*ಗೋಣಿಕೊಪ್ಪ, ಏ. 14: ಒಕ್ಕಲಿಗರ ಯುವ ವೇದಿಕೆಯ ಆಶ್ರಯದಲ್ಲಿ ಈ ಬಾರಿ ದ್ವ್ವಿತೀಯ ವರ್ಷದ ಕ್ರಿಕೆಟ್ ಪಂದ್ಯಾಟ ತಾ. 27 ರಿಂದ ಹಾತೂರಿನ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಮೈದಾನದಲ್ಲಿ ಆರಂಭವಾಗಲಿದೆ. ಕೋತೂರು, ಕೊಟ್ಟಗೇರಿ ಮತ್ತು ಕಾರ್ಮಾಡು ಗ್ರಾಮಸ್ಥರು ಸೇರಿ ಜನಾಂಗದ ಒಗ್ಗೂಡುವಿಕೆ ಮತ್ತು ಸಮಾಜದಲ್ಲಿ ಸಾಮರಸ್ಯದ ಬಾಳ್ವೆ ನಡೆಸಲು, ಎಲ್ಲರೂ ಒಟ್ಟಿಗೆ ಬೆರೆಯುವ ಸಲುವಾಗಿ ಕ್ರೀಡಾಕೂಟವನ್ನು ಆಯೋಜಿಸಿದ್ದು, ಹಾತೂರು ಪ್ರೌಢಶಾಲಾ ಆವರಣದಲ್ಲಿ ಕ್ರೀಡಾಕೂಟದ ಪೂರ್ವಭಾವಿ ಸಭೆ ಯುವ ವೇದಿಕೆಯ ಅಧ್ಯಕ್ಷ ವಿ.ಪಿ. ರಾಜ ಅವರ ಅಧ್ಯಕ್ಷತೆಯಲ್ಲಿ ಜರುಗಿತು. ಸಭೆಯಲ್ಲಿ ಕ್ರೀಡಾಕೂಟದ ಯಶಸ್ಸಿಗೆ ಅನುಕೂಲವಾಗುವಂತೆ ಕುಲಬಾಂಧವರಿಂದ ವಿವಿಧ ಸಲಹೆ ಸೂಚನೆಗಳನ್ನು ಪಡೆದು, ವಿವಿಧ ಸಮಿತಿಗಳನ್ನು ರಚಿಸಿ ಪದಾಧಿಕಾರಿ ಗಳನ್ನು ನೇಮಿಸಲಾಯಿತು. ಪೂರ್ವಭಾವಿ ಸಭೆಯಲ್ಲಿ ವಿ.ಎನ್. ಮಹೇಶ್, ವಿ.ಪಿ. ಲೋಹಿತ್ ಗೌಡ, ವಿ.ಕೆ. ಪ್ರವೀಣ್, ವಿ.ಪ್ರಸನ್ನ, ವಿ.ಜೆ. ದಿನೇಶ್, ವಿ.ಎನ್. ರವಿಕುಮಾರ್, ವಿ.ಜಿ.ಮಧುಸೂದನ್, ಹೆಚ್.ಎಂ. ಅಭಿಷೇಕ್ ಹಾಗೂ ಹಾತೂರು, ಕಣ್ಣಂಗಾಲ, ಕೋತೂರುವಿನ ಅನೇಕ ಗ್ರಾಮಸ್ಥರು ಹಾಜರಿದ್ದರು. ವಿ.ಸಿ. ಸುದೀಪ್ ಸ್ವಾಗತಿಸಿ, ವಂದಿಸಿದರು.

ಕ್ರೀಡಾಕೂಟ ತಾ. 30 ರವರೆಗೆ ನಡೆಯಲಿದ್ದು, ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ, ಮಹಿಳೆಯರಿಗೆ ಹಗ್ಗಜಗ್ಗಾಟ ಮತ್ತು ರಂಗೋಲಿ ಸ್ಪರ್ಧೆ ಹಾಗೂ ಮಕ್ಕಳಿಗಾಗಿ ಇತರೆ ಆಟೋಟ ಸ್ಪರ್ಧೆಗಳು ಜರುಗಲಿವೆ. ಭಾಗವಹಿಸುವ ಸರ್ವರಿಗೂ ಊಟೋಪಚಾರದ ವ್ಯವಸ್ಥೆ ಮಾಡಲಾಗಿದೆ. ಆಸಕ್ತ ತಂಡಗಳು ತಾ. 25 ರೊಳಗೆ ಹೆಸರನ್ನು ನೋಂದಾಯಿಸಬೇಕು. ಹೆಚ್ಚಿನ ಮಾಹಿತಿಗಾಗಿ ಜೀವನ್- 9483598480, ನಿತಿನ್-9448955261, ನೀತಿ ಕುಮಾರ್-9900878882 ಸಂಪರ್ಕಿಸ ಬಹುದಾಗಿದೆ.