ಮಡಿಕೇರಿ, ಮೇ 17: ಪರಸ್ಪರ ಭಿನ್ನಾಭಿಪ್ರಾಯ ಇರುವ ಜಾತ್ಯತೀತ ಜನತಾದಳದ ನಿನ್ನೆ ನಡೆದ ಜಿಲ್ಲಾ ಸಮಿತಿ ಸಭೆಯಲ್ಲಿ ಮಾತಿನ ಜಟಾಪಟಿ ನಡೆದ ಬಗ್ಗೆ ತಿಳಿದು ಬಂದಿದೆ.

ಬಹುತೇಕ ಕಾರ್ಯಕರ್ತರು ಜಿಲ್ಲಾಧ್ಯಕ್ಷರ ನೇಮಕಾತಿ ಮಾಡಿದ ಬಳಿಕ ಸಮಿತಿಗಳನ್ನು ರಚನೆ ಮಾಡುವಂತೆ ಆಗ್ರಹಿಸಿದ್ದಾರೆ. ಈ ಜಿಲ್ಲಾ ಉಸ್ತುವಾರಿ ವಿ.ಎಂ. ವಿಜಯ ಅವರು ಇತರ ಪಕ್ಷಗಳಿಂದ ಕೆಲವರು ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತಿದ್ದು, ಈ ಹಿನ್ನೆಲೆಯಲ್ಲಿ ಸಮಿತಿ ರಚನೆ ಆದ ಬಳಿಕ ಅಧ್ಯಕ್ಷರ ನೇಮಕಾತಿ ಮಾಡುವದಾಗಿ ಪ್ರಕಟಿಸಿದ್ದಾರೆ. ಈ ಸಂದರ್ಭ ವೀರಾಜಪೇಟೆ ತಾಲೂಕಿನ ಸಮಿತಿಯ ಪಟ್ಟಿಯನ್ನು ತಾಲೂಕಿನ ಅಧ್ಯಕ್ಷರು ನೀಡಿದ್ದಾರೆ. ಆದರೆ ಮಡಿಕೇರಿ ತಾಲೂಕು ಅಧ್ಯಕ್ಷ ಡಾ. ಯಾಲದಾಳು ಮನೋಜ್ ಬೋಪಯ್ಯ ಅವರು, ಅಧ್ಯಕ್ಷರ ನೇಮಕಾತಿಯಾಗದೇ ತಾಲೂಕಿನ ಪಟ್ಟಿ ನೀಡುವದಿಲ್ಲ ಎಂದು ಹೇಳಿದ್ದಾರೆ. ಇದನ್ನು ಬೆಂಬಲಿಸಿದ ಕಾರ್ಯಕರ್ತರು ಅಧ್ಯಕ್ಷರ ನೇಮಕ ಮಾಡುವಂತೆ ಗದ್ದಲವೆಬ್ಬಿಸಿದ್ದಾರೆ. ಕಾರ್ಯಕರ್ತನೋರ್ವ ಅತಿರೇಖದಿಂದ ವರ್ತಿಸುತ್ತಿದ್ದ ಸಂದರ್ಭ ಬಿ.ಎ. ಜೀವಿಜಯ ಅವರು ಆತನನ್ನು ಸಮಾಧಾನಿಸಲು ಕೆಳಗಿಳಿದಿದ್ದಾರೆ.

ಈ ಸಂದರ್ಭದಲ್ಲಿ ಮನೋಜ್ ಬೋಪಯ್ಯ ಅವರು, ಮೈಕ್ ಹಿಡಿದು ಕಾರ್ಯಕರ್ತರನ್ನು ಸಮಾಧಾನಿಸುತ್ತಿದ್ದಂತೆ ಉಸ್ತುವಾರಿ ವಿಜಯ ಅವರು, ‘ಬೆಂಕಿ ಹಚ್ಚೋದು ನೀವೆ, ಆರಿಸೋದು ನೀವೇನಾ..?’ ಎಂದು ಕುಟುಕಿದ್ದಾರೆ. ಈ ವಿಚಾರವಾಗಿ ಇಬ್ಬರ ನಡುವೆ ವಾಕ್ಸಮರ ಏರ್ಪಟ್ಟಿದೆ. ಅಷ್ಟರಲ್ಲಿ ಕಾರ್ಯಕರ್ತರು ಕೂಡ ವೇದಿಕೆಯತ್ತ ತೆರಳಿ ಗಲಭೆ ಸೃಷ್ಟಿಯಾಗಿದೆ.

ಪರಿಸ್ಥಿತಿ ವಿಕೋಪಕ್ಕೆ ತೆರಳುವದನ್ನು ಮನಗಂಡ ವೀಕ್ಷಕರಾಗಿ ಮಂಡ್ಯದಿಂದ ಆಗಮಿಸಿದ್ದ ಶಿವಕುಮಾರ್ ಹಾಗೂ ಬಸವರಾಜು, ಜೀವಿಜಯ ಅವರುಗಳು ಉಭಯ ಕಡೆಯವರನ್ನು ಸಮಾಧಾನಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದ ಪ್ರಸಂಗ ನಡೆದಿದೆ.