ಮಡಿಕೇರಿ, ಮೇ 4: ಕೊಡಗು ಕಂದಾಯ ಇಲಾಖೆಯ ಕೆಲವು ಅಧಿಕಾರಿಗಳು ಮತ್ತು ಕೆಲ ಸಿಬ್ಬಂದಿ ಆಯಕಟ್ಟಿನಲ್ಲಿ ಕುಳಿತುಕೊಂಡು, ದಾಖಲೆಗಳನ್ನು ಮನಬಂದಂತೆ ತಿದ್ದುಪಡಿಗೊಳಿಸಿ ಗಂಟು ಮಾಡಿಕೊಳ್ಳುತ್ತಿರುವ ಬಗ್ಗೆ ಜನವಲಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತಗೊಳ್ಳತೊಡಗಿದೆ. ಇಂತಹ ಆರೋಪಕ್ಕೆ ಸಾಕ್ಷಿಯೆಂಬಂತೆ, ಕೆಲವು ಸಂಗತಿಗಳು ಬೆಳಕಿಗೆ ಬಂದಿವೆ.
ಇತ್ತೀಚೆಗೆ ಗಾಳಿಬೀಡುವಿನ ನಿವೃತ್ತ ಯೋಧರೊಬ್ಬರು ತಮ್ಮ ಭೂದಾಖಲೆ ಸರಿಪಡಿಸುವ ಸಂಬಂಧ ಅನೇಕ ಬಾರಿ ಗ್ರಾಮ ಲೆಕ್ಕಿಗರ ಕಚೇರಿಗೆ ಅಲೆದಾಡಿದರೂ, ರೂ. 50 ಸಾವಿರದಿಂದ ರೂ. 1 ಲಕ್ಷ ತನಕ ಲಂಚ ಕೇಳಿದ್ದಾಗಿ ಆರೋಪಿಸಿ, ಮೇಲಧಿಕಾರಿಗಳಿಗೆ ದೂರು ಸಲ್ಲಿಸಿದ್ದರು. ನಾಪೋಕ್ಲುವಿನ ಗ್ರಾ.ಪಂ. ಸದಸ್ಯರೊಬ್ಬರು ಹಿಂದಿನ ತಹಶೀಲ್ದಾರ್ ವಿರುದ್ಧ ದೂರು ದಾಖಲಿಸಿದ್ದರು.
ಕುಶಾಲನಗರ ಮುಳ್ಳುಸೋಗೆ ಗ್ರಾಮದ ವೃದ್ಧೆಯೊಬ್ಬರು ತಮ್ಮ ದಾಖಲೆಗಾಗಿ ಅಲೆದು ಸುಸ್ತಾಗಿ ಉಪ ವಿಭಾಗಾಧಿಕಾರಿ ವಿರುದ್ಧ ಲೋಕಾಯುಕ್ತದಲ್ಲಿ ದೂರು ನಮೂದಿಸಿದ್ದರು.
ಇದೀಗ ತೀರಾ ವಿಚಿತ್ರ ಸಂಗತಿಯೊಂದು ಬೆಳಕಿಗೆ ಬಂದಿದ್ದು, ಸಾರ್ವಜನಿಕರು ಎಚ್ಚೆತ್ತುಕೊಳ್ಳದಿದ್ದರೆ, ಯಾವದೋ ಕುಟುಂಬದ ಪೂರ್ವಾರ್ಜಿತ ಆಸ್ತಿ ಮತ್ಯಾರದೋ ವಶವಾದರೆ ಅಚ್ಚರಿಯಿಲ್ಲ!
ಪ್ರಕರಣ ಹೀಗಿದೆ: ಮಡಿಕೇರಿ ಸಮೀಪದ ಕಾಟಕೇರಿ ಗ್ರಾಮದಲ್ಲಿ ಎರಡು ದಶಕಗಳ ಹಿಂದೆ ಚಿಲ್ಲಜಮ್ಮನ ಪೊನ್ನಮ್ಮಯ್ಯ ಎಂಬವರು ಬೇರೆ ವ್ಯಕ್ತಿಯಿಂದ ಆಸ್ತಿ ಖರೀದಿಸಿ ದಾಖಲೆಗಳನ್ನು ಹೊಂದಿಕೊಂಡಿದ್ದರು. ಪ್ರಸಕ್ತ ಸಾಲಿನಲ್ಲಿ ಕೂಡ ತಮ್ಮ ಮನೆ ಜಾಗಕ್ಕೆ ಸಂಬಂಧಿಸಿದಂತೆ ಚಿಲ್ಲಜಮ್ಮನ ಪೊನ್ನಮ್ಮಯ್ಯ ಹೆಸರಿನಲ್ಲೇ ಕಂದಾಯ ಕಟ್ಟಿಕೊಂಡು ಬಂದಿದ್ದಾರೆ.
ಈ ನಡುವೆ ಅವರು ಬ್ಯಾಂಕ್ ವ್ಯವಹಾರ ಸಂಬಂಧ ಭೂಮಿ ಕಚೇರಿಯಲ್ಲಿ ನಿಯಮಾನುಸಾರ ಆರ್.ಟಿ.ಸಿ. (ಪಹಣಿ ಪತ್ರ) ಪಡೆದುಕೊಳ್ಳಲು ಮುಂದಾದಾಗ, ದಾಖಲೆಯಲ್ಲಿ ತನ್ನ ಹೆಸರಿನ ಆಸ್ತಿ ‘ಜೆಲ್ಲಜಮ್ಮನ’ ಕುಟುಂಬವೆಂದು ನಮೂದಾಗಿರುವದು ಬೆಳಕಿಗೆ ಬಂದಿದೆ. ಈ ಬಗ್ಗೆ ತಾಲೂಕು ಕಚೇರಿಯಲ್ಲಿ ವಿಚಾರಿಸಲಾಗಿ ಹಾರಿಕೆಯ ಉತ್ತರದೊಂದಿಗೆ ಗದರಿಸಿ ಕಳುಹಿಸಿದ್ದಾರೆ.
ಈ ಬಗ್ಗೆ ಸಂಬಂಧಪಟ್ಟ ಭೂ ಮಾಲೀಕರು ಮತ್ತೆ ಮಡಿಕೇರಿ ತಹಶೀಲ್ದಾರ್ ಕಚೇರಿಗೆ ಲಿಖಿತ ಅರ್ಜಿ ಸಲ್ಲಿಸಿ, ತನ್ನ ಕುಟುಂಬ ಹೆಸರು ತಪ್ಪಾಗಿರುವ ಬಗ್ಗೆ ತಿದ್ದುಪಡಿ ಕೋರಿದ್ದಾರೆ. ಅಲ್ಲದೆ, ಮೂಲ ದಾಖಲೆ (ಹಳೆಯ ಜಮಾಬಂಧಿ) ಪ್ರತಿಗೆ ಬೇಡಿಕೆ ಸಲ್ಲಿಸಿದ್ದಾರೆ.
ಅಷ್ಟರಲ್ಲಿ ಲೋಪವನ್ನು ಸರಿಪಡಿಸಬೇಕಾದ ಸಿಬ್ಬಂದಿ, ಪಹಣಿ ಪತ್ರದಲ್ಲಿ ‘ಜೆಲ್ಲಜಮ್ಮನ' ಎಂದು ಲೋಪವಿರುವದನ್ನು ಸಮರ್ಥಿಸಿಕೊಳ್ಳುವ ಯತ್ನದೊಂದಿಗೆ ಮೂಲ ದಾಖಲೆಯನ್ನು ತಿರುಚಲು ಹೋಗಿ ‘ಚಿ’ ಬದಲಿಗೆ ಕುಟುಂಬದ ಹೆಸರನ್ನು ‘ಚೆ' ಮೊದಲಕ್ಷರದಿಂದ ತಿದ್ದಿರುವದು ಗೋಚರಿಸಿದೆ.
ಅಲ್ಲದೆ ಮೂಲ ದಾಖಲೆಯಲ್ಲಿರುವ ಆಸ್ತಿ ಮಾಲೀಕರ ಹೆಸರಿನೊಂದಿಗೆ ಮತ್ತೊಬ್ಬರ ಹೆಸರನ್ನು ಕೂಡ ಸೇರಿಸಿದ್ದು, ಆ ವ್ಯಕ್ತಿಯ ಹೆಸರು ಸೇರ್ಪಡೆ ವೇಳೆಯೇ ಜಮಾಬಂದಿಯ ಮೂಲ ದಾಖಲೆ ತಿದ್ದಿರುವದು ಬಹಿರಂಗಗೊಂಡಿದೆ.
ಈಗ ಕೃಷಿ ಸಾಲಕ್ಕಾಗಿ ಬ್ಯಾಂಕ್‍ನಲ್ಲಿ ನೀಡಲಾಗುವ ದಾಖಲೆಗೂ, ತನ್ನ ಕುಟುಂಬದ ಹೆಸರಿಗೂ ತಾಳೆಯಾಗದೆ ಈ ಕೃಷಿಕ ತಾಲೂಕು ಕಚೇರಿಗೆ ಅಲೆದಾಡುವಂತಾಗಿದೆ.
ಕಂದಾಯ ಸಿಬ್ಬಂದಿ ಅಥವಾ ಜವಾಬ್ಧಾರಿಯುತರು ಎಸಗುವ ಇಂತಹ ಪ್ರಮಾದಗಳ ಬಗ್ಗೆ ಭೂ ಹಿಡುವಳಿ ಕುಟುಂಬಸ್ಥರು ಎಚ್ಚೆತ್ತುಕೊಳ್ಳಬೇಕಿದೆ. ತಪ್ಪಿದಲ್ಲಿ ಕಾನೂನಿನ ತೊಡಕಿನಲ್ಲಿ ತಾವೇ ಸಿಲುಕಬೇಕಾದೀತು. ಕಾರಣ ಯಾವದೋ ಕುಟುಂಬದ ಆಸ್ತಿ ಇನ್ಯಾರದೋ ಪಾಲಾದೀತು. ಈ ದಿಸೆಯಲ್ಲಿ ತಪ್ಪಿತಸ್ಥರ ವಿರುದ್ಧ ಕ್ರಮ ಅಗತ್ಯ.
- ಶ್ರೀಸುತ