.

ಅದರಂತೆ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಸಂಬಂಧ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಖಾಸಗಿ ಏಜೆನ್ಸಿಗಳ ಮೂಲಕ ಬೆಂಗಳೂರಿನಿಂದ ಮಾಣಿಯವರೆಗೆ ಸರ್ವೆ ಮಾಡಲಿದೆ. ಪ್ರಸ್ತುತ ಇರುವ ರಾಜ್ಯ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿಸಲು ಯಾವ ರೀತಿ ಸಾಧ್ಯತೆಯಿದೆ, ಎಲ್ಲೆಲ್ಲಿ ಭೂಸ್ವಾಧೀನವಾಗಬೇಕಿದೆ, ಬೈಪಾಸ್ ಅಗತ್ಯ ಎಲ್ಲೆಲ್ಲಿದೆ? ಇದರಿಂದ ಅನುಕೂಲಗಳೇನು? ಅನಾನುಕೂಲಗಳೇನು? ಎಂಬದರ ಬಗ್ಗೆ ಸಮಗ್ರವಾಗಿ ಅಧ್ಯಯನ ಮಾಡಿ ಏಜೆನ್ಸಿ ವರದಿ ತಯಾರಿಸಲಿದೆ. ಈ ಅಧ್ಯಯನಕ್ಕಾಗಿ 1 ವರ್ಷಗಳ ಅವಧಿಯನ್ನು ನೀಡಲಾಗಿದೆ. ರಾಜ್ಯ ಹೆದ್ದಾರಿ ಕಾಮಗಾರಿ ಕೈಗೊಂಡ ಕೆಆರ್‍ಡಿಸಿಎಲ್ ಸಂಸ್ಥೆಯ ಒಪ್ಪಂದದಂತೆ

(ಮೊದಲ ಪುಟದಿಂದ) ಕೆಲ ವರ್ಷಗಳ ಕಾಲ ನಿರ್ವಹಣೆಯನ್ನು ಮಾಡಿದ್ದು, ಇದೀಗ ಆ ಸಂಸ್ಥೆಯಿಂದ ಹೆದ್ದಾರಿ ಪ್ರಾಧಿಕಾರ ಜವಾಬ್ದಾರಿಯನ್ನು ವಹಿಸಿಕೊಂಡಿದೆ. ಪ್ರಸ್ತುತ ರಸ್ತೆಗಳಲ್ಲಿ ಕಂಡುಬರುವ ರಿಫ್ಲೆಕ್ಟರ್ ವಿಭಜಕ, ಜೀóಬ್ರಾ ಕ್ಸಾಸಿಂಗ್, ತಿರುವು, ಸೂಚನೆಗಳನ್ನು ಅಳವಡಿಸಿರುವದು ಕೂಡ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವೇ.

ಹತ್ತು ಪಥಗಳು...

ಪ್ರಸ್ತುತ ರಾಜ್ಯ ಹೆದ್ದಾರಿ ನಾಲ್ಕು ಪಥಗಳಿಂದ ಕೂಡಿದ್ದು, ಅದನ್ನು 6 ಪಥಗಳನ್ನಾಗಿ ಮಾಡಲಾಗುತ್ತದೆ. ಎರಡೂ ಬದಿಗಳಲ್ಲೂ ಎರಡೆರಡು ಪಥಗಳಲ್ಲಿ ಸರ್ವೀಸ್ ಲೈನ್‍ಗಳನ್ನು ಮಾಡುವ ಮೂಲಕ ಒಟ್ಟು ಹತ್ತು ಪಥಗಳು ನಿರ್ಮಾಣಗೊಳ್ಳಲಿವೆ. 200 ಅಡಿ ವಿಸ್ತೀರ್ಣ ಹೊಂದಿರುತ್ತದೆ. ಉದ್ದೇಶಿತ ಯೋಜನೆಯಲ್ಲಿ ಹತ್ತು ಪಥಗಳ ರಸ್ತೆ ನಿರ್ಮಾಣದ ಗುರಿ ಹೊಂದಲಾಗಿದೆಯಾದರೂ, ಆಯಾ ನಗರಗಳ ವಾಹನ ಸಂಚಾರ ದಟ್ಟಣೆಗೆ ಅನುಗುಣವಾಗಿ ಪಥಗಳೆಷ್ಟು ಎಂಬ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ.

ಎಲ್ಲಿಂದ ಎಲ್ಲಿಗೆ...?

ಬೆಂಗಳೂರಿನ ನೈಸ್ ರಸ್ತೆ ಹೊರತುಪಡಿಸಿ ಮುಂದಕ್ಕೆ ಮೈಸೂರಿನವರೆಗೆ 117 ಕಿ.ಮೀ., ಮೈಸೂರಿನಿಂದ ಮಡಿಕೇರಿವರೆಗೆ 110 ಕಿ.ಮೀ., ಮಡಿಕೇರಿಯಿಂದ ಮಾಣಿಗೆ 90 ಕಿ.ಮೀ. ಹೀಗೆ ಒಟ್ಟು 317 ಕಿ.ಮೀ. ರಾಜ್ಯ ಹೆದ್ದಾರಿಯು ರಾಷ್ಟ್ರೀಯ ಹೆದ್ದಾರಿಯಾಗಿ ಮಾರ್ಪಾಡಾಗಲಿದೆ.

ಸಾವಿರಾರು ಕೋಟಿ ವೆಚ್ಚ

ರಾಷ್ಟ್ರೀಯ ಹೆದ್ದಾರಿ ಯೋಜನೆಗಾಗಿ ಸಾವಿರಾರು ಕೋಟಿ ರೂಪಾಯಿ ವ್ಯಯಿಸಲಾಗುತ್ತಿದೆ. ರಸ್ತೆ ನಿರ್ಮಾಣಕ್ಕಾಗಿ 4,600 ಕೋಟಿ ರೂ.ಗಳನ್ನು ಮೀಸಲಿಡಲಾಗಿದ್ದು, ಕಾಮಗಾರಿ ವೇಳೆ ಭೂಸ್ವಾಧೀನ ಮಾಡಿಕೊಳ್ಳಬೇಕಾದ ಅಗತ್ಯ ಕಂಡುಬಂದರೆ ಅದಕ್ಕಾಗಿ 2,700 ಕೋಟಿ ರೂ.ಗಳನ್ನು ಸರಕಾರ ತೆಗೆದಿಟ್ಟಿದೆ.