ವೀರಾಜಪೇಟೆ, ಏ. 14: ಕೊಡಗು ಜಿಲ್ಲಾ ರೋಮನ್ ಕ್ಯಾಥೋಲಿಕ್ ಸಂಘದ ಆಶ್ರಯದಲ್ಲಿ ತಾ. 21ರಿಂದ 23ರವರೆಗೆ ವೀರಾಜಪೇಟೆ ಸಂತ ಅನ್ನಮ್ಮ ಶಾಲಾ ಮೈದಾನದಲ್ಲಿ 6ನೇ ವರ್ಷದ ಟೆನ್ನಿಸ್ ಬಾಲ್ ಕ್ರಿಕೇಟ್ ಪಂದ್ಯಾಟ ವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂತ ಅನ್ನಮ್ಮನ ದೇವಾಲಯದ ನಿರ್ದೇಶಕ ಜೋಕಿಂ ರಾಡ್ರಿಗಾಸ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಜಿಲ್ಲೆಯಲ್ಲಿ ಒಟ್ಟು 30 ರೋಮನ್ ಕ್ಯಾಥೋಲಿಕ್ ಧರ್ಮಕೇಂದ್ರಗಳಿದ್ದು ಜನಾಂಗವನ್ನು ಒಂದೇ ವೇದಿಕೆಯಲ್ಲಿ ಸೇರಿಸಿ ಒಗ್ಗೂಡಿಸುವ ಕಾರ್ಯವನ್ನು ಪಂದ್ಯಾಟಗಳು ಮಾಡುತ್ತಿದೆ. ಈ ಪಂದ್ಯಾಟದಲ್ಲಿ ಅಂದಾಜು 40 ಕ್ಕೂ ಅಧಿಕ ತಂಡಗಳು ಭಾಗವಹಿಸಲಿವೆ. ಪ್ರಥಮ ಬಹುಮಾನ 25 ಸಾವಿರ ಹಾಗೂ ಟ್ರೋಫಿ, ದ್ವಿತೀಯ 15 ಸಾವಿರ ಹಾಗೂ ಟ್ರೋಫಿ ನೀಡಲಾಗು ವದು. ಸೆಮಿಫೈನಲ್ ಪ್ರವೇಶ ಪಡೆದ ತಂಡಕ್ಕೆ ತಲಾ 5 ಸಾವಿರ ನಗದು ನೀಡಲಾಗುವದು. ಉತ್ತಮ ತಂಡ, ಪಂದ್ಯ ಪುರುಷೋತ್ತಮ, ಸರಣಿ ಶ್ರೇಷ್ಠ, ಉತ್ತಮ ಆಲ್ ರೌಂಡರ್, ಉತ್ತಮ ಬೌಲರ್ ಪ್ರಶಸ್ತಿಯನ್ನು ನೀಡಲಾಗುವದು ಎಂದರು.
ತಾ. 21 ರಂದು ಪಂದ್ಯಾಟ ಉದ್ಘಾಟನೆಗೊಳ್ಳಲಿದ್ದು ಸಂತ ಅನ್ನಮ್ಮ ಧರ್ಮಕೇಂದ್ರದ ಧರ್ಮ ಗುರು ಫಾದರ್ ಮದಲೈಮುತ್ತು ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಫಾದರ್ ಟೆನ್ನಿಕುರಿಯನ್ ಉಪಸ್ಥಿತಲಿರುವರು. ತಾ. 23 ರಂದು ಅಪರಾಹ್ನ 3 ಗಂಟೆಗೆ ಸಮಾರೋಪ ಹಾಗೂ ಫೈನಲ್ ಪಂದ್ಯಾಟ ನಡೆಯಲಿದೆ. ಸಭೆಯ ಅಧ್ಯಕ್ಷತೆಯನ್ನು ಮೈಸೂರು ವಿಭಾಗ ಧರ್ಮ ಕೇಂದ್ರಗಳ ಧರ್ಮಾಧಿಕಾರಿ ಬಿಷಪ್ ಡಾ ವಿಲಿಯಂ ವಹಿಸಲಿದ್ದಾರೆ, ಅತಿಥಿಗಳಾಗಿ ವೀರಾಜಪೇಟೆ ಶಾಸಕ ಕೆ.ಜಿ ಬೋಪಯ್ಯ, ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ, ಉದ್ಯಮಿ ಸಿ.ಪಿ ಪ್ರಕಾಶ್, ಜಿಲ್ಲಾ ಕ್ರೈಸ್ತ ಸಂಘದ ಅಧ್ಯಕ್ಷ ಜಯರಾಜ್ ಉಪಸ್ಥಿತಲಿರು ವರು ಎಂದು ಹೇಳಿದರು. ಗೋಷ್ಠಿಯಲ್ಲಿ ಮರ್ವಿನ್ ಲೋಬೋ, ಝೂಡಿವಾಝ್ ಉಪಸ್ಥಿತರಿದ್ದರು.