ಮಡಿಕೇರಿ, ಮೇ 17: ಕೊಡಗು ಜಿಲ್ಲಾಧಿಕಾರಿಯಾಗಿ ಕೇವಲ 22 ತಿಂಗಳು ಸೇವೆ ಸಲ್ಲಿಸುವ ಮೂಲಕ ಜನಾನುರಾಗಿಯಾಗಿದ್ದ ಸೌಮ್ಯ ಸ್ವಭಾವದ ಐಎಎಸ್ ಅಧಿಕಾರಿ ಅನುರಾಗ್ ತಿವಾರಿ (36) ಇನ್ನಿಲ್ಲ. ತಾ. 15.8.2013 ರಿಂದ 22.6.2015ರ ಅವಧಿಗೆ ಕೊಡಗಿನಲ್ಲಿ ಸೇವೆಯೊಂದಿಗೆ ಜಿಲ್ಲಾ ಆಡಳಿತ ಭವನ ನಿರ್ಮಾಣದ ರೂವಾರಿಯಾಗಿದ್ದು, 1981ರ ಮೇ 17 ರಂದು ಜನಸಿದ್ದ ಇವರು, ಇಂದು ತಮ್ಮ (ಮೊದಲ ಪುಟದಿಂದ) ಜನ್ಮದಿನದಂದೇ ಮೃತ್ಯುವಿಗೀಡಾ ಗಿರುವದು ದುರ್ದೈವ.2007ರ ಐಎಎಸ್ ಕರ್ನಾಟಕ ಕೇಡರ್ ಅಧಿಕಾರಿ ಅನುರಾಗ ತಿವಾರಿ ಅವರು, ಪ್ರಾರಂಭದಲ್ಲಿ ಮಧುಗಿರಿ ಉಪವಿಭಾಗಾಧಿಕಾರಿಯಾಗಿ, ತುಮಕೂರು ಪೌರಾಯುಕ್ತರಾಗಿ ಸೇವೆಯೊಂದಿಗೆ ಕೊಡಗು ಜಿಲ್ಲಾಧಿಕಾರಿಗಳಾಗಿ ನಿಯುಕ್ತಿಗೊಂಡು ಜನಮನ್ನಣೆ ಪಡೆದಿದ್ದರು.

ಬಳಿಕ ಉತ್ತರ ಕರ್ನಾಟಕದ ಬೀದರ್ ಜಿಲ್ಲಾಧಿಕಾರಿಯಾಗಿ ವರ್ಗಾವಣೆಗೊಂಡು, ಈಚೆಗೆ ರಾಜ್ಯ ಆಹಾರ ನಿಗಮ ಆಯುಕ್ತರಾಗಿ ಹೊಣೆಗಾರಿಕೆಯೊಂದಿಗೆ ಏ. 10 ರಿಂದ ಮೇ 5 ರವರೆಗೆ ಮಧ್ಯಪ್ರದೇಶದಲ್ಲಿ ಕೇಂದ್ರ ಸರಕಾರ ಆಯೋಜಿಸಿದ್ದ ವಿಶೇಷ ತರಬೇತಿಗೆ ತೆರಳಿದ್ದರು. ಅಲ್ಲಿಂದ ತಮ್ಮ ತವರು ಜಿಲ್ಲೆ ಲಕ್ನೋಗೆ ಹೋಗುವದರೊಂದಿಗೆ ಇದೇ ತಾ. 8 ರಿಂದ ಮುಂದಿನ ಜೂ. 3ರ ತನಕ ರಜೆಗಾಗಿ ರಾಜ್ಯ ಸರಕಾರಕ್ಕೆ ಬೇಡಿಕೆ ಇರಿಸಿದ್ದು, ಸರಕಾರದಿಂದ ಮಂಜೂರಾತಿ ಪಡೆಯಬೇಕಿತ್ತು.

ಉ.ಪ್ರ. ಲಕ್ನೋ ಬಹ್ರಿ ಗ್ರಾಮದ ಡಾ. ನಾರಾಯಣ ತಿವಾರಿ ದಂಪತಿ ಪುತ್ರ ಅನುರಾಗ್ ತಿವಾರಿ, ತಂದೆ - ತಾಯಿ ಜತೆಗಿಟ್ಟುಕೊಂಡು ಆ ಮಾತ್ರದಿಂದಲೇ ಪತ್ನಿಯಿಂದ ದೂರವಾಗಿ ಸಾಂಸಾರಿಕ ನೋವಿನಲ್ಲೂ ನಗುಮೊಗದಿಂದ ಜನಾನುರಾಗಿಯೂಗಿ ಜನತೆಯ ಬೇಡಿಕೆಗಳಿಗೆ ಸ್ಪಂದಿಸುತ್ತಿದ್ದರು.

ಲಕ್ನೋದ ಹಜರತ್‍ಗಂಜ್‍ನ ವೀರಾ ಬಾಯಿ ಅತಿಥಿ ಗೃಹದಲ್ಲಿ ತಂಗಿದ್ದ ಅವರು, ಇಂದು ಮುಂಜಾನೆ ವಾಯು ವಿಹಾರಕ್ಕೆ ತೆರಳಿದ ವೇಳೆ ಮೆದುಳು ರಕ್ತ ಸ್ರಾವ ತೀವ್ರಗೊಂಡು ಕುಸಿದು ಬಿದ್ದು, ಮೃತ್ಯುವಿಗೀಡಾಗಿದ್ದಾರೆ ಆಯುಕ್ತರಾಗಿದ್ದ ಐಎಎಸ್ ಅಧಿಕಾರಿ ಅನುರಾಗ್ ತಿವಾರಿ ಹಠಾತ್ ನಿಧನಕ್ಕೆ ಜಿಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ರಾಜೇಂದ್ರ ಪ್ರಸಾದ್ ತೀವ್ರ ಸಂತಾಪ ಸೂಚಿಸಿದ್ದಾರೆ.

ರಾಜ್ಯ ಆಹಾರ ನಿಗಮ ಆಯುಕ್ತರಾಗಿದ್ದ ಐಎಎಸ್ ಅಧಿಕಾರಿ ಅನುರಾಗ್ ತಿವಾರಿ ನಿಗೂಢ ಸಾವು ಆಘಾತ ಉಂಟು ಮಾಡಿದೆ ಎಂದು ಸಂಸದ ಪ್ರತಾಪ್ ಸಿಂಹ ಬಣ್ಣಿಸಿದ್ದಾರೆ. ಸಂಸದೆ ಶೋಭಾ ಕರಂದ್ಲಾಜೆ ಕೂಡ ಸಂತಾಪದೊಂದಿಗೆ, ಪ್ರಾಮಾಣಿಕ ಅಧಿಕಾರಿ ಅನುರಾಗ್ ತಿವಾರಿ ಹಠಾತ್ ಸಾವಿನ ಬಗ್ಗೆ ಉ.ಪ್ರ. ಮುಖ್ಯಮಂತ್ರಿಗಳಿಂದ ತನಿಖೆಗೆ ಕೋರಿ ಪತ್ರ ರವಾನಿಸಿದ್ದಾರೆ. ರಾಜ್ಯ ಆಹಾರ ಸಚಿವ ಯು.ಟಿ. ಖಾದರ್ ತೀವ್ರ ಸಂತಾಪ ವ್ಯಕ್ತಪಡಿಸಿ, ಅಧಿಕಾರಿ ತಿವಾರಿ ಸಾವಿನ ಬಗ್ಗೆ ಮಾಹಿತಿ ಲಭಿಸಿದ ಬಳಿಕ ಸರಕಾರ ಸೂಕ್ತ ಕ್ರಮ ಕೈಗೊಳ್ಳುವದಾಗಿ ಪ್ರಕಟಿಸಿದ್ದಾರೆ.

ಕೊಡಗು ಜಿಲ್ಲಾಧಿಕಾರಿಯಾಗಿದ್ದ ಸಂದರ್ಭ ಮಡಿಕೇರಿಯಲ್ಲಿ ಜರುಗಿದ 80ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಯಶಸ್ಸಿಗೆ ಕೈಜೋಡಿಸಿದ್ದ ಅನುರಾಗ್ ತಿವಾರಿ ಅವರ ಆತ್ಮಕ್ಕೆ ಚಿರಶಾಂತಿ ಸಿಗಲೆಂದು ಕನ್ನಡ ಸಾಹಿತ್ಯ ಪರಿಷತ್ತು ಮಡಿಕೇರಿ ತಾಲೂಕು ಘಟಕದ ಅಧ್ಯಕ್ಷ ಕುಡೆಕಲ್ ಸಂತೋಷ್ ಹಾಗೂ ಪದಾಧಿಕಾರಿಗಳು ಸಂತಾಪ ವ್ಯಕ್ತಪಡಿಸಿದ್ದಾರೆ.

* ಜಿಲ್ಲಾಧಿಕಾರಿಯಾಗಿದ್ದ ಸಂದರ್ಭ ಶ್ರೀ ಓಂಕಾರೇಶ್ವರ ದೇವಾಲಯದ ಅಭಿವೃದ್ಧಿಗೆ ಅನುದಾನ ಒದಗಿಸುವಲ್ಲಿ ಮುತುವರ್ಜಿ ವಹಿಸಿದ್ದ ಅನುರಾಗ್ ತಿವಾರಿ ಅವರ ನಿಧನಕ್ಕೆ ದೇವಾಲಯ ಸಮಿತಿ ಮಾಜಿ ಅಧ್ಯಕ್ಷ ರಮೇಶ್ ಹೊಳ್ಳ, ಮಾಜಿ ಪಾರುಪತ್ತೆಗಾರ ಚಿ.ನಾ. ಸೋಮೇಶ್ ಸಂತಾಪ ವ್ಯಕ್ತಪಡಿಸಿದ್ದಾರೆ.

* ಅನುರಾಗ್ ತಿವಾರಿ ಅವರ ನಿಧನಕ್ಕೆ ಕಾಫಿ ಮಂಡಳಿ ಮಾಜಿ ಉಪಾಧ್ಯಕ್ಷ ಡಾ. ಸಣ್ಣುವಂಡ ಕಾವೇರಪ್ಪ ಸಂತಾಪ ವ್ಯಕ್ತಪಡಿಸಿದ್ದಾರೆ.

* ಜಿಲ್ಲಾಧಿಕಾರಿಯಾಗಿದ್ದ ಸಂದರ್ಭ ಪತ್ರಕರ್ತರೊಂದಿಗೆ ಉತ್ತಮ ಬಾಂಧವ್ಯದೊಂದಿಗೆ ಸಮಾಜದ ಅಭಿವೃದ್ಧಿಗೆ ಸಹಕಾರ ನೀಡುತ್ತಿದ್ದ ಅನುರಾಗ್ ತಿವಾರಿ ಅವರ ನಿಧನಕ್ಕೆ ಕೊಡಗು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ, ಪದಾಧಿಕಾರಿಗಳು, ಸದಸ್ಯರುಗಳು ಸಂತಾಪ ವ್ಯಕ್ತಪಡಿಸಿದ್ದಾರೆ. ಮೃತರು ಸೌಮ್ಯ ಸ್ವಭಾವದೊಂದಿಗೆ ಜನಾನುರಾಗಿಯಾಗಿದ್ದರು ಎಂದು ಎಸ್‍ಡಿಪಿಐ ಜಿಲ್ಲಾ ಘಟಕ ಸಂತಾಪ ಸೂಚಿಸಿದೆ.