ಮಡಿಕೇರಿ ಏ. 16: ನಗರದಲ್ಲಿ ನಡೆಯುತ್ತಿರುವ ಯುಜಿಡಿ ಯೋಜನೆಯ ಕಾಮಗಾರಿ ಸಂಪೂರ್ಣವಾಗಿ ಅವೈಜ್ಞಾನಿಕವಾಗಿದೆ ಎಂದು ಆರೋಪಿಸಿರುವ ಪೀಪಲ್ಸ್ ಮೂವ್‍ಮೆಂಟ್ ಫಾರ್ ಹ್ಯೂಮನ್ ರೈಟ್ಸ್ ಸಂಘಟನೆಯ ಜಿಲ್ಲಾಧ್ಯಕ್ಷ ಹರೀಶ್ ಜಿ. ಆಚಾರ್ಯ, ತಪ್ಪಿತಸ್ಥ ಅಧಿಕಾರಿಗಳನ್ನು ತಕ್ಷಣ ಅಮಾನತುಗೊಳಿಸಬೇಕೆಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಉತ್ತಮವಾದ ಎಲ್ಲಾ ರಸ್ತೆಗಳನ್ನು ಹಾಳು ಮಾಡಲಾಗಿದ್ದು, ವಾಹನ ಚಾಲಕರು ಹಾಗೂ ಪಾದಾಚಾರಿಗಳು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ಎಲ್ಲ ಕಷ್ಟ-ನಷ್ಟಗಳಿಗೂ ನಗರಸಭಾ ಸದಸ್ಯರುಗಳೇ ಹೊಣೆ ಎಂದು ಆರೋಪಿಸಿದರು. ಯುಜಿಡಿಯ ಎಲ್ಲಾ ಕಾಮಗಾರಿಗಳ ವಿರುದ್ಧ ಸೂಕ್ತ ತನಿಖೆ ನಡೆಸಿ ಯೋಜನೆಗೆ ಅನುಮೋದನೆ ನೀಡಿದವರ ವಿರುದ್ಧವೇ ಮೊದಲು ಕ್ರಮ ಕೈಗೊಳ್ಳಬೇಕು ಮತ್ತು ನಗರಸಭೆಗೆ ಆದ ನಷ್ಟವನ್ನು ಸಂಬಂಧಿಸಿದವರಿಂದಲೇ ಭರಿಸಬೇಕೆಂದು ಒತ್ತಾಯಿಸಿದರು. ಖಾಸಗಿ ಬಸ್ ನಿಲ್ದಾಣದ ಕಾಮಗಾರಿಯನ್ನು ಶೀಘ್ರ ಆರಂಭಿಸುವ ಮೂಲಕ ನಗರದ ಜನರ ಹಲವು ದಿನಗಳ ಬೇಡಿಕೆಯನ್ನು ಈಡೇರಿಸಬೇಕು ಎಂದು ಒತ್ತಾಯಿಸಿದರು.
ಚೆಸ್ಕಾಂ ಇಲಾಖೆಯಲ್ಲಿ ಸಾಕಷ್ಟು ನ್ಯೂನತೆಗಳಿದ್ದು, ಮಾಸಿಕ ಬಿಲ್ ನೀಡುವ ಸಂದರ್ಭ ಗುತ್ತಿಗೆ ಆಧಾರದ ಬಿಲ್‍ಕಲೆಕ್ಟರ್‍ಗಳು ತಮಗಿಷ್ಟ ಬಂದಷ್ಟು ದರದ ಬಿಲ್‍ನ್ನು ನೀಡಿ ತೆರಳುತ್ತಿದ್ದಾರೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ಕೊಡಗಿನಲ್ಲಿರುವ ಅರಣ್ಯ ಪ್ರದೇಶಗಳಲ್ಲಿ ವನ್ಯಜೀವಿಗಳಿಗೆ ಆಹಾರದ ಕೊರತೆ ಉಂಟಾಗಿದ್ದು, ಆಹಾರಕ್ಕೆ ಪೂರಕವಾದ ಗಿಡ ಮರಗಳನ್ನು ಬೆಳೆಸಲು ಯೋಜನೆಯೊಂದನ್ನು ರೂಪಿಸುವ ಮೂಲಕ ಸರಕಾರ ವಿಶೇಷ ಅನುದಾನ ನೀಡಬೇಕೆಂದು ಒತ್ತಾಯಿಸಿದರು.
ಗೋಷ್ಠಿಯಲ್ಲಿ ಸಂಘಟನೆಯ ಪ್ರಮುಖರಾದ ಕೋಳಿಬೈಲು ಜಯರಾಂ, ಬಷೀರ್ ಹಾಗೂ ಗಣೇಶ್ ರೈ ಉಪಸ್ಥಿತರಿದ್ದರು.