ಮಡಿಕೇರಿ, ಏ. 14: ಕೊಡಗು ಸೇರಿದಂತೆ ಎಲ್ಲಾ ಗೌಡ ಸಮಾಜಗಳನ್ನು ಒಳಗೊಂಡಿರುವ ಒಕ್ಕೂಟದ (ಫೆಡರೇಷನ್) ಅಧ್ಯಕ್ಷರಾಗಿ ಸೂರ್ತಲೆ ಸೋಮಣ್ಣ ಅವರು ಆಯ್ಕೆಗೊಂಡಿದ್ದಾರೆ. ಇಂದು ಇಲ್ಲಿನ ಗೌಡ ಸಮಾಜದ ಕೆಳಗಿನ ಸಭಾಂಗಣದಲ್ಲಿ ಜರುಗಿದ ಸಭೆಯಲ್ಲಿ ಒಕ್ಕೂಟದ ನೂತನ ಪದಾಧಿಕಾರಿಗಳ ನೇಮಕಾತಿ ನಡೆಯಿತು.

ಇತ್ತೀಚೆಗೆ ಗೌಡ ವಿದ್ಯಾಸಂಘದ ಆಡಳಿತ ಮಂಡಳಿ ಚುನಾವಣೆ ಸಂದರ್ಭ ಒಕ್ಕೂಟದ ಅಧ್ಯಕ್ಷರಾಗಿದ್ದ ದಂಬೆಕೋಡಿ ಎಸ್. ಆನಂದ್ ಅವರು ರಾಜೀನಾಮೆ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಇಂದು ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು. ಎಲ್ಲಾ ಗೌಡ ಸಮಾಜ ಆಡಳಿತ ಮಂಡಳಿ ಪ್ರತಿನಿಧಿಗಳ ಇಂದಿನ ಸಭೆಯಲ್ಲಿ ಡಿ.ಎಸ್. ಆನಂದ್ ತನ್ನ ರಾಜೀನಾಮೆ ಹಿಂಪಡೆದು ಮರು ಆಯ್ಕೆಯ ಅಪೇಕ್ಷೆ ವ್ಯಕ್ತಪಡಿಸಿದ ವೇಳೆ ಕೆಲವರು ಅಸಮಾಧಾನದೊಂದಿಗೆ ನೇರವಾಗಿ ವಿರೋಧಿಸಿದರು.

ಈ ವೇಳೆ ಇದುವರೆಗೆ ಉಪಾಧ್ಯಕ್ಷರಾಗಿದ್ದ ಕುದುಕುಳಿ ಭರತ್ ಕೂಡ ಅಧ್ಯಕ್ಷ ಸ್ಥಾನದಲ್ಲಿ ಜವಾಬ್ದಾರಿ ನಿರ್ವಹಿಸುವ ಇಂಗಿತ ಹೊರಗೆÉಡವಿದರಾದರೂ, ಇತರರು ಸಮ್ಮತಿಸದೆ ನೂತನ ಪದಾಧಿಕಾರಿಗಳ ಆಯ್ಕೆಗೆ ಪಟ್ಟು ಹಿಡಿದರೆಂದು ಗೊತ್ತಾಗಿದೆ. ಅಲ್ಲದೆ, ಈ ಸಂಬಂಧ ಸಾಕಷ್ಟು ಬಿ.ಸಿ. ಚರ್ಚೆ ನಡೆದು ಅಂತಿಮವಾಗಿ ಪೊಲೀಸ್ ಇಲಾಖೆಯ ನಿವೃತ್ತ ಉದ್ಯೋಗಿ ಸೂರ್ತಲೆ ಸೋಮಣ್ಣ ಸರ್ವಾನುಮತದಿಂದ ಆಯ್ಕೆಗೊಂಡಿದ್ದಾರೆ.

ಒಕ್ಕೂಟದ ಉಪಾಧ್ಯಕ್ಷರಾಗಿ ಕುಶಾಲನಗರದ ಉದ್ಯಮಿ ಪೊನ್ನಚನ ಎಂ. ಮೋಹನ್, ಕಾರ್ಯದರ್ಶಿಯಾಗಿ ಏಲಕ್ಕಿ ಬೆಳೆಗಾರ ಕೋಳುಮುಡಿಯನ ಅನಂತ್‍ಕುಮಾರ್, ಖಜಾಂಚಿಯಾಗಿ ವಕೀಲ ಯಾಲದಾಳು ಮನೋಜ್ ಬೋಪಯ್ಯ ಹಾಗೂ ಸಹ ಕಾರ್ಯದರ್ಶಿಯಾಗಿ ಮೂಡಗದ್ದೆ ರಾಮಕೃಷ್ಣ ಇವರುಗಳು ಆರಿಸಲ್ಪಟ್ಟಿದ್ದಾರೆ.

ಉಳಿದಂತೆ ನಿರ್ದೇಶಕರುಗಳಾಗಿ ಡಿ.ಎಸ್. ಆನಂದ್, ಕುದುಕುಳಿ ಭರತ್‍ಕುಮಾರ್, ಕೂಡಕಂಡಿ ಕಾವೇರಮ್ಮ ಸೋಮಣ್ಣ, ಕೇಚಪನ ಮೋಹನ್, ತೇನನ ರಾಜೇಶ್, ಆನಂದ ಕರಂದ್ಲಾಜೆ, ಉಳುವಾರನ ಅಮೃತ ಕುಮಾರಿ, ಪೈಕೇರ ಮನೋಹರ, ಚೆಟ್ಟಿಮಾಡ ಜನಾರ್ದನ, ಸೋಮೆಟ್ಟಿ ದೇವಯ್ಯ ಇವರುಗಳು ಆಯ್ಕೆಗೊಂಡಿದ್ದಾರೆ.

ನೂತನ ಅಧ್ಯಕ್ಷ ಎಸ್. ಸೋಮಣ್ಣ ಅವರು ಜಿಲ್ಲಾ ಪೊಲೀಸ್ ಕಚೇರಿಯ ನಿವೃತ್ತ ಅಧಿಕಾರಿಯಾಗಿದ್ದು, ಮಡಿಕೇರಿ ಗೌಡ ಸಮಾಜ, ಗೌಡ ವಿದ್ಯಾಸಂಘ, ವಿದ್ಯಾಭಿವೃದ್ಧಿ ನಿಧಿ ಹಾಗೂ ಫೆಡರೇಷನ್‍ನಲ್ಲಿ ಸರಕಾರಿ ಸೇವೆ ನಡುವೆಯೇ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಪ್ರಸಕ್ತ ಒಕ್ಕೂಟ ಅಧ್ಯಕ್ಷರಾಗಿ ಆಯ್ಕೆಗೊಂಡಿದ್ದು, ಸರ್ವ ಜನಾಂಗ ಹಾಗೂ ಎಲ್ಲಾ ಸಮಾಜಗಳ ಬೆಂಬಲದಿಂದ ಸರ್ವರ ಏಳಿಗೆಗೆ ಶ್ರಮಿಸುವೆ ಎಂದು ‘ಶಕ್ತಿ’ ಯೊಂದಿಗೆ ಅನಿಸಿಕೆ ಹಂಚಿಕೊಂಡಿದ್ದಾರೆ.