ಅಂದವಾದ ಶುದ್ದ ಬಿಳಿ ಮನೆ, ಚೆಂದದ ಶುದ್ದ ಉಡುಪುಗಳನ್ನು ಧರಿಸುವ ಗೃಹದ ಸುಶಿಕ್ಷಿತ ನಿವಾಸಿಗಳು.. ಈ ಚಿತ್ರದಲ್ಲಿರುವದು ಮಡಿಕೇರಿಯ ವಿವೇಕಾನಂದ ನಗರದಲ್ಲಿರುವ ಒಂದು ಮನೆಯ ಹೊರನೋಟ. ಹಲವಾರು ಅಂದ ಚೆಂದದ ಮನೆಗಳು ಈ ನಗರದಲ್ಲಿವೆ. ಆದರೂ, ಈ ನಗರದ ಒಟ್ಟಾರೆ ನೋಟ ದುಃಖ ತರುವಂತಹದ್ದು. ಕಾರಣ, ಇಲ್ಲಿನ ಹೆಚ್ಚಿನ ವಾಸಿಗಳು ತಮ್ಮ ಮನೆಗಳನ್ನು ಶುದ್ಧವಾಗಿಟ್ಟು ಕೊಳ್ಳುವಲ್ಲಿ ಸಫಲರಾಗಿದ್ದಾರೆಯೇ ಹೊರತು ತಮ್ಮ ಸುತ್ತಲ ಪರಿಸರದ ಶುಚಿತ್ವ ಕಾಪಾಡುವಲ್ಲಿ ವಿಫಲರಾಗಿ ದ್ದಾರೆ ಎನ್ನಬಹುದು.
ಈ ಮೇಲಿನ ಚಿತ್ರದಲ್ಲಿ ಕಾಣುವ ವ್ಯಥೆಯ ಸ್ಥಿತಿ ವಿವೇಕಾನಂದ ನಗರದ್ದಾಗಿದೆ. ಇಲ್ಲಿ ಕಸದ ಟ್ರ್ಯಾಕ್ಟರ್ ನಿತ್ಯವೂ ಬರುತ್ತದೆ. ಈ ಮೇಲೆ ಉಲ್ಲೇಖಿಸಿರುವ ಬಿಳಿ ಮನೆಯಲ್ಲಿ ವಾಸಿಸುವ ಗೃಹಿಣಿ ಪ್ರತಿ ಸಂಜೆ ತನ್ನ ಮನೆಯ ಕಸದ ಬುಟ್ಟಿಯನ್ನು ಹಿಡಿದು, ಸ್ವಲ್ಪ ದೂರ ನಡೆದು, ನಗರದ ಮುಕ್ತ ಜಾಗದಲ್ಲಿ ಬುಟ್ಟಿಯನ್ನು ಖಾಲಿಮಾಡುತ್ತಾರೆ. ಈ ಬಗ್ಗೆ ವಿಚಾರಿಸಿದಾಗ, “ಕಸದ ಟ್ರ್ಯಾಕ್ಟರ್ ಬರುತ್ತದೆ, ಆದರೆ ಅದು ನಮಗೆ ಬೇಕಾದ ಸಮಯದಲ್ಲಿ ಬರುವದಿಲ್ಲವಲ್ಲ?” ಎಂದು ಮರು ಪ್ರಶ್ನಿಸುತ್ತಾರೆ. ಮುಂದುವರೆದ ನಾನು, “ನೀವು ಓದಿ ತಿಳಿದವರು. ಈ ರೀತಿಯಾಗಿ ನೆಡೆದುಕೊಳ್ಳುವದು ನಿಮಗೆ ಶೋಭೆತರುವದಿಲ್ಲ್ಲ,” ಎಂದು ಹೇಳಿದರೆ, ಮುನಿಸಿಕೊಂಡ ಆಕೆ “ಇಲ್ಲಿ ಎಲ್ಲರೂ ಇಲ್ಲೇ ಕಸ ಹಾಕುತ್ತಾರೆ,” ಎಂದು ಸಿಡಿಮಿಡಿ ಗೊಂಡು ತಮ್ಮ ಶುದ್ಧವಾದ ಬಿಳಿಯ ಮನೆಗೆ ಹಿಂದಿರುಗುತ್ತಾರೆ. ವಿವೇಕಾನಂದ ನಗರದಲ್ಲಿದ್ದ ಮಾತ್ರಕ್ಕೆ ವಿವೇಕದಿಂದಿರ ಬೇಕೆಂದಿಲ್ಲವೆಂದು ಇವರು ನನಗೆ ಪರೋಕ್ಷವಾಗಿ ತಿಳಿಸಿದಂತಾಯಿತು. ತಿಳಿವಳಿಕೆಯುಳ್ಳವರು ಕುರಿ ಮಂದೆಯ ಹಿಂಬಾಲಕರಾಗಬೇಕೆ ?
ಹೆಚ್ಚು ಓದದವರಾದ ಪೌರಕಾರ್ಮಿಕರು, ನಿತ್ಯವೂ ಕಸ ತುಂಬಿದ, ವಾಸನೆ ಹೊಡೆಯುವ ಗಾಡಿಯಲ್ಲಿ ಮನೆಮನೆಗೆ ತೆರಳಿ ಕಸ ವಿಲೇವಾರಿ ಕಾರ್ಯದಲ್ಲಿ ತೊಡಗಿದ್ದರೆ, ಓದಿ ತಿಳಿದವರು ತಮ್ಮತಮ್ಮ ಮನೆಗಳ ಅಂದ ರಕ್ಷಿಸುತ್ತಾ, ನಗರದ ಶೋಭೆಯನ್ನು ಕಡೆಗಾಣಿಸುತ್ತಿರುವದು ವಿಪರ್ಯಾಸಕರ. ಇಂತಹ ಮನೋಭಾವವನ್ನು ತೊರೆದು “ಬಹು ಜನ ಹಿತಾಯ, ಬಹು ಜನ ಸುಖಾಯ” ಚಿಂತನೆ ರೂಢಿಸಿಕೊಳ್ಳಲಿ ಎಂದಷ್ಟೆ ನನ್ನ ಆಶಯ. -Pಜಿಆರ್