ಸೋಮವಾರಪೇಟೆ, ಏ.14: ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಎಲ್.ಇ.ಡಿ. ಬಲ್ಬ್‍ಗಳನ್ನು ತಕ್ಷಣ ಪೂರೈಸಲು ಕ್ರಮಕೈಗೊಳ್ಳಬೇಕೆಂದು ವಿದ್ಯುತ್ ಇಲಾಖಾ ಸಹಾಯಕ ಕಾರ್ಯಪಾಲಕ ಅಭಿಯಂತರರಿಗೆ ವಿದ್ಯುತ್ ಗ್ರಾಹಕರ ಸಲಹಾ ಸಮಿತಿ ಸದಸ್ಯರುಗಳು ಸೂಚಿಸಿದರು.
ಇಲ್ಲಿನ ವಿದ್ಯುತ್ ಇಲಾಖಾ ಕಚೇರಿ ಆವರಣದಲ್ಲಿ ಆಯೋಜಿಸ ಲಾಗಿದ್ದ ಶಾಖಾ ಮಟ್ಟದ ವಿದ್ಯುತ್ ಗ್ರಾಹಕರ ಸಲಹಾ ಸಮಿತಿ ಸಭೆಯಲ್ಲಿ ಈ ಬಗ್ಗೆ ಸಲಹೆ ನೀಡಿದರು. ವಿದ್ಯುತ್ ಕಂಬಕ್ಕೆ ಅಳವಡಿಸಿರುವ ಟಿವಿ ಕೇಬಲ್ ಆಪರೇಟರ್‍ಗಳು ಬಾಡಿಗೆಯನ್ನು ಪಾವತಿಸದಿದ್ದಲ್ಲಿ ನಿರ್ದಾಕ್ಷಿಣ್ಯವಾಗಿ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಗೋಣಿಮರೂರು ಕುರುಬರ ಹಾಡಿಯಿಂದ ಕಾಫಿ ತೋಟದ ನಡುವೆ ಹಾದುಹೋಗಿರುವ ಕಂಬಗಳು ಅಪಾಯಕಾರಿ ಸ್ಥಿತಿಯಲ್ಲಿದ್ದು, ಕಂಬಗಳ ಅಂತರವು ಹೆಚ್ಚು ಇರುವದರಿಂದ ಮಧ್ಯಂತರ ಕಂಬಗಳನ್ನು ಅಳವಡಿಸಬೇಕೆಂದು ಗ್ರಾಹಕರ ಸಲಹಾ ಸಮಿತಿ ಸದಸ್ಯ ಮಂದಣ್ಣ ಸಭೆಗೆ ತಿಳಿಸಿದರು.
ಪಟ್ಟಣದ ರೇಂಜರ್ ಬ್ಲಾಕ್‍ನಲ್ಲಿ ಕಂಬ ಹಾಕಲು ಸಾಧ್ಯವಿಲ್ಲದಿದ್ದರೆ ಲ್ಯಾಡರ್ ಪೋಲ್ ಅಳವಡಿಸುವಂತೆ ಸಲಹಾ ಸಮಿತಿ ಸದಸ್ಯರಾದ ಟಿ.ಆರ್ ಮೋಹನ್ ಮನವಿ ಮಾಡಿದರು. ಯಡವಾರೆ ಗ್ರಾಮದ ವಿಶ್ವನಾಥ್ ಎಂಬವರ ಮನೆಯ ಸಮೀಪ ವಿದ್ಯುತ್ ಕಂಬ ಶಿಥಿಲಗೊಂಡಿದ್ದು, ಹೆಚ್ಚಿನ ಅನಾಹುತ ಸಂಭವಿಸುವ ಮೊದಲು ಕಂಬವನ್ನು ಬದಲಾಯಿಸ ಬೇಕೆಂದು ಸದಸ್ಯ ಎಂ.ಪಿ. ಧರ್ಮ ಸಭೆಗೆ ತಿಳಿಸಿದರು. ಅಧ್ಯಕ್ಷತೆ ವಹಿಸಿದ್ದ ಸಹಾಯಕ ಅಭಿಯಂತರ ನೀಲಶೆಟ್ಟಿ ಪ್ರಸ್ತುತ ನಿಗಮದಲ್ಲಿ ಚಾಲ್ತಿಯಲ್ಲಿರುವ ಯೋಜನೆಗಳು ಮತ್ತು ಕಾಮಗಾರಿಗಳ ಬಗ್ಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ಸದಸ್ಯ ರಂಗೇಗೌಡ, ಸೋಮವಾರಪೇಟೆ ಶಾಖೆಯ ಶಾಖಾಧಿಕಾರಿ ದಯಾನಂದ್, ಆಲೂರು ಸಿದ್ದಾಪುರ ಶಾಖೆಯ ಕಿರಿಯ ಅಭಿಯಂತರ ಎಂ.ಆರ್. ರಂಗಸ್ವಾಮಿ, ಸಲಹಾ ಸಮಿತಿ ಸದಸ್ಯರಾದ ನೇತ್ರಾವತಿ ಸೋಮಪ್ಪ, ಎಸ್.ಪಿ. ಪ್ರಸನ್ನ, ಸಿ.ಎಸ್. ನಿಂಗರಾಜು ಉಪಸ್ಥಿತರಿದ್ದರು.