ಗೋಣಿಕೊಪ್ಪಲು, ಏ. 14 : ಪ್ರಸೂತಿ, ಸ್ತ್ರೀರೋಗ ಮತ್ತು ಬಂಜೆತನಕ್ಕೆ ಸಂಬಂಧಪಟ್ಟಂತೆ ವಿಶೇಷ ವೈದ್ಯಕೀಯ ತರಬೇತಿ ಹಾಗೂ ಅನುಭವ ಹೊಂದಿರುವ ತಜ್ಞರಾದ ಡಾ. ಅಲ್ಲಮಪ್ರಭು ಅವರು ಪೊನ್ನಂಪೇಟೆಯ ಶ್ರೀ ರಾಮಕೃಷ್ಣ ಶಾರದಾಶ್ರಮದ ಆಸ್ಪತ್ರೆಯಲ್ಲಿ ಸೇವೆಗೆ ನಿಯುಕ್ತಿಗೊಂಡಿದ್ದಾರೆ. ಭಾರತೀಯ ಸೇನೆಯಲ್ಲಿ ಅನೇಕ ವರ್ಷಗಳ ಕಾಲ ವೈದ್ಯರಾಗಿ ಸೇವೆ ಸಲ್ಲಿಸಿರುವ ಇವರು ಭಾರತದ ಹಾಗೂ ವಿಶ್ವದ ಅನೇಕ ವಿಶ್ವವಿದ್ಯಾನಿಲಯಗಳಿಂದ ವೈದ್ಯಕೀಯ ಉನ್ನತ ಶಿಕ್ಷಣವನ್ನು ಪಡೆದಿದ್ದಾರೆ. ಮೂಲತಃ ಹುಬ್ಬಳ್ಳಿಯವರಾದ ಇವರು ರಾಯಚೂರು ಜಿಲ್ಲೆಯ ಕುಕನೂರಿನಲ್ಲಿ ನೆಲೆಸಿರುವ ಜವಾಹರ ನವೋದಯ ಶಾಲೆಯಲ್ಲಿ ಶಿಕ್ಷಣವನ್ನು ಪಡೆದಿದ್ದಾರೆ. ಶ್ರೀ ರಾಮಕೃಷ್ಣ, ಶಾರದಾದೇವಿ ಹಾಗೂ ಸ್ವಾಮಿ ವಿವೇಕಾನಂದರ ಭಕ್ತರಾದ ಇವರು ಪೊನ್ನಂಪೇಟೆಯ ಶ್ರೀ ರಾಮಕೃಷ್ಣ ಶಾರದಾಶ್ರಮದ ಆಸ್ಪತ್ರೆಯಲ್ಲಿ ಪ್ರಸೂತಿ, ಸ್ತ್ರೀರೋಗ, ಅಲ್ಟ್ರಾ ಸೋನೋಗ್ರಾಫಿ, ತುರ್ತು ವೈದ್ಯಕೀಯ ಸೇವೆ ಮತ್ತು ಬಂಜೆತನಕ್ಕೆ ಸಂಬಂಧ ಪಟ್ಟ ಹಾಗೆ ವೈದ್ಯಕೀಯ ಸೇವೆಯನ್ನು ಸಲ್ಲಿಸಬೇಕೆಂಬ ಹಂಬಲ ಮೊದಲಿನಿಂದ ಇದ್ದುದರಿಂದ, ಈಗ ಇಲ್ಲಿಗೆ ನಿಯುಕ್ತಿಗೊಂಡಿದ್ದಾರೆ. ಆಸಕ್ತರು ಇವರ ಪರಿಣಿತಿಯ ಉಪಯೋಗವನ್ನು ಪಡೆಯಬೇಕೆಂದು ಆಶ್ರಮದ ಅಧ್ಯಕ್ಷ ಸ್ವಾಮಿ ಬೋಧಸ್ವರೂಪಾನಂದಜೀ ಮನವಿ ಮಾಡಿದ್ದಾರೆ.