ಸುಂಟಿಕೊಪ್ಪ, ಏ. 14: ಇಲ್ಲಿನ ಗದ್ದೆಹಳ್ಳದ ಬಾಲಕರ ವಸತಿ ನಿಲಯದ ಕಡೆ ಹೋಗುವ ರಸ್ತೆಯಲ್ಲಿದ್ದ ಬಾವಿಯ ಕಟ್ಟೆಯನ್ನು ಒಡೆದು ಹಾಕಿ ಮೃತ್ಯುವಿನ ಆಹ್ವಾನ ನೀಡುತ್ತಿರುವದು ಬೆಳಕಿಗೆ ಬಂದಿದೆ.

ಇಲ್ಲಿನ ಗ್ರಾಮ ಪಂಚಾಯಿತಿಗೆ ಸೇರಿದ ಅಂದಾಜು ಸುಮಾರು 30 ವರ್ಷಗಳ ಹಿಂದೆ ನಿರ್ಮಿಸಿದ 50 ಅಡಿ ಆಳದ ಬಾವಿಯಿದ್ದು, ಕಟ್ಟೆಯಿಂದ ಕಟ್ಟಿ ಸುಸಜ್ಜಿತವಾಗಿ ನಿರ್ಮಿಸಲಾಗಿತ್ತು. ಆದರೆ ಇಲ್ಲಿನ ಗ್ರಾಮ ಪಂಚಾಯಿತಿಯು ಉಪಯೋಗವಿಲ್ಲದ ಬಾವಿಯನ್ನು ಮುಚ್ಚಿಸುವ ಕಾರ್ಯಕ್ಕೆ ಕೈ ಹಾಕಿ ಬಾವಿಯ ಕಟ್ಟೆಯನ್ನು ಒಡೆದು ಹಾಕಿ ಅದಕ್ಕೆ ಮಣ್ಣು ತುಂಬಿಸಿ ಮುಚ್ಚುವ ಪ್ರಯತ್ನ ನಡೆಸಿದೆ. ಆದರೆ ಆ ಬಾವಿಯು ಬಹಳ ಆಳವಿರುವದ ರಿಂದ ಮಣ್ಣನ್ನು ಹಾಕುವ ಸಾಹಸ ವನ್ನು ಕೈ ಬಿಟ್ಟು ತಂತಿ ಬೇಲಿಯನ್ನು ನಿರ್ಮಿಸಬೇಕಿದೆ.

ಈ ಬಾವಿಯ ಸಮೀಪದಲ್ಲೇ ಬಾಲಕರ ವಸತಿ ನಿಲಯ ಮತ್ತು ಅನೇಕ ಮನೆಗಳಿದ್ದು, ಸಣ್ಣ ಮಕ್ಕಳಿಗೆ ಅಪಾಯ ಕಾದಿದೆ. ಅಲ್ಲದೇ ವಸತಿ ನಿಲಯದ ಕಡೆಯಿಂದ ವಾಹನಗಳು ನಿಯಂತ್ರಣ ತಪ್ಪಿದರೆ ಬಾವಿಗೆ ಬಿದ್ದು ಪ್ರಾಣ ಕಳೆದುಕೊಳ್ಳುವ ಅಪಾಯವಿದೆ. ಕೂಡಲೇ ಗ್ರಾಮ ಪಂಚಾಯಿತಿ ಬೇಲಿಯನ್ನು ತೆಗೆದುಹಾಕಿ ಮೊದಲಿದ್ದಂತೆ ಕಲ್ಲಿನ ಕಟ್ಟೆಯನ್ನು ಕಟ್ಟಿ ಸುರಕ್ಷತೆ ಕಾಪಾಡಬೇಕೆಂದು ಈ ಭಾಗದ ಮನೆಯವರು ಮತ್ತು ವಸತಿ ನಿಲಯದ ವಿದ್ಯಾರ್ಥಿಗಳು ಕೇಳಿಕೊಂಡಿದ್ದಾರೆ.