ಸೋಮವಾರಪೇಟೆ, ಮೇ 17: ಸಮೀಪದ ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಐಗೂರು, ಕಾಜೂರು, ಯಡವನಾಡು, ಯಡವಾರೆ ವ್ಯಾಪ್ತಿಯಲ್ಲಿ ಕಾಡಾನೆ ತಡೆಗಟ್ಟುವಲ್ಲಿ ಅರಣ್ಯ ಇಲಾಖೆ ವಿಫಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಸಾರ್ವಜನಿಕರು, ಕೋವರ್‍ಕೊಲ್ಲಿ ಜಂಕ್ಷನ್ ಬಳಿ ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು.

ಇಂದು ಬೆಳಿಗ್ಗೆ ಕೋವರ್‍ಕೊಲ್ಲಿ ಜಂಕ್ಷನ್ ಬಳಿ ಜಮಾಯಿಸಿದ ಗ್ರಾಮಸ್ಥರು 9 ಗಂಟೆಯಿಂದ 10 ಗಂಟೆಯವರೆಗೆ ರಸ್ತೆ ತಡೆ ನಡೆಸಿದರು. ಪ್ರತಿಭಟನೆಯಿಂದಾಗಿ ನೂರಾರು ವಾಹನಗಳು ನಿಲುಗಡೆಗೊಳ್ಳ ಬೇಕಾಯಿತು. ಅರಣ್ಯ ಇಲಾಖಾಧಿಕಾರಿಗಳು ಸ್ಥಳಕ್ಕೆ ಆಗಮಿಸಬೇಕೆಂದು ಪಟ್ಟು ಹಿಡಿದ ಸಾರ್ವಜನಿಕರು, ಇಲಾಖೆಯ ವಿರುದ್ಧವೂ ಧಿಕ್ಕಾರ ಕೂಗಿದರು.

ಅರಣ್ಯ ಇಲಾಖೆಯ ಆರ್‍ಎಫ್‍ಓ ಮೊಹಿಸಿನ್ ಭಾಷ ಸ್ಥಳಕ್ಕೆ ಆಗಮಿಸಿದರು. ಈ ಸಂದರ್ಭ ಪ್ರತಿಭಟನಾಕಾರರು ಕಾಡಾನೆ ಹಾವಳಿ ಕುರಿತು ಇಲಾಖೆ ಅನುಸರಿಸುತ್ತಿರುವ ವಿಳಂಬ ನೀತಿಯನ್ನು ಕುರಿತು ಪ್ರಸ್ತಾಪಿಸಿದರಲ್ಲದೆ, ಇಲಾಖೆಯ ಕಾರ್ಯವೈಖರಿ ವಿರುದ್ಧ ಕಿಡಿಕಾರಿದರು.

ಅರಣ್ಯಾಧಿಕಾರಿ ‘ತನ್ನ ಜೇಬಿನಿಂದ ಹಣ ಹಾಕಿ ಸೋಲಾರ್ ಬೇಲಿ, ಕಂದಕ ನಿರ್ಮಿಸೋಕೆ ಆಗಲ್ಲ’ ಎಂದು ಉಡಾಫೆಯ ಮಾತುಗಳನ್ನು ಆಡಿದರು ಎಂದು ಅಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು ಧಿಕ್ಕಾರದ ಘೋಷಣೆ ಮೊಳಗಿಸಿದರು.

ಅರಣ್ಯ ಇಲಾಖೆಯವರು ಕೇವಲ ಬೆಲೆಬಾಳುವ ಮರಗಳ ಮೇಲೆ ಮಾತ್ರ ಕಾಳಜಿ ತೋರುತ್ತಾರೆ. ಅಲ್ಲಿರುವ ಪ್ರಾಣಿಗಳ ಬಗ್ಗೆ ಯಾವದೇ ಗಮನ ಹರಿಸುವದಿಲ್ಲ. ಉಡಾಫೆಯ ಮಾತುಗಳನ್ನು ಆಡುತ್ತಿದ್ದಾರೆ ಎಂದು ಪ್ರತಿಭಟನೆಯ ನೇತೃತ್ವ ವಹಿಸಿದ್ದ ಮಚ್ಚಂಡ ಪ್ರಕಾಶ್ ಬೆಳ್ಯಪ್ಪ ಕಿಡಿಕಾರಿದರು.

ಅರಣ್ಯಾಧಿಕಾರಿ ಮಾತನಾಡಿ, ಉನ್ನತಾಧಿಕಾರಿಗಳು ಹಾಗೂ ಸರಕಾರದ ಮಟ್ಟದಲ್ಲಿ ಚರ್ಚಿಸಿ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳುವದಾಗಿ ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆಯಲಾಯಿತು.

ಮುಂದಿನ 15 ದಿನಗಳ ಒಳಗಾಗಿ ಕಾಡಾನೆ ಹಾವಳಿಯನ್ನು ತಡೆಗಟ್ಟಲು ಶಾಶ್ವತ ಕ್ರಮಕೈಗೊಳ್ಳದಿದ್ದಲ್ಲಿ ಸೋಮವಾರಪೇಟೆ ಎಸಿಎಫ್ ಕಚೇರಿ ಎದುರು ಬೃಹತ್ ಪ್ರತಿಭಟನೆಯನ್ನು ನಡೆಸಲಾಗುವದೆಂದು ಮಚ್ಚಂಡ ಪ್ರಕಾಶ್ ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ತಾ. ಪಂ. ಸದಸ್ಯೆ ಸಬಿತ ಚನ್ನಕೇಶವ, ವಕೀಲ ಎಚ್.ಸಿ. ನಾಗೇಶ್, ಆರ್‍ಎಂಸಿ ನಿರ್ದೇಶಕ ಡಿ.ಎಸ್. ಪೊನ್ನಪ್ಪ, ಐಗೂರು ಪಂಚಾಯಿತಿ ಮಾಜಿ ಅಧ್ಯಕ್ಷ ಬಾರನ ಪ್ರಮೋದ್, ಬೇಳೂರು ಗ್ರಾ.ಪಂ. ಸದಸ್ಯ ಕಾಟ್ನಮನೆ ಹರೀಶ್, ಬೇಳೂರು ಪಂಚಾಯಿತಿ ಮಾಜಿ ಅಧ್ಯಕ್ಷ ಬಿ.ಎನ್. ಬಸವರಾಜು, ಗ್ರಾಮಸ್ಥರಾದ ಚಂದ್ರಿಕಾ ಕುಮಾರ್, ಯೋಗೇಶ್, ಭರತ್, ಬಿ.ಜಿ. ಇಂದ್ರೇಶ್ ಹಾಗೂ ಕುಸುಬೂರು, ಯಡವಾರೆ, ಐಗೂರು, ಯಡವನಾಡು, ಬೇಳೂರು ಗ್ರಾಮಸ್ಥರು ಉಪಸ್ಥಿತರಿದ್ದರು.