ಕುಶಾಲನಗರ, ಏ. 16: ಅಲ್ಪಸಂಖ್ಯಾತ ಕೊಡವ ಜನಾಂಗಕ್ಕೆ ರಾಜ್ಯಾಂಗ ಖಾತ್ರಿ ನೀಡುವಂತಾಗಬೇಕೆಂದು ಕೊಡವ ನ್ಯಾಷನಲ್ ಕೌನ್ಸಿಲ್ ಮುಖ್ಯಸ್ಥ ನಂದಿನೆರವಂಡ ನಾಚಪ್ಪ ಆಗ್ರಹಿಸಿದರು. ಕುಶಾಲನಗರ ಸಮೀಪದ ಬೆಟಗೇರಿಯಲ್ಲಿ ನಂದಿನೆರವಂಡ ಉತ್ತಪ್ಪ ಅವರ ಗದ್ದೆಯಲ್ಲಿ ಎಡಮ್ಯಾರ್ ಒಂದನ್ನು ಸಾಂಪ್ರದಾಯಿಕವಾಗಿ ಆಚರಿಸಿದ ನಂತರ ಸುದ್ದಿಗಾರರ ಜೊತೆ ಮಾತನಾಡಿ, ಕೊಡವ ಸಂಸ್ಕøತಿ ಬಹು ಸಂಖ್ಯಾತರ ಸಂಸ್ಕøತಿ ನಡುವೆ ನಶಿಸಿ ಹೋಗುವ ಆತಂಕ ಮೂಡಿದ್ದು, ಈ ನಿಟ್ಟಿನಲ್ಲಿ ಕೊಡವ ಹಬ್ಬ ಹರಿದಿನಗಳನ್ನು ಬಹಿರಂಗವಾಗಿ ಆಚರಿಸಲಾಗುತ್ತಿದೆ. ಸಿಎನ್‍ಸಿ ಸಂಘಟನೆ ಹಲವು ವರ್ಷಗಳಿಂದ ಎಡಮ್ಯಾರ್ 1 ಆಚರಿಸಿಕೊಂಡು ಬರುತ್ತಿದೆ ಎಂದಿದ್ದಾರೆ.

ಕೊಡವರು ಕ್ಷಾತ್ರ ಬುಡಕಟ್ಟು ಜನಾಂಗವಾಗಿದ್ದು, ಕೃಷಿ ಮತ್ತು ಪಶು ಪಾಲನೆಯು ಅವರ ಬದುಕಿನಲ್ಲಿ ಹಾಸು ಹೊಕ್ಕಾಗಿದೆ. ಭೂತಾಯಿಗೂ ಕೊಡವರಿಗೂ ಇರುವ ಅವಿನಾಭಾವ ಸಂಬಂಧದ ದ್ಯೋತಕವಾಗಿ ಪ್ರತಿ ವರ್ಷ ಎಡಮ್ಯಾರ್ 1 ರಂದು ಸಿ.ಎನ್.ಸಿ ಸಂಘಟನೆ ಭತ್ತದ ಗದ್ದೆಯಲ್ಲಿ ಜೋಡೆತ್ತಿನ ಮೂಲಕ ಸಾಂಪ್ರದಾಯಿಕ ಉಳುಮೆ ಕಾರ್ಯವನ್ನು ನಡೆಸುತ್ತಾ ಬಂದಿದೆ ಎಂದರು. ಕೊಡಗು ಜಿಲ್ಲೆಯಲ್ಲಿ ಕಳೆದ ಕೆಲ ವರ್ಷಗಳಿಂದ ಆತಂಕ ಮೂಡಿಸುವ ಬೆಳವಣಿಗೆಗಳು ಕಂಡುಬರುತ್ತಿದ್ದು ಜಿಲ್ಲೆಯಲ್ಲಿ ಬುಡಮೇಲು ಕೃತ್ಯಗಳು ನಿರಂತರವಾಗಿ ನಡೆಯುತ್ತಿರುವ ಬಗ್ಗೆ ವಿಷಾದ ವ್ಯಕ್ತಪಡಿಸಿದ ಅವರು, ಈ ಬಗ್ಗೆ ಸಂಬಂಧಿಸಿದ ಇಲಾಖೆಗಳು ಕಾರ್ಯೋನ್ಮುಖವಾಗಬೇಕಿದೆ ಎಂದು ಒತ್ತಾಯಿಸಿದರು.

ಕೊಡವರಿಗೆ ಪ್ರಸಕ್ತ ಸ್ಥಿತಿಯಲ್ಲಿ ರಕ್ಷಣೆ ಇಲ್ಲದಂತೆ ಮಾಡುವ ಹುನ್ನಾರ ನಡೆಯುತ್ತಿದೆ ಎಂದು ಅವರು ಆರೋಪಿಸಿದ್ದು ಈ ಬಗ್ಗೆ ಎಚ್ಚರವಹಿಸಬೇಕಾಗಿದೆ.

ಎಡಮ್ಯಾರ್ 1 ರ ಅಂಗವಾಗಿ ಬೆಟಗೇರಿಯಲ್ಲಿ ನಾಚಪ್ಪ ಅವರು ಗದ್ದೆಗೆ ತೆರಳುವ ಮುನ್ನ ಮನೆಯ ನೆಲ್ಲಕ್ಕಿಯಡಿಯಲ್ಲಿ ಗುರುಕಾರೋಣರಿಗೆ ಹಾಗೂ ಕಾವೇರಿ ಮಾತೆ, ಇಗ್ಗುತ್ತಪ್ಪ ದೇವರಿಗೆ ನಮನ ಸಲ್ಲಿಸಿ ಹಿರಿಯರಿಂದ ಆಶೀರ್ವಾದ ಪಡೆದರು. ಗದ್ದೆಗೆ ತೆರಳಿ ಭೂಮಿಗೆ, ಸೂರ್ಯ ದೇವರಿಗೆ ಹಾಗೂ ಜೋಡೆತ್ತುಗಳಿಗೆ ನಮನ ಸಲ್ಲಿಸಿ ಧಾರ್ಮಿಕ ವಿಧಿ-ವಿಧಾನಗಳ ಮೂಲಕ ಉಳುಮೆ ಕಾರ್ಯ ನೆರವೇರಿಸಿದರು.

ಈ ಸಂದರ್ಭದಲ್ಲಿ ನಂದಿನೆರವಂಡ ವಿಜು ಅಚ್ಚಯ್ಯ, ಪುಲ್ಲೇರ ಕಾಳಪ್ಪ ಹಾಗೂ ಮಣವಟ್ಟಿರ ಮೋಟಯ್ಯ ಇದ್ದರು. ನಂತರ ಸಂಜೆ ಗೋಣಿಕೊಪ್ಪದಲ್ಲಿ ಪಂಜಿನ ಮೆರವಣಿಗೆ ಮೂಲಕ ಜಾಗೃತಿ ಮೂಡಿಸಲಾಯಿತು.