ರುದ್ರಗುಪ್ಪೆ ಜೋಡು ಭಗವತಿ ಉತ್ಸವವರದಿ-ಅಣ್ಣೀರ ಹರೀಶ್ ಮಾದಪ್ಪ ಶ್ರೀಮಂಗಲ, ಏ. 14: ಬೇರಳಿನಾಡು ರುದ್ರಗುಪ್ಪೆ ಗ್ರಾಮದ ಶ್ರೀ ಜೋಡುಭಗವತಿ ದೇವರ ಉತ್ಸವ ತಾ. 9 ರಂದು ಪದ್ದತಿಯಂತೆ ಕೊಡಿಮರ ನಿಲ್ಲಿಸುವ ಮೂಲಕ ಉತ್ಸವ ಆರಂಭವಾಗಿದ್ದು, ವಿವಿಧ ಧಾರ್ಮಿಕ ಕೈಂಕರ್ಯಗಳು ನಡೆಯುತ್ತಿದೆ.
ತಾ.16 ರಂದು ನೆರಪು, 17 ರಂದು ದೇವರ ಅವಭೃತ ಸ್ನಾನ, ಉತ್ಸವ ಮೂರ್ತಿ ದರ್ಶನ, ವಿಶೇಷ ಪೂಜೆ ನಡೆಯಲಿದೆ. ಕೊಡಿಮರ ನಿಲ್ಲಿಸಿದ ಮಾರನೇ ದಿನ ಪದ್ದತಿಯಂತೆ ದೇವಸ್ಥಾನದ ಎದುರು ಚಪ್ಪರ ಹಾಕಲಾಗಿದೆ.
ದೇವಸ್ಥಾನದ ವಿಶೇಷವೆಂದರೆ ಒಂದೇ ದೇವಸ್ಥಾನದಲ್ಲಿ ಎರಡು ದೇವರು ಇರುವದು. ಆದ್ದರಿಂದಲೇ ಈ ದೇವಸ್ಥಾನವನ್ನು ಜೋಡಿ ಭಗವತಿ ಎಂದು, ಇಲ್ಲಿ ನೆಲೆಸಿರುವ ಅಕ್ಕತಂಗಿಯರಾದ ಈ ದೇವರನ್ನು ಶೂಲಿನಿ ಮಾಲಿನಿ ಎಂದು ಕರೆಯುತ್ತಾರೆ.
ಉತ್ಸವದ ದಿನ ಪುರಾತನ ಕಾಲದಿಂದ ನಡೆದುಬಂದಂತೆ ಕೊಡವ ಜಾನಪದ ನೃತ್ಯಗಳಾದ ಉಮ್ಮತ್ತಾಟ್, ಬೊಳಕಾಟ್, ತೇನಾಟ್, ದುಡಿಕೊಟ್ಟ್‍ಪಾಟ್ ಇತ್ಯಾದಿ ಆಚರಣೆಗಳು ನಡೆಯಲಿದೆ.
ಎಲ್ಲಾ ದೇವಸ್ಥಾನದಲ್ಲಿ ಉತ್ಸವ ಕಳೆದ ಮಾರನೇ ದಿನ ಕೊಡಿಮರವನ್ನು ಇಳಿಸುವ ಪದ್ದತಿ ಇದೆ. ಆದರೆ ಇಲ್ಲಿ ಈ ನಾಡಿನ ಪ್ರತಿಷ್ಠಿತ ಹಬ್ಬವಾದ ಪಾರಣ ಹಬ್ಬ ಮುಗಿದ ನಂತರ ಅಂದರೆ ಜೂನ್ 1 ರಂದು ಅಥವಾ ಕೊಡವ ಪಂಚಾಗದಂತೆ ಖಾದ್ಯಾರ್ ತಿಂಗಳ 18 ರಂದು ಕೊಡಿಮರ ಹಾಗೂ ಚಪ್ಪರವನ್ನು ಇಳಿಸಲಾಗುತ್ತದೆ.
ಇನ್ನೊಂದು ವಿಶೇಷ : ಮೇ 31 ರಂದು ಪ್ರಾತಃಕಾಲ ಪಕ್ಷಿಗಳು ಏಳುವ ಮೊದಲು ನಸುಕಿನಲ್ಲಿ ಕಂಡಂಗಾಲ, ಪೊದಕೇರಿ, ವಿ.ಬಾಡಗ, ಮರೋಡಿ ಮತ್ತು ಪೆಗ್ಗರಿಮಾಡ್ (2ನೇ ರುದ್ರಗುಪ್ಪೆ) ಗ್ರಾಮದ ಜನರು ಹೋಗಿ ಬೇರಳಿನಾಡ್‍ಗೆ ಒಳಪಡುವ 9 ಕೇರಿಗಳಲ್ಲಿ ಒಂದಾದ ವಿ. ಬಾಡಗ ಊರಿನ ಈಶ್ವರ ಅಂಬಲದ ಪಕ್ಕ ಕಮ್ಮಟ್ಟಪ್ಪ ಕುದುರೆಪುಂಡ (ಪುಂಡ ಎಂದರೆ ಕೊಡವ ಭಾಷೆಯಲ್ಲಿ ಬಿದಿರು)ವನ್ನು ಒಂದೊಂದು ಬಿದಿರುಗಳನ್ನು ಕಡಿದು ತರುತ್ತಾರೆ. ಬಿದಿರು ಕಡಿಯುವ ಮೊದಲು ಊರುತಕ್ಕರಾದ ಕೋಲತಂಡ ಕುಟುಂಬಸ್ಥರು ಶಾಸ್ತ್ರೋಕ್ತವಾಗಿ ಮೊದಲು ಬಿದಿರು ಕಡಿಯುತ್ತಾರೆ. ನಂತರ ಆಯಾಯ ಊರಿನ ಅಂಬಲದಲ್ಲಿಟ್ಟು ಪಾರಾಣೆ ಹಬ್ಬಕ್ಕಾಗಿ ಬಿದಿರಿನಿಂದ ಆನೆ ಮತ್ತು ಕುದುರೆಯ ಆಕೃತಿ ಮಾಡುತ್ತಾರೆ. ಆದರೆ ಬಿದಿರಿಗೆ ಕಟ್ಟೆರೋಗ ಉಂಟಾಗಿ ಬಿದಿರು ಸಂತತಿ ಸಂಪೂರ್ಣ ನಾಶವಾಗಿದೆ. ಆದರೆ ದೇವರ ಮಹಿಮೆ ಎನ್ನುವಂತೆ ಈ ಹಬ್ಬಕ್ಕೆ ಉಪಯೋಗಿಸುವ ಬಿದಿರು ಸಮೃದ್ದಿಯಾಗಿದೆ. ಬೇರೆ ಸಮಯದಲ್ಲಿ ಈ ಬಿದಿರನ್ನು ಯಾರು ಕಡಿಯುವದಿಲ್ಲ. ಅದನ್ನು ಕಡಿದರೆ ಬಿದಿರಿನಲ್ಲಿ ರಕ್ತದ ಬಣ್ಣದಲ್ಲಿ ದ್ರವ ಸುರಿಯುತ್ತದೆ ಹಾಗೂ ಬೇರೆ ಸಮಯದಲ್ಲಿ ಕಡಿದರೆ ಅಂತಹ ಕುಟುಂಬಗಳಿಗೆ ದೋಷ ಕಾಣಿಸಿಕೊಳ್ಳುತ್ತದೆ ಎನ್ನುವ ಪ್ರತೀತಿ ಇದೆ. ಇವೆಲ್ಲವೂ ದೇವರ ಮಹಿಮೆ ಎಂದು ಜನರು ನಂಬಿ ಭಕ್ತಿಭಾವದಿಂದ ಪದ್ದತಿಯಂತೆ ಉತ್ಸವ ಆಚರಿಸುತ್ತಾ ಬರುತ್ತಿದ್ದಾರೆ.
ಈ ದೇವಸ್ಥಾನದ ಮತ್ತೊಂದು ವಿಶೇಷತೆ ದೇವಸ್ಥಾನದಲ್ಲಿ ಕೊಡಿಮರ ಹಾಕಿದ ನಂತರ ನಾಡುತಕ್ಕರಾದ ಮಳವಂಡ ಕುಟುಂಬಸ್ಥರು, ದೇವತಕ್ಕರಾದ ಅಪ್ಪಡೇರಂಡ ಕುಟುಂಬಸ್ಥರು, ಭಂಡಾರತಕ್ಕರಾದ ಕೊಂಗಾಂಡ ಕುಟುಂಬಸ್ಥರು, ಊರುತಕ್ಕರಾದ ಮೂಕಚಂಡ, ಕೋಲತಂಡ, ಬೊಳ್ಳಡಿಚಂಡ ಕುಟುಂಬಸ್ಥರ ಪ್ರತಿನಿದಿಗಳು ದೇವಸ್ಥಾನದಲ್ಲಿಯೇ ಹಗಲು ರಾತ್ರಿ ಇದ್ದು ಹಬ್ಬ ಕಳೆದ ನಂತರವೇ ತಮ್ಮ ಮನೆಗೆ ತೆರಳುತ್ತಾರೆ.
ಬಿಟ್ಟಂಗಾಲ ಶ್ರೀ ಭಗವತಿ ಉತ್ಸವ
ಬಿಟ್ಟಂಗಾಲ ಶ್ರೀ ಭಗವತಿ ದೇವರ ವಾರ್ಷಿಕ ಉತ್ಸವ ತಾ. 21ರಂದು ನಡೆಯಲಿದೆ. ತಾ. 15 ರಂದು ಹಗಲು ಬೇಡು ಹಬ್ಬ ಪ್ರಯುಕ್ತ ಮನೆ ಮನೆಗೆ ತೆರಳುವದು, ಭಂಡಾರ ಅರ್ಪಿಸುವದು, ತಾ. 16 ರಂದು ಪೂರ್ವಾಹ್ನ ಇರ್‍ಬೊಳಕು, ರಾತ್ರಿ ತುಚಂಬಳಿ, ತಾ.17-18 ರಂದು ಹರಕೆ ಬೊಳಕು, 19 ರಂದು ವಿಷ್ಣುಮೂರ್ತಿ ತೂಡು, 20 ರಂದು ನೆರಪು, 21 ರಂದು ದೇವರ ಅವಭೃತ ಸ್ನಾನ, ಕುದುರೆ, ಉತ್ಸವ ಮೂರ್ತಿ ಪ್ರದಕ್ಷಿಣೆ ನಡೆಯಲಿದೆ. ತಾ. 22 ರಂದು ಕೊಡಿಮರ ಇಳಿಸಿ ಭಂಡಾರವನ್ನು ದೇವತಕ್ಕರಲ್ಲಿಗೆ ತರುವ ಮೂಲಕ ಉತ್ಸವಕ್ಕೆ ತೆರೆ ಬೀಳಲಿದೆ.
ಮತ್ತೂರು ಶ್ರೀ ಭೂತನಾಥ ಅಯ್ಯಪ್ಪ ಉತ್ಸವ
ಗೋಣಿಕೊಪ್ಪಲು ಸಮೀಪದ ಕಿರುನಾಲ್ಕುನಾಡು, ಮತ್ತೂರು ಗ್ರಾಮದ ಶ್ರೀ ಭೂತನಾಥ ಅಯ್ಯಪ್ಪ ದೇವರ ವಾರ್ಷಿಕೋತ್ಸವವು ಮುಕ್ತಾಯ ಕಂಡಿತು.
ಮತ್ತೂರು ಅಯ್ಯಪ್ಪ ದೇವಸ್ಥಾನಕ್ಕೆ 700 ವರ್ಷಗಳಿಗೂ ಅಧಿಕ ಇತಿಹಾಸವಿದ್ದು ಕಿರುಗೂರು, ನಲ್ಲೂರು, ಬೆಸಗೂರು, ಕೋಟೂರು ಹಾಗೂ ಮುಗುಟಗೇರಿ ಗ್ರಾಮದಲ್ಲಿ ವಾರ್ಷಿಕೋತ್ಸವ ಮುಂಚಿತವಾಗಿಯೇ ಕಟ್ಟು ಬೀಳುತ್ತದೆ. ತಾ.9 ರಿಂದ 13 ರವರೆಗೆ ಒಟ್ಟು 5 ದಿನಗಳ ಕಾಲ ವಾರ್ಷಿಕೋತ್ಸವ ಅದ್ಧೂರಿಯಾಗಿ ಆಚರಿಸಲ್ಪಡುತ್ತದೆ.
ಮೀನ್ಯಾರ್ ತಿಂಗಳು, ಉತ್ತರ ನಕ್ಷತ್ರದಲ್ಲಿ ವಾರ್ಷಿಕೋತ್ಸವವನ್ನು ಆಚರಿಸಲ್ಪಡುತ್ತಿದ್ದು, ಕೊಡಿಮರ ನಿಲ್ಲಿಸುವ ಮೂಲಕ ಚಾಲನೆ ನೀಡಿ, ಗ್ರಾಮದ ಭಕ್ತಾದಿಗಳು ಹರಕೆ ಬೆಳಕು, ವಸಂತಪೂಜೆ, ಗಣಪತಿ ಪೂಜೆ ಹಾಗೂ ಸತ್ಯನಾರಾಯಣ ಪೂಜೆಯನ್ನು ನೆರವೇರಿಸಿದರು.
ಭಂಡಾರ ತರುವದು, ಗಣಪತಿ ಹೋಮ, ರುದ್ರಾಭಿಷೇಕ, ಪಂಚ ಕಜ್ಜಾಯ, ನಾಗಪೂಜೆ, ಮಹಾಪೂಜೆ, ಅಲಂಕಾರ ಪೂಜೆ, ಬಿಲ್ವಪತ್ರೆ ಪೂಜೆ ಇತ್ಯಾದಿಗಳನ್ನು ಶ್ರದ್ಧಾ ಭಕ್ತಿಯೊಂದಿಗೆ ಆಚರಿಸಲಾಯಿತು. 6 ದಿನ ಭಕ್ತಾದಿಗಳಿಗೆ ಅನ್ನ ಸಂತರ್ಪಣೆಯನ್ನು ಏರ್ಪಡಿಸಲಾಗಿತ್ತು.
-ಟಿ.ಎಲ್.ಎಸ್.
ನಾಪೋಕ್ಲು ಶ್ರೀ ಸಜ್ಜಾಲಮ್ಮೆ ಉತ್ಸವ
ಕಿರುಂದಾಡು ಗ್ರಾಮದ ಶ್ರೀ ಸಜ್ಜಾಲಮ್ಮೆ ದೇವರ ವಾರ್ಷಿಕ ಉತ್ಸವ ದಿನಾಂಕ 15 ಮತ್ತು 16ರಂದು ನಡೆಯಲಿದೆ. 15 ರಂದು ತಕ್ಕಮುಖ್ಯಸ್ಥರಾದ ಮುಕ್ಕಾಟಿರ ಕುಟುಂಬದ ಮನೆಯಿಂದ ಎತ್ತು ಇಳಿಯುವದು ಮತ್ತು ದೇವರ ಬಲಿ ನಡೆಯಲಿದೆ.16 ರಂದು ಕುರುಂದಕಳಿ ಜರುಗಲಿದೆ.
ಪಾಲೂರು ಶ್ರೀ ಮಹಾಲಿಂಗೇಶ್ವರ
ಪಾಲೂರು ಮಹಾಲಿಂಗೇಶ್ವರ ದೇವಾಲಯದ ವಾರ್ಷಿಕ ಉತ್ಸವ ತಾ. 14 ರಿಂದ 19ರವರೆಗೆ ನಡೆಯಲಿದ್ದು, 18ರಂದು ದೇವರ ದೊಡ್ಡಹಬ್ಬ, 19 ರಂದು ದೇವರ ಜಳಕ ಮತ್ತು ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ.
ಮೂಟೇರಿ ಉಮಾಮಹೇಶ್ವರಿ ದೇವಾಲಯದ ವಾರ್ಷಿಕೋತ್ಸವ
ನಾಪೆÇೀಕ್ಲು: ಇಲ್ಲಿನ ಮೂಟೇರಿ ಉಮಾಮಹೇಶ್ವರಿ ದೇವಾಲಯದಲ್ಲಿ ಅಪರೂಪದ ದೈವಿಕ ಕ್ಷಣದ ದೃಶ್ಯ ಪ್ರತೀವರ್ಷ ಸೌರಮಾನ ಯುಗಾದಿಯಂದು ಕಂಡುಬರುತ್ತಿದೆ. ಸೌರಮಾನ ಯುಗಾದಿ ದಿನ ಬೆಳಿಗ್ಗೆ ಮಾತ್ರ ಕಂಡು ಬರುವ ಈ ದೃಶ್ಯ ನಂತರದ ದಿನಗಳಲ್ಲಿ ಗೋಚರಿಸಿದರೂ ಸೂರ್ಯ ಸ್ಥಾನ ಬದಲಾವಣೆಯಿಂದ ಈ ಅದ್ಭುತ ಕ್ಷಣ ಲಭಿಸದು. ಅದೇ ದಿನ ದೇವರ ವಾರ್ಷಿಕೋತ್ಸವ ವಿಶೇಷವಾಗಿದೆ. ಪ್ರಶಾಂತ ಪರಿಸರದಲ್ಲಿ ಸುಂದರವಾಗಿರುವ ಈ ಉಮಾಮಹೇಶ್ವರಿ ದೇವಾಲಯ ಪ್ರಸಿದ್ದಿಪಡೆದಿದೆ.. ಇಲ್ಲಿ ಈಶ್ವರ ಲಿಂಗದ ರೂಪದಲ್ಲಿ ಪ್ರತಿಷ್ಠಾಪಿತನಾಗಿದ್ದು, ಪಾರ್ವತಿ ಉತ್ಸವ ಮೂರ್ತಿಯಾಗಿರುವದರಿಂದ ಉಮಾಮಹೇಶ್ವರಿಗೆ ಹೆಚ್ಚಿನ ಆದÀ್ಯತೆ. ಬಹಳ ಪುರಾತನವಾದ ದೇವಾಲಯ ಇದಾಗಿದ್ದು,ಸಹಸ್ರ ವರ್ಷಗಳ ಇತಿಹಾಸವಿದೆ.
17ನೇ ಶತಮಾನದಲ್ಲಿ ಊರಿನವರ ವೈಮನಸ್ಯದಿಂದಾಗಿ ದೇವಾಲಯ ಶಿಥಿಲಗೊಂಡಿತ್ತು. ಬಳಿಕ ನಾಪೆÇೀಕ್ಲು, ಬೇತು, ಕೊಳಕೇರಿಯ ಗ್ರಾಮಸ್ಥರೆಲ್ಲಾ ಒಟ್ಟಾಗಿ ದೇವಾಲಯದ ಅಭಿವೃದ್ಧಿಗೆ ಶ್ರಮಿಸಿದರು.
1956ರಲ್ಲಿ ಬಿದ್ದಾಟಂಡ ತಿಮ್ಮಯ್ಯ ಅವರ ನೇತೃತ್ವದಲ್ಲಿ ಊರವರ ಸಹಕಾರದೊಂದಿಗೆ ಈ ದೇವಾಲಯವನ್ನು ಅಭಿವೃದ್ಧಿ ಪಡಿಸಲಾಯಿತು.ದೇವಾಲಯದಲ್ಲಿ ಗುಡಿಯೊಳಗೆ ಈಶ್ವರ ಲಿಂಗ ಮತ್ತು ಉಮಾಮಹೇಶ್ವರಿ ದೇವರ ವಿಗ್ರಹವಿದೆ. ಸೌರಮಾನ ಯುಗಾದಿಯಂದು ಸೂರ್ಯ ಕಿರಣ ನೇರವಾಗಿ ಶಿವಲಿಂಗಕ್ಕೆ ಬೀಳುತ್ತವೆ.
ದೇವಾಲಯವನ್ನು ಲ್ಯಾಟರೈಟ್ ಕಲ್ಲಿನಿಂದ ನಿರ್ಮಿಸಲಾಗಿದ್ದು, ವಿಶೇಷವಾದ ಕೆತ್ತನೆಗಳನ್ನೊಳಗೊಂಡಿದೆ. ದೇವಾಲಯದಲ್ಲಿ ನಿತ್ಯ ಪೂಜೆ, ವಿವಿಧ ಹಬ್ಬಗಳನ್ನು ಶ್ರದ್ಧಾ - ಭಕ್ತಿಯಿಂದ ಆಚರಿಸಲಾಗುತ್ತದೆ. ಪ್ರತಿ ವರ್ಷ ಮೇಷ ಮಾಸದ 1 ಮತ್ತು 2ರಂದು ವಾರ್ಷಿಕ ಹಬ್ಬವು ನಡೆಯುತ್ತದೆ. -ದುಗ್ಗಳ