ಶನಿವಾರಸಂತೆ, ಏ. 14: ಶನಿವಾರಸಂತೆ ಗ್ರಾಮ ಪಂಚಾಯಿತಿಯ ಕಚೇರಿ ಸಭಾಂಗಣದಲ್ಲಿ ಇತ್ತೀಚೆಗೆ ಪಂಚಾಯಿತಿಯ ಸಾಮಾನ್ಯ ಸಭೆಯು ಅಧ್ಯಕ್ಷ ಮಹಮದ್ ಗೌಸ್ ಅಧ್ಯಕ್ಷತೆಯಲ್ಲಿ ನಡೆಯಿತು.

ಪಂಚಾಯಿತಿ ಅಧ್ಯಕ್ಷರು ಮಾತನಾಡುತ್ತಾ, ಜಿಲ್ಲಾಧಿಕಾರಿಗಳಲ್ಲಿ ಶನಿವಾರಸಂತೆಗೆ ಕಸ ವಿಲೇವಾರಿಗೆ 2 ಎಕರೆ ಜಾಗ ಮಂಜೂರು ಮಾಡಿದ್ದರೂ, ಜಾಗ ಗುರುತಿಸಿಕೊಟ್ಟಿಲ್ಲ ಎಂದಾಗ, ಸದಸ್ಯ ಸರ್ದಾರ್ ಪಾಶ ಜಾಗದ ಮಂಜೂರಾತಿ ಆದೇಶವನ್ನು ಸಂಬಂಧಪಟ್ಟ ಕಂದಾಯ ಇಲಾಖೆಗೆ ಸಲ್ಲಿಸಿ ಇದೊಂದು ಸೂಕ್ಷ್ಮ ವಿಷಯ ಎಂದರು. ಸಾರ್ವಜನಿಕರಿಗೆ ತುಂಬಾ ತೊಂದರೆಯಾಗುತ್ತಿದ್ದು, ಇದನ್ನು ಅಧ್ಯಕ್ಷರು ಮತ್ತು ಪಿಡಿಓ ಸೇರಿ ಸಂಬಂಧಪಟ್ಟ ಕಂದಾಯ ಇಲಾಖೆಗೆ ಮನವರಿಕೆ ಮಾಡಿಕೊಟ್ಟು ಸರ್ವೆ ಕಾರ್ಯ ಮಾಡಿಸಬೇಕು ಎಂದರು.

ಕಂದಾಯ ಇಲಾಖೆಯಲ್ಲಿ ‘94 ಸಿ’ ಹಕ್ಕುಪತ್ರ ಯಾಕೆ ಇಷ್ಟು ದಿನವಾದರೂ ವಿತರಿಸುತ್ತಿಲ್ಲವೆಂದು ಕೇಳಿದ್ದೀರಾ, ಎಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ಈ ಪ್ರಕ್ರಿಯೆಗಳು ಚಾಲ್ತಿಯಲ್ಲಿದ್ದು, ಕೆಲವು ಪಂಚಾಯಿತಿ ವ್ಯಾಪ್ತಿಯಲ್ಲಿ ಈಗಾಗಲೇ ವಿತರಿಸುತ್ತಿದ್ದಾರೆ ಎಂದು ಸದಸ್ಯರು ಗಮನ ಸೆಳೆದರು. ಪಿಡಿಓ ಇದರ ಬಗ್ಗೆ ಮಾಹಿತಿ ತಿಳಿದುಕೊಳ್ಳುತ್ತೇವೆ ಎಂದರು.

ಮಳೆಗಾಲ ಬರುವ ಮುಂಚೆ ಊರಿನ ಎಲ್ಲಾ ಚರಂಡಿಗಳು, ಕಟ್ಟೆಗಳನ್ನು ಸರಿಮಾಡಿಸಬೇಕು. ಈ ಬಗ್ಗೆ ಗಮನ ಹರಿಸಿ ಎಲ್ಲಾ ಚರಂಡಿ ಗಳ ಹೂಳು, ಕಸ ತೆಗೆದು, ಮಳೆಯ ನೀರು ಚರಂಡಿಗಳಲ್ಲಿ ಸರಾಗ ಹರಿಯು ವಂತೆ ಕ್ರಮ ತೆಗೆದುಕೊಳ್ಳಿ ಎಂದು ಅಧಿಕಾರಿಗಳಿಗೆ ಹೇಳಿದರು.

ಸದಸ್ಯ ಹರೀಶ್ ಮಾತನಾಡಿ ಶನಿವಾರಸಂತೆ ಕೆ.ಆರ್.ಸಿ. ಸರ್ಕಲ್‍ನಲ್ಲಿ ರಸ್ತೆಯ ಎರಡು ಬದಿ ಚರಂಡಿ ಕಾಮಗಾರಿಗಳನ್ನು ಏಕೆ ಮಾಡಿಸುತ್ತಿಲ್ಲವೆಂದು ಅಧ್ಯಕ್ಷರನ್ನು ತರಾಟೆಗೆ ಗೆತೆದುಕೊಂಡರು. ಇದಕ್ಕೆ ಸದಸ್ಯರುಗಳಾದ ಪಾಂಡು, ಉಷಾ, ಹೇಮಾವತಿ, ಸರ್ದಾರ್ ಧ್ವನಿಗೂಡಿಸಿ ದರು. ಸಭೆಯಲ್ಲಿ ಸಾರ್ವಜನಿಕರ ಅರ್ಜಿಗಳನ್ನು ಪರಿಶೀಲಿಸಲಾಯಿತು.

ಸಭೆಯಲ್ಲಿ ಲೆಕ್ಕಾಧಿಕಾರಿ ಹರಿಣಿ, ಕಂಪ್ಯೂಟರ್ ನಿರ್ವಾಹಕಿ ಫೌಜಿಯಾ ಉಪಸ್ಥಿತರಿದ್ದು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹರೀಶ್ ಸ್ವಾಗಿತಿಸಿ, ಕಾರ್ಯದರ್ಶಿ ತಮ್ಮಯ್ಯಾಚಾರ್ ವಂದಿಸಿದರು.