ಮಡಿಕೇರಿ, ಏ. 14: ಜಿಲ್ಲೆಯಲ್ಲಿ ಸಾಕಷ್ಟು ಸಾಹಿತಿಗಳು, ಹಾಡು ಗಾರರಿದ್ದು, ಅವಕಾಶದಿಂದ ವಂಚಿತರಾಗಿದ್ದಾರೆ. ಅಂತಹ ಪ್ರತಿಭೆಗಳಿಗೆ ಅಕಾಡೆಮಿಗಳು ಪ್ರೋತ್ಸಾಹ ನೀಡುತ್ತಿರುವದು ಉತ್ತಮ ಕಾರ್ಯವಾಗಿದೆ ಎಂದು ರಾಜ್ಯ ವಿಧಾನ ಪರಿಷತ್ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ ಹೇಳಿದರು.
ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ವತಿಯಿಂದ ಕೇಳೇಟಿರ ಚಿತ್ರಾ ನಾಣಯ್ಯ ಮತ್ತು ನಾಗೇಶ್ ಕಾಲೂರು ಅವರ ಸಾಹಿತ್ಯವಿರುವ ಮೊಣ್ಣಂಡ ಶೋಭಾ ಸುಬ್ಬಯ್ಯ ಮತ್ತು ಚೆಕ್ಕೇರ ತ್ಯಾಗರಾಜ ಅಪ್ಪಯ್ಯ ಅವರುಗಳ ಸಂಗೀತ ಸಂಯೋಜನೆ ಯಲ್ಲಿ ಹೊರತರಲಾಗಿರುವ ‘ಗೋಲ್ ಪೊಯ್ಯನ' ಕೊಡವ ಹಾಡುಗಳ ಸಿಡಿ ಬಿಡುಗಡೆ ಮಾಡಿ ಅವರು ಮಾತನಾಡಿದರು. ಕೊಡವ ಹಾಗೂ ಅರೆಭಾಷೆ ಅಕಾಡೆಮಿ ಅಧ್ಯಕ್ಷರುಗಳಾಗಿರುವ ಬಿದ್ದಾಟಂಡ ತಮ್ಮಯ್ಯ ಹಾಗೂ ಕೊಲ್ಯದ ಗಿರೀಶ್ ಅವರುಗಳಿಗೆ ಸಹೋದರತೆಯಿಂದ ಎರಡೂ ಭಾಷೆ- ಸಂಸ್ಕøತಿಯನ್ನು ರಾಜ್ಯ, ರಾಷ್ಟ್ರಮಟ್ಟದಲ್ಲಿ ಪಸರಿಸಿದ ಕೀರ್ತಿ ಸಲ್ಲುತ್ತದೆ. ಇದನ್ನು ನಾವುಗಳು ಒಪ್ಪಿಕೊಳ್ಳಲೇಬೇಕಿದೆ. ಅಕಾಡೆಮಿಗಳ ಸ್ಥಾಪನೆಯ ಉದ್ದೇಶ ಇದೀಗ ಸಾರ್ಥಕವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಅಕಾಡೆಮಿಗಳು ಇದುವರೆಗೆ ಮಾಡದ ಸಾಧನೆಯನ್ನು ಇವರುಗಳು ಮಾಡಿದ್ದಾರೆ. ಸಾಹಿತಿಗಳು, ಕಲಾವಿದರಿಗೆ ಉತ್ತಮ ಅವಕಾಶ ನೀಡಿದ್ದಾರೆ. ಇದು ಭಾಷೆಯ ಮೇಲಿನ ಪ್ರೀತಿಯನ್ನು ತೋರಿಸುತ್ತದೆ. ಮಕ್ಕಳಲ್ಲೂ ಕೂಡ ಅಭಿಮಾನ ಮೂಡುವಂತಹ ಕೆಲಸವಾಗಿದೆ. ಇಂತಹ ಕಾರ್ಯಚಟುವಟಿಕೆಗಳಿಗೆ ಎಲ್ಲರೂ ಪ್ರೋತ್ಸಾಹ ನೀಡುವಂತಾಗಬೇಕೆಂದು ಹೇಳಿದರು.
ಅತಿಥಿಯಾಗಿದ್ದ ಹಿರಿಯ ಸಾಹಿತಿ ಮೊಣ್ಣಂಡ ಶೋಭಾ ಸುಬ್ಬಯ್ಯ ಅವರು ಶಾಸ್ತ್ರೀಯ ಸಂಗೀತವೆಂದರೆ ಇದು ನಮಗೆ ಅರ್ಥವಾಗುವದಿಲ್ಲ ಎಂಬ ಭಾವನೆ ಕೊಡವರಲ್ಲಿದೆ. ಇದು ಸಲ್ಲದು. ನಾವು ಯಾವದೇ ಕ್ಷೇತ್ರದಲ್ಲೂ ಕಡಿಮೆ ಇಲ್ಲವೆಂಬದನ್ನು ತೋರ್ಪಡಿಸಬೇಕು ಎಂದು ಹೇಳಿದರು. ಮೊದಲು ನಮ್ಮನ್ನು ನಾವು ಅರಿತುಕೊಳ್ಳಬೇಕು. ಹಿಂದೇಟು ನಮ್ಮ ಸ್ವಭಾವವಾಗಿದೆ. ಸೋಮಾರಿಗಳಾಗಬಾರದೆಂದು ಹೇಳಿದ ಅವರು, ಜವಾಬ್ದಾರಿ ವಹಿಸಿಕೊಂಡು ನಿಭಾಯಿಸಬೇಕೆಂದು ಕಿವಿಮಾತು ಹೇಳಿದರು. ಜಿಲ್ಲೆಯಲ್ಲಿ ಮರಗಳ ಹನನವಾಗುತ್ತಿದ್ದು, ಪ್ರತಿಯೋರ್ವರು ಒಂದೊಂದು ಗಿಡ ನೆಡುವ ಮೂಲಕ ಪರಿಸರ ಕಾಪಾಡಬೇಕು. ಪರಿಸರ ಕುರಿತು ಸಾಹಿತ್ಯ ಹೊರಬರಲಿ ಎಂದು ಆಶಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಅಕಾಡೆಮಿ ಅಧ್ಯಕ್ಷ ಬಿದ್ದಾಟಂಡ ತಮ್ಮಯ್ಯ ಭಕ್ತಿ, ಕೀರ್ತನೆ ಹಾಡುಗಳಿಗೆ ಬೇಡಿಕೆ ಕಡಿಮೆ ಇದೆ. ಈ ಹಿನ್ನೆಲೆಯಲ್ಲಿ ಭಕ್ತಿ ಹಾಗೂ ಹಾಕಿಕ್ರೀಡೆ ಮತ್ತು ಇತಿಹಾಸಕ್ಕೆ ಸಂಬಂಧಿಸಿದ ಹಾಡುಗಳನ್ನು ಒಟ್ಟುಗೂಡಿಸಿ ಸಿಡಿ ಹೊರತರಲಾಗಿದೆ ಎಂದು ತಿಳಿಸಿದರು. ಸಿಡಿ ತಯಾರು ಮಾಡಿ ಕಚೇರಿಯಲ್ಲಿ ಶೇಖರಿಸಿಡುವದು ಸರಿಯಲ್ಲ. ಸೂಕ್ತ ಮಾರುಕಟ್ಟೆ ವ್ಯವಸ್ಥೆಯೊಂದಿಗೆ ಮಾರಾಟ ಮಾಡಬೇಕಿದೆ. ಈ ಹಿನ್ನೆಲೆಯಲ್ಲಿ ಇದೀಗ ಹಬ್ಬಾಚರಣೆಗಳು, ಕ್ರೀಡಾ ಉತ್ಸವಗಳು ಜರುಗುತ್ತಿದ್ದು, ಅಲ್ಲಿ ಮಾರಾಟ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ತರಾತುರಿಯಲ್ಲಿ ಸಿಡಿ ತಯಾರು ಮಾಡಿ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಾಹಿತಿ ಕೇಲೇಟಿರ ಚಿತ್ರಾ ನಾಣಯ್ಯ, ಗಾಯಕರಾದ ಚೆಕ್ಕೇರ ಪಂಚಮ್ ತ್ಯಾಗರಾಜ್, ನೆಲ್ಲಮಕ್ಕಡ ಸಾಗರ್ ಮಾಚಯ್ಯ ಇದ್ದರು. ಅಕಾಡೆಮಿ ಸದಸ್ಯ ಕುಡಿಯರ ಬೋಪಯ್ಯ ನಿರೂಪಿಸಿದರೆ, ಸದಸ್ಯೆ ಮೂಕೇರಿರ ಲೀಲಾ ವಂದಿಸಿದರು.