ಗೋಣಿಕೊಪ್ಪಲು, ಏ. 14: ದಕ್ಷಿಣ ಕೊಡಗಿನ ಬಾಳೆಲೆ ಸಮೀಪ ನಿಟ್ಟೂರುವಿನಲ್ಲಿ ಲಕ್ಷಣ ತೀರ್ಥ ನದಿಗೆ ಅಡ್ಡಲಾಗಿ ನಿರ್ಮಾಣವಾಗುತ್ತಿರುವ ಸುಮಾರು ರೂ. 5.40 ಕೋಟಿ ವೆಚ್ಚದ ಸೇತುವೆ ಮುಂದಿನ ಎರಡು ತಿಂಗಳಿನಲ್ಲಿ ಕಾಮಗಾರಿ ಮುಕ್ತಾಯಗೊಳ್ಳಲಿದೆ. ಸೇತುವೆ ಎರಡೂ ಬದಿಯ ರಸ್ತೆಗಳೂ ಎತ್ತರಗೊಳ್ಳುತ್ತಿದ್ದು, ಮಳೆಗಾಲದ ಪ್ರವಾಹದ ನೀರು ರಸ್ತೆ ಮೇಲೆ ಹರಿಯದಂತೆ ಉದ್ಧೇಶಿತ ಕಾಮಗಾರಿಗೆ ಇನ್ನೂ ರೂ. 1.50 ಕೋಟಿ ಅನುದಾನ ಅವಶ್ಯಕವಿದೆ ಎನ್ನಲಾಗಿದೆ.
ನಿಟ್ಟೂರಿನಲ್ಲಿರುವ ಹಳೆಯ ಸೇತುವೆಯನ್ನು 1966 ರಲ್ಲಿ ನಿರ್ಮಿಸಲಾಗಿದ್ದು, ಲಕ್ಷ್ಮಣತೀರ್ಥ ನದಿಯ ಪ್ರವಾಹ ಸೇತುವೆ ಮೇಲೆ ಹರಿಯುತ್ತಿದ್ದ ಹಿನ್ನೆಲೆ ನಿಟ್ಟೂರು-ಬಾಳೆಲೆ ಸಂಪರ್ಕ ತಿಂಗಳಾನುಗಟ್ಟಲೆ ಕಡಿತಗೊಳ್ಳುತ್ತಿತ್ತು. ಹಲವು ವರ್ಷಗಳು ಜಿಲ್ಲಾಡಳಿತ ಪ್ರವಾಹ ದಾಟಲು ದೋಣಿಯ ವ್ಯವಸ್ಥೆಯನ್ನು ಕಲ್ಪಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
ಈ ಭಾಗದ ಜನತೆಯ ಬೇಡಿಕೆ ಈಡೇರುವ ಹಾದಿಯಲ್ಲಿ ಉತ್ತಮ ಕಾಮಗಾರಿ ನಡೆದಿರುವ ಬಗ್ಗೆಯೂ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಶೇ. 85 ರಷ್ಟು ಸೇತುವೆ ಕಾಮಗಾರಿ ಪೂರ್ಣಗೊಂಡಿದ್ದು, ರಸ್ತೆ ಎತ್ತರಿಸುವ ಕಾಮಗಾರಿ, ಕಲ್ಲು ಹಾಗೂ ವೆಟ್ ಮಿಕ್ಸ್ ಕೆಲಸ ಈ ಮಳೆಗಾಲಕ್ಕೂ ಮುನ್ನ ಪೂರ್ಣಗೊಳ್ಳಲಿದ್ದು ಈ ಬಾರಿಯ ಮಳೆಗಾಲದಲ್ಲಿ ನಿರಾತಂಕ ವಾಹನ ಓಡಾಟಕ್ಕೆ ಅನುವು ಮಾಡಿಕೊಡಲಾಗುವದು ಎನ್ನಲಾಗುತ್ತಿದೆ.
ನಿಟ್ಟೂರು ಕಡೆಗೆ ಸಾಗುವ ಪ್ರವಾಹ ಪೀಡಿತ ರಸ್ತೆ ಕಾಮಗಾರಿ ಸುಮಾರು 430 ಮೀಟರ್ ಎಂದು ಅಂದಾಜಿಸಲಾಗಿದ್ದು, ಇದೀಗ 670 ಮೀಟರ್ ಉದ್ದ ವಿಸ್ತರಿಸಲಾಗಿದೆ. ಸೇತುವೆ ಕಡೆಯಿಂದ ಬಾಳೆಲೆ ಕಡೆಗೆ 110 ಮೀಟರ್ ವಿಸ್ತಾರದ ರಸ್ತೆಯನ್ನು 130 ಮೀಟರ್‍ಗೆ ವಿಸ್ತರಿಸುವ ಸಾಧ್ಯತೆ ಇದ್ದು ಕೃಷಿಕರೊಬ್ಬರಿಂದ ರಸ್ತೆ ವಿಸ್ತರಣೆಗೆ ಅಡ್ಡಿ ಆತಂಕ ಎದುರಾಗಿದೆ ಎನ್ನಲಾಗಿದೆ.
ರಸ್ತೆಯನ್ನು ಪ್ರವಾಹದಿಂದ ಮುಳುಗಡೆಯಾಗುವದನ್ನು ತಡೆಯಲು ಸುಮಾರು 4 ಮೀಟರ್ ಎತ್ತರಿಸಲಾಗಿದೆ. ಸೇತುವೆಯನ್ನು ಸುಮಾರು 26 ಅಡಿ ಎತ್ತರವಾಗಿ ನಿರ್ಮಿಸಲಾಗಿದ್ದು ಇನ್ನು ಪ್ರವಾಹದ ಭೀತಿ ವಾಹನ ಓಡಾಟಕ್ಕೆ ಎದುರಾಗದು. ರಸ್ತೆಯನ್ನು ಹತ್ತೂವರೆ ಮೀಟರ್ ಅಗಲಗೊಳಿಸಿದ್ದು, ಇದೇ ರಸ್ತೆ ಮುಂದೆ ಹಾಸನ-ಕುಟ್ಟ-ತೋಲ್‍ಪೆಟ್ಟಿ ಸಂಪರ್ಕ ಅಂತರರಾಜ್ಯ ರಸ್ತೆಯಾಗಿ ಪರಿವರ್ತನೆಯಾಗಲಿದೆ. ಪಿರಿಯಾಪಟ್ಟಣ-ಆನೆಚೌಕೂರು-ತಿತಿಮತಿ-ಕೋಣನಕಟ್ಟೆ ರಸ್ತೆ ಇದೇ ನಿಟ್ಟೂರು ಸೇತುವೆ ಮೇಲೆ ಹಾದು ಹೋಗಲಿದೆ.
ಸದರಿ ರಸ್ತೆಯನ್ನು ಸರ್ವಋತು ರಸ್ತೆಯನ್ನಾಗಿ ಮಾರ್ಪಡಿಸಲು ಸಿಮೆಂಟ್ ರಸ್ತೆ ಕಾಮಗಾರಿ ಮುಂದಿನ ಮಳೆಗಾಲದ ನಂತರ ಆರಂಭಗೊಳ್ಳಲಿದೆ. ರಸ್ತೆಯ ಇಬ್ಬದಿಯೂ ತಡೆಗೋಡೆ ಅಗತ್ಯವಿದ್ದು ಯೋಜನಾ ಗಾತ್ರವನ್ನು ಹೆಚ್ಚಳ ಮಾಡಬೇಕಾಗಿದೆ. ರಸ್ತೆಯ ತಳಭಾಗದಲ್ಲಿ ಪ್ರವಾಹ ನೀರು ಹರಿದು ಹೋಗಲು ಎರಡು ಕಲ್ವರ್ಟ್‍ಗಳನ್ನು ನಿರ್ಮಾಣ ಮಾಡಲಾಗುವದು. ಅಲ್ಲದೆ ಸೇತುವೆ ತಳಭಾಗದ ಅಡೆತಡೆಗಳನ್ನು ಸಮತಟ್ಟು ಮಾಡುವ, ಒಂದಷ್ಟು ತಗ್ಗಿಸುವ ಕಾಮಗಾರಿಯೂ ಬಾಕಿ ಇದೆ.
ಮಡಿಕೇರಿಯಲ್ಲಿ ಕೆ.ಜೆ. ಜಾರ್ಜ್ ಉಸ್ತುವಾರಿ ಮಂತ್ರಿಯಾಗಿದ್ದ ಸಂದರ್ಭ ಸಾರ್ವಜನಿಕ ಹಿತರಕ್ಷಣಾ ಸಮಿತಿಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರಮಣಮಾಡ ಸತೀಶ್ ದೇವಯ್ಯ ಅವರ ಮನವಿಗೆ ಸ್ಪಂದಿಸಿದ ಸಚಿವರು ಅನುದಾನ ಬಿಡುಗಡೆ ಮಾಡಲು ಶ್ರಮಿಸಿದ್ದರು. ಸಚಿವರ ಆಪ್ತ ಮನೆಯಪಂಡ ಎ. ಪೆÇನ್ನಪ್ಪ ಅವರೂ ನಿಟ್ಟೂರು ಸೇತುವೆ ಎತ್ತರಿಸುವ ಅವಶ್ಯಕತೆ ಕುರಿತು ಲೋಕೋಪಯೋಗಿ ಇಲಾಖೆಯ ಅಭಿಯಂತರರೊಂದಿಗೆ ಚರ್ಚೆ ನಡೆಸಿ ಮಾಹಿತಿ ನೀಡಿದ್ದರು.
ಒಟ್ಟಿನಲ್ಲಿ ನಿಟ್ಟೂರು, ಕಾರ್ಮಾಡು, ಬಾಳೆಲೆ ನಿವಾಸಿಗಳು ಮುಂದಿನ ಎರಡು ಮೂರು ತಿಂಗಳಿನಲ್ಲಿ ನೂತನ ಸೇತುವೆ ಮೇಲೆ ನಿರಾತಂಕವಾಗಿ ಓಡಾಟ ನಡೆಸಬಹುದಾಗಿದೆ. ರಸ್ತೆ ಎತ್ತರಿಸಲು ಸಾಕಷ್ಟು ಮಣ್ಣು ಬೇಕಾಗಿದ್ದು, ನಿಟ್ಟೂರು ಗ್ರಾ.ಪಂ. ಉಪಾಧ್ಯಕ್ಷ ಪವನ್ ಚಿಟ್ಟಿಯಪ್ಪ ಉಚಿತವಾಗಿ ತಮ್ಮ ಜಾಗದ ಮಣ್ಣು ನೀಡಿ ಸಹಕರಿಸಿದ್ದಾರೆ.
ಲೋಕೋಪಯೋಗಿ ಸಚಿವ ಮಹದೇವಪ್ಪ ಅವರ ಆಪ್ತ ಕಾರ್ಯದರ್ಶಿ ರಾಜೇಂದ್ರ, ವೀರಾಜಪೇಟೆ ಸಹಾಯಕ ಕಾರ್ಯಪಾಲಕ ಅಭಿಯಂತರ ಸುರೇಶ್ ಹಾಗೂ ಮಂಗಳೂರಿನ ಇಲಾಖೆಯ ಅಧೀಕ್ಷಕ ಅಭಿಯಂತರ ಕಾಂತರಾಜ್ ಅವರ ತುರ್ತು ಸ್ಪಂದನೆಯಿಂದ ಕಾಮಗಾರಿ ನಿಗದಿತ ಅವಧಿಯಲ್ಲಿಯೇ ಪೂರ್ಣಗೊಳ್ಳಲಿದೆ. 1960 ರ ದಶಕದಲ್ಲಿ ನಿರ್ಮಾಣವಾದ ಹಳೆಯ ಸೇತುವೆ ಮಳೆಗಾಲದಲ್ಲಿ ಕುಸಿಯುವ ಸಾಧ್ಯತೆ ಇದ್ದು ಈ ಬಗ್ಗೆ ಇಲಾಖೆಯ ಅಭಿಯಂತರರು ಎಚ್ಚರಿಕೆ ವಹಿಸಬೇಕಾಗಿದೆ. ಸೇತುವೆ ಹಾಗೂ ಸಿಮೆಂಟ್ ರಸ್ತೆ ಗುತ್ತಿಗೆ ಕಾಮಗಾರಿಯನ್ನು ಮೈಸೂರಿನ ಭಾಸ್ಕರ ರೆಡ್ಡಿ ಅವರಿಗೆ ನೀಡಲಾಗಿದ್ದು, ಉಸ್ತುವಾರಿಯನ್ನು ನಾಗಾರ್ಜುನ ರೆಡ್ಡಿ ಅವರು ವಹಿಸಿಕೊಂಡಿದ್ದು ರೂ. 1.50 ಕೋಟಿಗೆ ಅಧಿಕ ಅನುದಾನ ಲಭ್ಯವಾದಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಲು ಸಾಧ್ಯ ಎಂದು ತಿಳಿಸಿದ್ದಾರೆ.
ಕೊಟ್ಟಗೇರಿಯ ಅರಮಣಮಾಡ ಸತೀಶ್ ದೇವಯ್ಯ, ಗ್ರಾಮಸ್ಥರಾದ ಎ.ಎಂ. ಶರತ್, ವಿ.ಎ. ಹರೀಶ್, ಅಳಮೇಂಗಡ ಗಣೇಶ್ ಮುಂತಾದವರು ಗುಣಮಟ್ಟದ ಕಾಮಗಾರಿಗೆ ಮೆಚ್ಚುಗೆ ವ್ಯಕ್ತಪಡಿಸಿದರಲ್ಲದೆ, ಮಳೆಗಾಲಕ್ಕೂ ಮುನ್ನ ಓಡಾಟಕ್ಕೆ ಅನುವು ಮಾಡಿಕೊಡಲು ಸಂಬಂಧಪಟ್ಟವರನ್ನು ಒತ್ತಾಯಿಸಿದ್ದಾರೆ.