ಸೋಮವಾರಪೇಟೆ, ಮೇ 4: ನಿರಾಶ್ರಿತರು, ಆದಿವಾಸಿಗಳ ಹೆಸರಿನಲ್ಲಿ ವೀರಾಜಪೇಟೆಯ ದಿಡ್ಡಳ್ಳಿಯಲ್ಲಿ ಬೀಡುಬಿಟ್ಟಿರುವ ನಕಲಿ ನಿರಾಶ್ರಿತರಿಗೆ ಸೋಮವಾರಪೇಟೆ ತಾಲೂಕಿನಲ್ಲಿ ನಿವೇಶನ ಕಲ್ಪಿಸಲು ಮುಂದಾಗಿರುವ ಜಿಲ್ಲಾಡಳಿತದ ಕ್ರಮವನ್ನು ಭಾರತೀಯ ಜನತಾ ಪಾರ್ಟಿ ಖಂಡಿಸುವದಾಗಿ ಪಕ್ಷದ ಜಿಲ್ಲಾ ವಕ್ತಾರ ಎಂ.ಬಿ. ಅಭಿಮನ್ಯುಕುಮಾರ್ ಹೇಳಿದ್ದಾರೆ.
ನಗರದ ಪತ್ರಿಕಾಭವನದಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ ಅವರು, ದಿಡ್ಡಳ್ಳಿಯಲ್ಲಿ ಅನೇಕ ದಶಕಗಳಿಂದ ನೆಲೆನಿಂತಿರುವ ಮೂಲ ಆದಿವಾಸಿಗಳಿಗೆ ದಿಡ್ಡಳ್ಳಿಯಲ್ಲಿಯೇ ನಿವೇಶನ ವಿತರಿಸಲು ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು. ಹೊರಭಾಗದಿಂದ ದಿಡ್ಡಳ್ಳಿಗೆ ಬಂದು ಆದಿವಾಸಿಗಳ ಸೋಗು ಹಾಕಿಕೊಂಡಿರುವವರಿಗೆ ಸೋಮವಾರಪೇಟೆ ತಾಲೂಕಿನಲ್ಲಿ ಯಾವದೇ ಕಾರಣಕ್ಕೂ ನಿವೇಶನ ಒದಗಿಸಬಾರದು. ತಾಲೂಕಿನಲ್ಲಿಯೇ ಹಲವಾರು ದಶಕಗಳಿಂದ ನೆಲೆಯಿಲ್ಲದೆ ಪರಿತಪಿಸುತ್ತಿರುವ ನಿಜವಾದ ನಿರ್ಗತಿಕರಿಗೆ ನಿವೇಶನ ನೀಡಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಪಾಲೇಮಾಡು ಮತ್ತು ದಿಡ್ಡಳ್ಳಿಯಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಲು ಹೊರಗಿನ ಮೂರನೇ ಶಕ್ತಿಗಳು ಕಾರಣವಾಗಿವೆ. ಹೋರಾಟದ ನೇತೃತ್ವ ವಹಿಸಿರುವ ಮುಖಂಡರು ದಿಡ್ಡಳ್ಳಿಯಲ್ಲಿ ತಲಾ 2 ಎಕರೆ ಜಾಗ, ಮನೆ ಒದಗಿಸುವದಾಗಿ ಮುಗ್ಧರನ್ನು ನಂಬಿಸಿ ದಾರಿ ತಪ್ಪಿಸುತ್ತಿದ್ದಾರೆ ಎಂದು ದೂರಿದರು.
ಭಜರಂಗದಳ ಸೇರಿದಂತೆ ಹಿಂದೂಪರ ಸಂಘಟನೆಗಳು ತಾ. 5 ರಂದು (ಇಂದು) ನೆಲ್ಲಿಹುದಿಕೇರಿಯಲ್ಲಿ ಹಮ್ಮಿಕೊಂಡಿರುವ ಹಿಂದೂ ಸಮಾಜೋತ್ಸವ ಹಾಗೂ ಸಂಜೆ 4 ಗಂಟೆಗೆ ಸೋಮವಾರಪೇಟೆಯಲ್ಲಿ ಜರುಗುವ ಹಿಂದೂ ಜನ ಜಾಗೃತಿ ಸಭೆಗೆ ಜಿಲ್ಲಾ ಬಿಜೆಪಿ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಅವರು ಹೇಳಿದರು.
ಗೋಷ್ಠಿಯಲ್ಲಿ ತಾಲೂಕು ಪಂಚಾಯಿತಿ ಸದಸ್ಯೆ ಹೆಚ್.ಎನ್. ತಂಗಮ್ಮ, ಬಿಜೆಪಿ ನಗರಾಧ್ಯಕ್ಷ ಎಸ್.ಆರ್. ಸೋಮೇಶ್, ಪದಾಧಿಕಾರಿ ಆನಂದ್ ಅವರುಗಳು ಉಪಸ್ಥಿತರಿದ್ದರು.