ಮಡಿಕೇರಿ, ಮೇ 18: ಜಿಲ್ಲೆಯಲ್ಲಿ ಇಂದು ಕೂಡ ಕಾಡಾನೆಗಳ ಸಂತತಿಯ ಗಣತಿ ಕಾರ್ಯ ಮುಂದುವರಿದಿದೆ. ನಿನ್ನೆ ನಿಖರವಾಗಿ ಕಾಡಾನೆಗಳ ಸಂಖ್ಯೆ ಸಮೀಕ್ಷೆ ನಡೆದಿದ್ದು, ಇಂದು ಕೊಡಗಿನಲ್ಲಿ ಕಾಡಾನೆಗಳು ಸಂಚರಿಸುವ ಮಾರ್ಗಗಳು ಹಾಗೂ ಚಲನವಲನ ಬಗ್ಗೆ ಮಾಹಿತಿ ಕಲೆ ಹಾಕಲಾಗಿದೆ.

ತಾ. 19 ರಂದು (ಇಂದು) ಕಾಡಾನೆಗಳು ಸಾಮೂಹಿಕವಾಗಿ ಎಲ್ಲೆಲ್ಲಿ ನೀರಿಗೆ ಬರಲಿವೆ ಮತ್ತು ಹಿಂಡುಗಳ ತಂಗುದಾಣಗಳ ವಿವರ ಸಂಗ್ರಹಿಸಲಾಗುವದು ಎಂದು ಅರಣ್ಯ ಇಲಾಖೆ ಮೂಲಗಳು ತಿಳಿಸಿವೆ.

ಬಾಣಾವರದಲ್ಲಿ: ಸೋಮವಾg Àಪೇಟೆ ಅರಣ್ಯ ಇಲಾಖೆಯ ವತಿಯಿಂದ ಅರಣ್ಯ ಇಲಾಖೆಯ ತಂಡ, ಇಲಾಖಾಧಿಕಾರಿಗಳು, ಸ್ವಯಂಸೇವಕರು, ಅರಣ್ಯ ವನ್ಯಜೀವಿ ಅಧಿಕಾರಿಗಳನ್ನೊಳಗೊಂಡಿರುವ ತಂಡವು ಸೋಮವಾರಪೇಟೆ, ಕುಶಾಲನಗರ, ಶನಿವಾರಸಂತೆ ಅರಣ್ಯ ವಲಯಗಳಲ್ಲಿ ಆನೆ ಗಣತಿಯ ಕಾರ್ಯವನ್ನು ಆರಂಭಿಸಿದೆ. ಎರಡನೇ ದಿನವಾದ ಇಂದು ಬಾಣಾವರ ಮೀಸಲು ಅರಣ್ಯ ಪ್ರದೇಶ, ಸಮೀಪದ ಚಿನ್ನೇನಹಳ್ಳಿ ಅರಣ್ಯ ಪ್ರದೇಶಗಳಲ್ಲಿ ಆನೆಗಳ ಗಣತಿ ಕಾರ್ಯ ನಡೆಯುತ್ತಿದೆ.

ಮೂರು ವಲಯಗಳಲ್ಲಿ ಕಾಡಾನೆಗಳಿರುವ ವಿಷಯ ಲಭ್ಯವಾಗಿದ್ದು, ಗಣತಿ ಕಾರ್ಯದಲ್ಲಿ ಇಲಾಖೆಯ ಅಧಿಕಾರಿಗಳು ತಲ್ಲೀನರಾಗಿದ್ದಾರೆ.

ಗಣತಿ ಕಾರ್ಯದಲ್ಲಿ ತಾಲೂಕು ಎಸಿಎಫ್ ಚಿಣ್ಣಪ್ಪ, ಅರಣ್ಯ ಇಲಾಖೆಯ ಆರ್‍ಎಫ್‍ಓ ಮೊಹಿಸಿನ್ ಭಾಷ ಸೇರಿದಂತೆ ಅರಣ್ಯ ಇಲಾಖೆಯ ಸಿಬ್ಬಂದಿಗಳು ತೊಡಗಿದ್ದಾರೆ.

*ಗೋಣಿಕೊಪ್ಪಲು: ದೇಶದಾದ್ಯಂತ ನಡೆಯುತ್ತಿರುವ ಕಾಡಾನೆ ಅಂದಾಜು ದಾಖಲಾತಿ ಕಾರ್ಯಾಚರಣೆ ಗುರುವಾರ ನಾಗರಹೊಳೆ, ಮತ್ತಿಗೋಡು, ತಿತಿಮತಿ, ಶ್ರೀಮಂಗಲ, ಮತ್ತಿಗೋಡು ಭಾಗಗಳಲ್ಲಿ ನಡೆಯಿತು. ತಿತಿಮತಿ ಎಸಿಎಫ್ ಶ್ರೀಪತಿ, ಮತ್ತಿಗೋಡು ಆರ್‍ಎಫ್‍ಓ ಕಿರಣ್‍ಕುಮಾರ್ ತಿತಿಮತಿ ಆರ್‍ಎಫ್‍ಓ ಅಶೋಕ್ ಹುನುಗುಂದ ಅವರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳು ಪಾಲ್ಗೊಂಡಿದ್ದರು.

ಗುರುವಾರ ಪರೋಕ್ಷ ವಿಧಾನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಆನೆಗಳ ಲದ್ದಿಯನ್ನು ಪರೀಕ್ಷಿಸಲಾಯಿತು. ಟ್ರಾಂಜಾಕ್ಷನ್ ಲೈನ್ ಪ್ರಕಾರ 2 ಕಿಮೀ ದೂರದಲ್ಲಿ ಬಿದ್ದಿರುವ ಆನೆಗಳ ಲದ್ದಿಯನ್ನು ಪರೀಕ್ಷಿಸಿ ಅದರ ಆಧಾರದ ಮೇಲೆ ಆನೆಗಳನ್ನು ಲೆಕ್ಕ ಹಾಕುವ ಕಾರ್ಯ ನಡೆಯಿತು. ವಿಜ್ಞಾನಿಗಳಾದ ಡಾ.ಸುರೆಂದ್ರ ವರ್ಮ, ಡಾ.ಸುಕುಮಾರ್ ಆನೆ ಲದ್ದಿಗಳನ್ನು ಪರೀಕ್ಷಿಸಿದರು.

-ನಾಗರಾಜ ಶೆಟ್ಟಿ,

ಎನ್.ಎನ್. ದಿನೇಶ್