ಗೋಣಿಕೊಪ್ಪಲು, ಏ.14: ಕೊಡವರನ್ನು ಜೀತಪದ್ಧತಿ ಹೆಸರಿನಲ್ಲಿ ಅವಹೇಳನ, ಅಪಪ್ರಚಾರ ಮಾಡಲಾಗುತ್ತಿದೆ. ದಿಡ್ಡಳ್ಳಿ ಪ್ರಕರಣವನ್ನು ಸುಲಭವಾಗಿ ಪರಿಹರಿಸಬಹುದಾಗಿದ್ದರೂ ಕೊಡವ ಜನಾಂಗವನ್ನು ಬ್ಲಾಕ್‍ಮೇಲ್ ಮಾಡುವ ತಂತ್ರವಾಗಿ ದಿಡ್ಡಳ್ಳಿ ಪ್ರಕರಣವನ್ನು ಜೀವಂತವಾಗಿ ಇಡಲಾಗಿದೆ. ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರ ಬಗ್ಗೆ ಗೌರವವಿತ್ತು. ಆದರೆ, ದಿಡ್ಡಳ್ಳಿ ಪ್ರಕರಣದಲ್ಲಿ ಇಡೀ ಕೊಡವ ಸಮುದಾಯವನ್ನು ತಲೆತಗ್ಗಿಸುವಂತೆ ಮಾಡ ಹೊರಟಿರುವದು ಶ್ರೀಮಂತ ಸಂಸ್ಕೃತಿಗೆ ಬಗೆಯುತ್ತಿರುವ ದ್ರೋಹವಾಗಿದೆ ಎಂದು ಸಿಎನ್‍ಸಿ ಸಂಘಟನೆಯ ಅಧ್ಯಕ್ಷ ಎನ್.ಯು.ನಾಚಪ್ಪ ಹೇಳಿದರು.

ಎಡಮ್ಯಾರ್ ಪ್ರಯುಕ್ತ ನಡೆದ ಪಂಜಿನ ಮೆರವಣಿಗೆ ಸಂದರ್ಭ ಅವರು ಮಾತನಾಡಿದರು. ವಸಂತ ಋತು ಮುಗಿಯುತ್ತಿದ್ದಂತೆ ಎಡಮ್ಯಾರ್ ಆಚರಣೆ ಮಾಡಲಾಗುತ್ತಿದೆ. ಕೊಡವರ ನೂತನ ವರ್ಷ ಏಪ್ರಿಲ್ 14 ರಂದು ಎಡಮ್ಯಾರ್ ಆಚರಣೆಯನ್ನು ಮಾಡಲಾಗುತ್ತಿದೆ. ಸಿಎನ್‍ಸಿ ಸಂಘಟನೆಯು ಕಳೆದ 27 ವರ್ಷದಿಂದ ಕೊಡವ ಮೂಲ ನಿವಾಸಿ ಜನಾಂಗದ ವಿವಿಧ ಬೇಡಿಕೆಗಳಿಗಾಗಿ ಹೋರಾಟ ನಡೆಸುತ್ತಾ ಬಂದಿದೆ. ಕೊಡಗಿನ ಮನೆ ಮನೆಗಳಲ್ಲಿ ಕೊಡವರ ವರ್ಷಾಚರಣೆ ಮಾಡುವಂತಾಗಬೇಕು. ಎಡಮ್ಯಾರ್ ನಂತರವೇ ಕೊಡವರ ಹಬ್ಬಗಳು ಆರಂಭಗೊಳ್ಳುತ್ತವೆ. ಕಾರಣ ಕೊಡುಪೆÇೀ, ಊರ-ನಾಡ ದೇವತೆ ಹಬ್ಬಗಳು ಕೈಲ್‍ಪೆÇಲ್ದ್, ಕಾವೇರಿ ಚಂಗ್ರಾಂದಿ, ಹುತ್ತರಿ ಮುಂತಾದ ಹಬ್ಬಗಳು ಆರಂಭವಾಗುತ್ತವೆ ಎಂದು ಹೇಳಿದರು.

ಚಿಕ್ಕಬೆಟಗೇರಿಯಲ್ಲಿ ಉಳುಮೆ : ಎಡಮ್ಯಾರ್ ನೂತನ ವರ್ಷವನ್ನು ಸ್ವಾಗತಿಸಲು ಇಂದು ಬೆಳಿಗ್ಗೆ ಕುಶಾಲನಗರ ಹೋಬಳಿಯ ಚಿಕ್ಕಬೆಟಗೇರಿಯ ನಂದಿನೆರವಂಡ ಉತ್ತಪ್ಪ ಅವರ ಹೊಲದಲ್ಲಿ ಜೋಡೆತ್ತಿನ ಉಳುಮೆ ಕಾರ್ಯ ನಡೆಸಲಾಯಿತು. ಮಧ್ಯಾಹ್ನ 1 ಗಂಟೆಯವರೆಗೂ ಗದ್ದೆಯನ್ನು ಉಳುಮೆ ಮಾಡುವ ಮೂಲಕ ಭೂಮಿತಾಯಿಗೆ ಮೊದಲ ಗೌರವ, ಪೂಜೆ ಸಲ್ಲಿಸಲಾಯಿತು. ಭೂಮಿಪೂಜೆ ಸಂದರ್ಭ ಪುಲ್ಲೇರ ಕಾಳಪ್ಪ, ನಂದಿನೆರವಂಡ ವಿಜು, ಮಣವಟ್ಟಿರ ಮೋಟಯ್ಯ, ನಂದಿನೆರವಂಡ ಉತ್ತಪ್ಪ ಮುಂತಾದವರು ಉಪಸ್ಥಿತರಿದ್ದರು.

ಸಂಜೆ ಮೆರವಣಿಗೆ : ಎಡಮ್ಯಾರ್ ಆಚರಣೆ ಅಂಗವಾಗಿ ಗೋಣಿಕೊಪ್ಪಲು ಎಪಿಎಂಸಿ ಆವರಣದಿಂದ ಇಲ್ಲಿನ ಪರಿಮಳ ಮಂಗಳ ವಿಹಾರದವರೆಗೆ ಪಂಜಿನ ಮೆರವಣಿಗೆಯಲ್ಲಿ ಕೊಡವ ಪುರುಷ, ಮಹಿಳೆಯರು, ಯುವಜನಾಂಗ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಮೆರವಣಿಗೆ ನಡೆಸಿದರು.

ಕೊಡವರಿಗೆ ಸಂವಿಧಾನದ 51ನೇ ವಿಧಿ ಪ್ರಕಾರ ಸಣ್ಣ ಸಮುದಾಯದ ಸ್ಥಾನಮಾನ ನೀಡುವದು, ಕೊಡವ ಭಾಷೆಯನ್ನು 8 ನೇ ಪರಿಚ್ಛೇದಕ್ಕೆ ಸೇರಿಸುವದು, ಕೊಡಗು ಜಿಲ್ಲೆ ಉಗ್ರಗಾಮಿಗಳ ಅಡಗು ತಾಣ ವಾಗುತ್ತಿದ್ದು ‘ರಾ’ ಮಾದರಿಯ ಏಜೆನ್ಸಿಯನ್ನು ಸ್ಥಾಪಿಸುವದು ಇವೇ ಮುಂತಾದ ಬೇಡಿಕೆಗಳ ಕುರಿತು ಹಕ್ಕೊತ್ತಾಯಕ್ಕಾಗಿ ಪಂಜಿನ ಮೆರವಣಿಗೆಯನ್ನು ಏರ್ಪಡಿಸಲಾಗಿದೆ ಎಂದು ನಾಚಪ್ಪ ಮಾಹಿತಿ ನೀಡಿದರು.

- ಟಿ.ಎಲ್. ಶ್ರೀನಿವಾಸ್