ಸುಂಟಿಕೊಪ್ಪ, ಜೂ. 22: ಇತ್ತೀಚೆಗೆ 7ನೇ ಹೊಸಕೋಟೆಯಲ್ಲಿ ಚಾಂಪಿಯನ್ ಟ್ರೋಫಿ ಕ್ರಿಕೆಟ್ ಪಂದ್ಯಾಟದ ಫೈನಲ್‍ನಲ್ಲಿ ಭಾರತದ ವಿರುದ್ಧ ಪಾಕಿಸ್ತಾನ ಗೆಲುವು ಸಾಧಿಸಿದ್ದ ಸಂದರ್ಭ ಕೆಲ ಮಂದಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದ್ದು, ಆರೋಪಿಗಳನ್ನು ಬಂಧಿಸಲಾಗಿತ್ತು ಆನಂತರ ಹಿಂದೂಪರ ಸಂಘಟನೆಯಿಂದ ಪ್ರತಿಭಟನೆಯೂ ನಡೆದಿತ್ತು. ಈ ಬಗ್ಗೆ ಶಾಂತಿ ಸುವ್ಯವಸ್ಥೆ ಕಾಪಾಡಲು ಸುಂಟಿಕೊಪ್ಪ ಠಾಣೆಯಲ್ಲಿ ಶಾಂತಿ ಸಭೆ ನಡೆಸಲಾಯಿತು.

ಕುಶಾಲನಗರ ವಿಭಾಗದ ಡಿವೈಎಸ್‍ಪಿ ಸಂಪತ್‍ಕುಮಾರ್ 7ನೇ ಹೊಸಕೋಟೆಯ ಹಿಂದೂ ಹಾಗೂ ಮುಸ್ಲಿಂ ಪ್ರಮುಖರನ್ನು ಉದ್ದೇಶಿಸಿ ಮಾತನಾಡಿ, ಭಾರತದಲ್ಲಿ ಎಲ್ಲಾ ಭಾಷೆ ಧರ್ಮದವರು ನೆಲೆಸಿದ್ದಾರೆ. ನಾವು ಒಗ್ಗಟಿನಿಂದ ಜೀವನ ನಡೆಸಿದರೆ ದೇಶ ಸುಭೀಕ್ಷೆ ಕಾಣಲಿದೆ ಯಾವದೇ ಧರ್ಮದವರಾದರೂ ಭಾರತ ಮಾತೆಗೆ ಅವಮಾನ ಮಾಡುವ ಕೆಲಸ ಮಾಡಬಾರದು. ಮುಂದೆ ಅಹಿತಕರ ಘಟನೆ ನಡೆಯದಂತೆ ಎಚ್ಚರ ವಹಿಸುವಂತಾಬೇಕೆಂದರು.

ವೃತ್ತನಿರೀಕ್ಷಕ ಕ್ಯಾತೆಗೌಡ ಮಾತನಾಡಿ, ಯಾವದೇ ಜಾತಿ ಧರ್ಮದಲ್ಲಿ ಜನಿಸಿದರೂ ಪ್ರತಿಯೊಬ್ಬರು ಮನುಷ್ಯತ್ವವನ್ನು ರೂಢಿಸಿಕೊಂಡರೆ ಸಮಾಜದಲ್ಲಿ ಅಶಾಂತಿಗೆ ಅವಕಾಶವಿರುವದಿಲ್ಲ ಎಂದರು.

ಈ ಸಂದರ್ಭ ಸುಂಟಿಕೊಪ್ಪ ಠಾಣಾಧಿಕಾರಿ ಹೆಚ್.ಎಸ್. ಬೋಜಪ್ಪ, 7ನೇ ಹೊಸಕೋಟೆ ಗ್ರಾ.ಪಂ.ಮಾಜಿ ಅಧ್ಯಕ್ಷ ದಾಸಂಡ ರಮೇಶ್ ಚಂಗಪ್ಪ, ಕೊಡಗರಹಳ್ಳಿ ಗ್ರಾ.ಪಂ. ಅಧ್ಯಕ್ಷ ಕೆ.ಎ.ಅಬ್ಬಾಸ್ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.