ಮಡಿಕೇರಿ ಮೇ 4: ಕಳೆದ ಒಂದು ತಿಂಗಳಿನಿಂದ ವಾಂಡರರ್ಸ್ ಸ್ಪೋಟ್ರ್ಸ್ ಕ್ಲಬ್ ಹಾಗೂ ಮ್ಯಾನ್ಸ್ ಹಾಕಿ ಅಕಾಡೆಮಿಯ ಜಂಟಿ ಆಶ್ರಯದಲ್ಲಿ ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದ 23ನೇ ವರ್ಷದ ಬೇಸಿಗೆ ಕ್ರೀಡಾ ತರಬೇತಿ ಶಿಬಿರ ಸಮಾರೋಪಗೊಂಡಿದೆ.
ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಹಾಕಿ ಕೊಡಗು ಸಂಸ್ಥೆಯ ಪ್ರಮುಖರಾದ ಪಾರ್ಥ ಚಂಗಪ್ಪ, ಬೇಸಿಗೆ ಶಿಬಿರಗಳ ಮೂಲಕ ಮಕ್ಕಳಲ್ಲಿ ಕ್ರೀಡಾಸಕ್ತಿಯನ್ನು ಮೂಡಿಸುತ್ತಿರುವದು ಶ್ಲಾಘನೀಯವೆಂದರು. ಶಿಬಿರದಲ್ಲಿ ಕಲಿತ ವಿವಿಧ ಕ್ರೀಡೆಗಳ ಸಾಮಥ್ರ್ಯವನ್ನು ಕೇವಲ ಶಿಬಿರಕ್ಕಷ್ಟೇ ಸೀಮಿತಗೊಳಿಸದೆ ನಂತರದ ದಿನಗಳಲ್ಲಿಯೂ ಅಭ್ಯಾಸವನ್ನು ಮುಂದುವರೆಸಬೇಕೆಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಮೂಡಾ ಅಧ್ಯಕ್ಷ ಚುಮ್ಮಿದೇವಯ್ಯ ಮಾತನಾಡಿ, ಕ್ರೀಡಾಪಟುಗಳು ಯೋಗಾಭ್ಯಾಸವನ್ನು ಮೈಗೂಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು. ಕ್ರೀಡೆಗಳು ದೈಹಿಕ ಆರೋಗ್ಯವನ್ನು ಕಾಪಾಡಿದರೆ ಯೋಗ ಮನಸ್ಸಿನ ಏಕಾಗ್ರತೆಗೆ ಸಹಕಾರಿಯಾಗಿದೆ ಎಂದು ಅಭಿಪ್ರಾಯಪಟ್ಟರು. ಹಿರಿಯರಾದ ಶ್ಯಾಂ ಪೂಣಚ್ಚ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಸಮಯ ಪ್ರಜ್ಞೆ ಮೂಡಿಸುವ ಮೂಲಕ ಶಿಸ್ತಿನ ಜೀವನಕ್ಕೆ ಉತ್ತೇಜನ ನೀಡಬೇಕೆಂದು ಕರೆ ನೀಡಿದರು.
ಶಿಬಿರದ ನೇತೃತ್ವ ವಹಿಸಿದ್ದ ವಾಂಡರರ್ಸ್ ಸ್ಪೋಟ್ರ್ಸ್ ಕ್ಲಬ್ನ ಪ್ರಮುಖರಾದ ಬಾಬು ಸೋಮಯ್ಯ ಮಾತನಾಡಿ, ಪ್ರತಿ ವರ್ಷ ನಡೆಸುತ್ತಿರುವ ಕ್ರೀಡಾ ಶಿಬಿರದ ಲಾಭ ಪಡೆಯುತ್ತಿರುವ ವಿದ್ಯಾರ್ಥಿಗಳು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸುತ್ತಿರುವದು ಹೆಮ್ಮೆಯ ವಿಚಾರವೆಂದರು. ಇದರ ಕೀರ್ತಿ ಶಿಬಿರದ ಸಂಸ್ಥಾಪಕÀ ದಿ. ಶಂಕರ್ ಸ್ವಾಮಿ ಅವರಿಗೆ ಸಲ್ಲಬೇಕೆಂದು ತಿಳಿಸಿದರು.
ಯೋಗ ಶಿಕ್ಷಕ ವೆಂಕಟೇಶ್ ಅವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಪ್ರಾಣಾಯಾಮ ಮಾಡಿ ಗಮನ ಸೆಳೆದರು.
ಶಿಬಿರಕ್ಕೆ ಸಹಕಾರ ನೀಡಿದ ಕ್ರೀಡಾಭಿಮಾನಿಗಳಾದ ಕಿಶನ್ ಪೂವಯ್ಯ, ಕೋಟೇರ ಮುದ್ದಯ್ಯ, ಆಸಿಫ್, ಗಣೇಶ್, ಅಶೋಕ್, ಲಕ್ಷ್ಮಣ್ ಸಿಂಗ್ ಮತ್ತಿತರ ಪ್ರಮುಖರು ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಗಣ್ಯರು ಶಿಬಿರಾರ್ಥಿಗಳಿಗೆ ಪ್ರಶಸ್ತಿ ಪತ್ರ ಹಾಗೂ ಬಹುಮಾನಗಳನ್ನು ವಿತರಿಸಿ ಪ್ರೋತ್ಸಾಹಿಸಿದರು.