ಸುಂಟಿಕೊಪ್ಪ, ಏ. 14: ಇಲ್ಲಿಗೆ ಸಮೀಪದ ಏಳನೇ ಹೊಸಕೋಟೆಯ ಮೆಟ್ನಹಳ್ಳಿಯಲ್ಲಿ ಕಾಡಾನೆಯ ಧಾಳಿಗೆ ಸಾವನ್ನಪ್ಪಿದ ಸರೋಜ ಅವರ ಮನೆಗೆ ಮಡಿಕೇರಿ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಭೇಟಿ ಮಾಡಿ ಮನೆಯವರಿಗೆ ವೈಯಕ್ತಿಕ ಪರಿಹಾರ ಧನವನ್ನು ನೀಡಿ ಸಾಂತ್ವನ ಹೇಳಿದರು.

ಸೋಮವಾರ ಸಂಜೆ ವೇಳೆಗೆ ಶಾಸಕರು ಆಗಮಿಸಿ ಕಾಡಾನೆ ಧಾಳಿ ಮಾಡಿದ ಸ್ಥಳವನ್ನು ವೀಕ್ಷಿಸಿದರು. ಈ ಸಂದರ್ಭ ಗ್ರಾಮಸ್ಥರು ಪ್ರತಿನಿತ್ಯ ತಮ್ಮ ಮನೆಗಳ ಸುತ್ತಮುತ್ತಲು ಹಗಲು ರಾತ್ರಿಯೆನ್ನದೇ ಕಾಡಾನೆಗಳು ಓಡಾಡುತ್ತಿದ್ದು ಮನೆಯಿಂದ ಹೊರಬರುವದಕ್ಕೂ ಭಯವಾಗುತ್ತಿದೆ ಎಂದು ತಮ್ಮ ಅಳಲನ್ನು ತೋಡಿಕೊಂಡರು.

ಈ ವೇಳೆ ಮಾತನಾಡಿದ ಶಾಸಕ ಅಪ್ಪಚ್ಚು ರಂಜನ್, ಕಾಡಾನೆಗಳು ಕಾಡಿನಲ್ಲಿ ಆಹಾರದ ಕೊರತೆಯಿಂದ ನಾಡಿಗೆ ಬರುತ್ತಿವೆ. ಆನೆಗಳಿಗೆ ಸರಿ ಸುಮಾರು 300 ರಿಂದ 400 ಕೆ.ಜಿ.ಯಷ್ಟು ಆಹಾರ ಬೇಕಾಗಿದೆ. ಆದರೆ ಅರಣ್ಯದಲ್ಲಿ ಯಾವದೇ ಗಿಡಗಳಾಗಲೀ, ಸೊಪ್ಪುಗಳಾಗಲೀ ಇಲ್ಲದೇ ಇರುವದರಿಂದ ಆಹಾರ ಹುಡುಕುತ್ತಾ ಮನೆಯ ಸುತ್ತಮುತ್ತಲಿನ ಹಸಿರನ್ನು ಕಂಡು ಇಲ್ಲಿಗೆ ಬಂದು ಬಿಡುತ್ತವೆ ಎಂದರು.

ಈ ನಿಟ್ಟಿನಲ್ಲಿ ಅರಣ್ಯ ಇಲಾಖೆಗೆ ಸಲಹೆ ನೀಡಿದ್ದು, ಆ ಪ್ರಕಾರ 1000 ಎಕರೆಯಷ್ಟು ಅರಣ್ಯದಲ್ಲಿ ಹಲಸು, ಮಾವು, ಬಿದಿರು, ಹತ್ತಿ, ಗೋಳಿ ಮರಗಳನ್ನು ನೆಡುವದರ ಜೊತೆಗೆ ಪ್ರಾಣಿ-ಪಕ್ಷಿಗಳಿಗಾಗಿ ಕೆರೆಯನ್ನು ನಿರ್ಮಿಸಬೇಕು. ಆಗ ಕಾಡಾನೆಗಳ ಸಹಿತ ಬೇರೆ ಯಾವದೇ ಪ್ರಾಣಿಗಳು ಕಾಡು ಬಿಟ್ಟು ನಾಡಿಗೆ ಬರುವದಿಲ್ಲ ಎಂದು ಅಭಿಪ್ರಾಯಪಟ್ಟರು.

ಕಾಡಾನೆಗಳನ್ನು ತಡೆಯುವದಕ್ಕೆ ಈಗಾಗಲೇ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದೇನೆ. ಹಾಗೆಯೇ ಅರಣ್ಯ ಇಲಾಖೆಯವರು ಕೂಡ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಮಾಹಿತಿ ನೀಡಿದರು.

ಈ ಸಂದರ್ಭ ಗ್ರಾಮಸ್ಥರು, ಕಾಡಿನಿಂದ ಕಾಡಾನೆಗಳು ಬರದಂತೆ ಟ್ರಂಚ್ ನಿರ್ಮಿಸಬೇಕು. ಅಂದಗೋವೆ ಪೈಸಾರಿಯ ಸಮೀಪವಿರುವ ನರ್ಸರಿ ಬಳಿ ಮತ್ತು ತೊಂಡೂರು ಮಾರ್ಗವಾಗಿ ಈ ಭಾಗಕ್ಕೆ ನೇರವಾಗಿ ಮನೆಯತ್ತ ಬರುತ್ತಿದೆ. ಕೂಡಲೇ ಇದನ್ನು ತಡೆಗಟ್ಟಲು ವ್ಯವಸ್ಥೆ ಮಾಡಿಕೊಡಿ ಎಂದು ದುಃಖ ತೋಡಿ ಕೊಂಡ ದೃಶ್ಯ ಮನಕಲಕುವಂತಿತ್ತು.

ಈ ಬಗ್ಗೆ ಪ್ರತಿಕ್ರಿಯಿಸಿದ ಶಾಸಕರು, ಧಾಳಿ ಮಾಡುತ್ತಿರುವ ಒಂಟಿ ಸಲಗವನ್ನು ಹಿಡಿಯುವದಕ್ಕೆ ಒತ್ತಾಯ ಹಾಕುತ್ತೇನೆ. ಅರಣ್ಯ ಇಲಾಖೆ ಯವರಿಗೆ ಆನೆಗಳು ಬರದ ಹಾಗೇ ಎಲ್ಲ ಭಾಗಗಳಲ್ಲೂ ಟ್ರಂಚ್ ತೆಗೆಯುವ ವ್ಯವಸ್ಥೆಯನ್ನು ಮಾಡಿಸುತ್ತೇನೆ ಎಂದು ಭರವಸೆ ನೀಡಿದರು.

ಈ ಸಂದರ್ಭ ಏಳನೇ ಹೊಸಕೋಟೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಮುಸಾಫಾ (ಕುಂಞಕುಟ್ಟಿ), ಕಾಫಿ ಬೆಳೆಗಾರ ದಾಸಂಡ ರಮೇಶ್, ಏಳನೇ ಹೊಸಕೋಟೆ ಬಿಜೆಪಿ ಸ್ಥಾನೀಯ ಸಮಿತಿ ಅಧ್ಯಕ್ಷ ಬಿಜು ಹಾಗೂ ಇತರರು ಗ್ರಾಮಸ್ಥರೊಂದಿಗೆ ಪಾಲ್ಗೊಂಡಿದ್ದರು.