ಸೋಮವಾರಪೇಟೆ, ಮೇ 18: ‘ಬ್ಯಾಂಕ್‍ನ ಮ್ಯಾನೇಜರ್ ಮಾತನಾಡುತ್ತಿದ್ದೇನೆ’ ಎಂದು ಹೇಳಿ ಗ್ರಾಹಕರೋರ್ವರ ಎ.ಟಿ.ಎಂ. ನಂಬರ್ ಪಡೆದು ಅವರ ಖಾತೆಯಿಂದ 10 ಸಾವಿರ ರೂ. ಎಗರಿಸಿದ ಘಟನೆ ನಡೆದಿದ್ದು, ಮೋಸ ಹೋದ ಗ್ರಾಹಕರು ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಸಮೀಪದ ತೋಳೂರುಶೆಟ್ಟಳ್ಳಿ ನಿವಾಸಿ ಡಿ.ಎಲ್. ಜಗದೀಶ್ ಎಂಬವರ ಮೊಬೈಲ್‍ಗೆ ನಿನ್ನೆ ದಿನ ಕರೆ ಮಾಡಿದ ವ್ಯಕ್ತಿಯೋರ್ವರು ‘ನಾನು ಎಸ್‍ಬಿಐ ಬೆಂಗಳೂರಿನ ಗಾಂಧಿನಗರ ಶಾಖೆಯಿಂದ ಕರೆ ಮಾಡುತ್ತಿದ್ದು, ನಿಮ್ಮ ಎಟಿಎಂ ಕಾರ್ಡ್‍ನ್ನು ರಿನೀವಲ್ ಮಾಡಬೇಕು. ದಯವಿಟ್ಟು ನಿಮ್ಮ ಎಟಿಎಂ ಸಂಖ್ಯೆ ನೀಡಿ’ ಎಂದು ಹಿಂದಿ ಭಾಷೆಯಲ್ಲಿ ಮಾತನಾಡಿದ್ದಾರೆ.

ಇದನ್ನು ನಂಬಿದ ಜಗದೀಶ್ ಅವರು ತಮ್ಮ ಎಟಿಎಂ ಸಂಖ್ಯೆಯನ್ನು ಅಪರಿಚಿತ ವ್ಯಕ್ತಿಗೆ ನೀಡಿದ್ದಾರೆ. ಇದಾಗಿ ಕೆಲ ನಿಮಿಷಗಳ ನಂತರ ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಿದಾಗ ಏರ್‍ಟೆಲ್ ಮನಿ ಹೆಸರಿನಿಂದ ಒಮ್ಮೆಗೆ ರೂ. 8,899 ಹಾಗೂ ಮತ್ತೊಮ್ಮೆ 1000 ರೂಪಾಯಿ ಡ್ರಾ ಮಾಡಲಾಗಿದೆ.

ಇದರಿಂದ ತಲೆಬಿಸಿಮಾಡಿಕೊಂಡ ಜಗದೀಶ್ ಅವರು ತಮ್ಮ ಮೊಬೈಲ್‍ಗೆ ಕರೆ ಬಂದ ಸಂಖ್ಯೆ (9973878280)ಗೆ ಕರೆ ಮಾಡಿ ವಿಚಾರಿಸಿದ್ದಾರೆ. ಅತ್ತಲಿಂದ ಮಾತನಾಡಿದ ವ್ಯಕ್ತಿ ‘ನಿಮ್ಮ ಎಟಿಎಂ ಸಮಸ್ಯೆ ಬಗೆಹರಿದಿದೆ, ನಿಮ್ಮ ಮನೆಯವರ ಎಟಿಎಂ ಸಂಖ್ಯೆ ನೀಡಿದರೆ ಅವರ ಸಮಸ್ಯೆಯನ್ನೂ ಬಗೆಹರಿಸುತ್ತೇನೆ’ ಎಂದು ಭರವಸೆ ನೀಡಿದ್ದಾನೆ.

‘ನನ್ನ ಎಟಿಎಂನಿಂದ 9 ಸಾವಿರ ಹಣ ಡ್ರಾ ಮಾಡಲಾಗಿದೆ. ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿ ನಿಮ್ಮ ವಿರುದ್ಧ ಪೊಲೀಸರಿಗೆ ದೂರು ನೀಡುತ್ತೇನೆ’ ಎಂದು ಗದರಿದಾಗ ಅತ್ತಲಿಂದ ಸಂಭಾಷಣೆಯನ್ನು ಮೊಟಕುಗೊಳಿಸಲಾಗಿದೆ.

ಅಪರಿಚಿತ ವ್ಯಕ್ತಿಯೋರ್ವ ತಾನು ಬ್ಯಾಂಕ್‍ನ ವ್ಯವಸ್ಥಾಪಕನೆಂದು ಹೇಳಿಕೊಂಡು ಕರೆ ಮಾಡಿದ ಸಂದರ್ಭ ಪೂರ್ವಾಪರ ವಿಚಾರಿಸದೇ ವಿವರ ನೀಡಿದ್ದರಿಂದ ಜಗದೀಶ್ ಅವರು ರೂ. 9 ಸಾವಿರ ಹಣ ಕಳೆದುಕೊಂಡಿದ್ದಾರೆ.

ಪ್ರಸ್ತುತ ‘ವನ್ನಾಕ್ರೈ ರ್ಯಾನ್‍ಸಂವೇರ್ ಸೈಬರ್ ವೈರಸ್ ಮೂಲಕ ವಿಶ್ವದ 100ಕ್ಕೂ ಅಧಿಕ ರಾಷ್ಟ್ರಗಳ ಮೇಲೆ ಸೈಬರ್ ಧಾಳಿ ನಡೆಸಲಾಗಿದೆ. ಬ್ಯಾಂಕ್‍ನ ವ್ಯವಹಾರಗಳನ್ನು ಸ್ವಲ್ಪಮಟ್ಟಿಗೆ ತಡೆಹಿಡಿಯಿರಿ. 100ಕ್ಕೂ ಅಧಿಕ ರಾಷ್ಟ್ರಗಳ ಕೋಟ್ಯಾಂತರ ಕಂಪ್ಯೂಟರ್‍ಗಳು ಹ್ಯಾಕ್ ಆಗಿವೆ’ ಎಂಬ ಸಂದೇಶಗಳು ವ್ಯಾಟ್ಸ್‍ಅಪ್, ಫೇಸ್‍ಬುಕ್ ಮೂಲಕ ಹರಿದಾಡುತ್ತಿದ್ದು, ಇದನ್ನು ಓದಿದ ಜಗದೀಶ್ ಅವರು ಹ್ಯಾಕರ್ಸ್‍ಗಳಿಂದ ಪಾರಾಗಲು ಅಪರಿಚಿತ ಮೊಬೈಲ್ ಕರೆಗೆ ತಮ್ಮ ಬ್ಯಾಂಕ್ ವಿವರ ನೀಡಿ ಕೈಸುಟ್ಟುಕೊಂಡಿದ್ದಾರೆ.

ಇಂತಹ ಪಂಗನಾಮ ಪ್ರಕರಣಗಳು ಹಲವಷ್ಟು ಬಾರಿ ನಡೆಯುತ್ತಿದ್ದು, ಇವುಗಳ ಬಗ್ಗೆ ಮಾದÀ್ಯಮಗಳಲ್ಲಿ ವರದಿ ಪ್ರಕಟವಾಗಿ ಜಾಗೃತಿ ಮೂಡಿಸುತ್ತಿದ್ದರೂ ಸಹ ಮತ್ತೆ ಮತ್ತೆ ಇಂತಹ ನಕಲಿ ಕರೆಗಳಿಗೆ ಬಲಿಬಿದ್ದು ತಮ್ಮ ಹಣವನ್ನು ಕಳೆದುಕೊಳ್ಳುತ್ತಿರುವದು ವಿಪರ್ಯಾಸ. ಇನ್ನಾದರೂ ಈ ಬಗ್ಗೆ ಸಾರ್ವಜನಿಕರು ಜಾಗೃತರಾಗಲಿ. ನಕಲಿ ಕರೆಗಳ ಬಗ್ಗೆ ಎಚ್ಚರಿಕೆ ವಹಿಸುವಂತಾಗಲಿ!

- ವಿಜಯ್ ಹಾನಗಲ್