ಸೋಮವಾರಪೇಟೆ, ಏ. 14 : ಸೋಮವಾರಪೇಟೆ ಪಟ್ಟಣ ಪಂಚಾಯಿತಿ, ಬೇಳೂರು ಹಾಗೂ ಚೌಡ್ಲು ಗ್ರಾಮ ಪಂಚಾಯಿತಿಯ ಗಡಿಯನ್ನು ಹೊಂದಿಕೊಂಡಿರುವ ಕಕ್ಕೆ ಹೊಳೆ ಇತ್ತೀಚಿನ ದಿನಗಳಲ್ಲಿ ಕಸದ ತೊಟ್ಟಿಯಾಗಿ ಮಾರ್ಪಟ್ಟಿದೆ. ಮಳೆಗಾಲದಲ್ಲಿ ಮೈದುಂಬಿ ಹರಿಯುವ ಹೊಳೆಯಲ್ಲಿ ಇದೀಗ ಕೊಳಚೆ ನೀರು ಹರಿಯುತ್ತಿದ್ದು, ಇಡೀ ಪ್ರದೇಶ ಗಬ್ಬೆದ್ದು ನಾರುತ್ತಿದೆ.ನಗರದಲ್ಲಿರುವ ಬಹುತೇಕ ಚರಂಡಿಗಳ ಕೊಳಚೆ ನೀರು, ಗೃಹ ಬಳಕೆಯ ತ್ಯಾಜ್ಯಗಳು ಕಕ್ಕೆಹೊಳೆ ಯನ್ನು ಸೇರುತ್ತಿದ್ದರೆ, ಇದಕ್ಕೂ ಒಂದು ಹೆಜ್ಜೆ ಮುಂದೆ ಹೋಗಿರುವ ಕೊಳಕು ಮನಸ್ಥಿತಿಯ ಮಂದಿ ಪ್ಲಾಸ್ಟಿಕ್, ಕೊಳೆತ ಮಾಂಸ, ತ್ಯಾಜ್ಯ ಗಳನ್ನು ಹೊಳೆಗೆ ಎಸೆಯುತ್ತಿದ್ದಾರೆ.
ಪರಿಣಾಮ ಕಕ್ಕೆಹೊಳೆಯ ಪ್ರದೇಶ ಕ್ರಿಮಿಕೀಟಗಳ ಆವಾಸ ಸ್ಥಾನವಾಗಿದ್ದು, ಸಾಂಕ್ರಾಮಿಕ ರೋಗ ಗಳನ್ನು ಉತ್ಪಾದಿಸುವ ಕಾರ್ಖಾನೆ ಯಂತೆ ಮಾರ್ಪಾಡಾಗಿದೆ. ಹೊಟೇಲ್‍ಗಳ ತ್ಯಾಜ್ಯ, ನಗರದ ಮೀನು, ಮಾಂಸ ಅಂಗಡಿಗಳ ಕೊಳಚೆ ನೀರು, ಕೋಳಿಯ ಕಲ್ಮಶ ಸೇರಿದಂತೆ ಪ್ಲಾಸ್ಟಿಕ್, ಹಾಲಿನ ಖಾಲಿ ಪ್ಯಾಕೆಟ್‍ಗಳನ್ನು ನೇರವಾಗಿ ಹೊಳೆಗೆ ಹಾಕುತ್ತಿದ್ದಾರೆ. ಇದರಿಂದಾಗಿ ಹೊಳೆಯ ನೀರು ನೀಲಿಬಣ್ಣಕ್ಕೆ ತಿರುಗಿದ್ದು ಜಲಚರಗಳು ಮಾಯವಾಗಿ ದ್ದರೆ, ಸೊಳ್ಳೆ, ನೊಣಗಳ ಹಾವಳಿ ಮಿತಿಮೀರುತ್ತಿದೆ. ತ್ಯಾಜ್ಯ ಸಂಗ್ರಹಣೆ ಯಿಂದಾಗಿ ಕಕ್ಕೆಹೊಳೆ ಪ್ರದೇಶ ಗಬ್ಬೆದ್ದು ನಾರುತ್ತಿದ್ದು, ಅಕ್ಕಪಕ್ಕದ ನಿವಾಸಿಗಳು ವಾಕರಿಕೆಯೊಂದಿಗೆ ಜೀವನ ಸಾಗಿಸಬೇಕಾಗಿದೆ ಎಂದು ಸ್ಥಳೀಯರು ಅಳಲು ತೋಡಿಕೊಂಡಿದ್ದಾರೆ.
ಕೆಲವೊಮ್ಮೆ ಪಟ್ಟಣದ ಚರಂಡಿಯ ಮೂಲಕ ಖಾಸಗಿ ಹಾಗೂ ಸರ್ಕಾರಿ ಬಸ್ ನಿಲ್ದಾಣದ ಶೌಚಗೃಹದ ಕಲ್ಮಶ ನೀರನ್ನು ಇದೇ ಹೊಳೆಗೆ ಹರಿಸುತ್ತಿದ್ದು, ಜೀವಜಲ ವಾಗಬೇಕಾದ ಕಕ್ಕೆಹೊಳೆಯನ್ನು ಶೌಚದ ಗುಂಡಿಯಂತೆ ಮಾಡಲಾಗು ತ್ತಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚೌಡ್ಲು, ಬೇಳೂರು ಗ್ರಾಮ ಪಂಚಾಯಿತಿಯ ಗಡಿ ಹೊಂದಿ ಕೊಂಡಿರುವ ಕಕ್ಕೆಹೊಳೆಯ ಜಂಕ್ಷನ್ ಪಟ್ಟಣ ಪಂಚಾಯಿತಿ ವ್ಯಾಪ್ತಿಗೆ ಒಳ ಪಡುತ್ತಿದ್ದು, ತ್ಯಾಜ್ಯವನ್ನು ಹರಿಸು ವವರು ಶುಚಿತ್ವಕ್ಕೆ ತಿಲಾಂಜಲಿ ಇಟ್ಟಿದ್ದಾರೆ. ಪಟ್ಟಣ ಪಂಚಾಯಿತಿಯ ಚರಂಡಿ ಗಳಿಂದಲೇ ಕೊಳಚೆ ನೀರು ನೇರವಾಗಿ ಹೊಳೆ ಸೇರುತ್ತಿದೆ. ಕೆಲವರಂತೂ ರಾತ್ರಿ ವೇಳೆಯಲ್ಲಿ ಮೂಟೆಗಳಲ್ಲಿ ಕಸವನ್ನು ತುಂಬಿಸಿ ಹೊಳೆಗೆ ಎಸೆಯುತ್ತಿದ್ದಾರೆ. ಪ್ಲಾಸ್ಟಿಕ್‍ನೊಳಗೆ ಕೊಳೆಯುವ ತ್ಯಾಜ್ಯದಿಂದ ಇಡೀ ಪರಿಸರ ಗಬ್ಬೆದ್ದು ನಾರುತ್ತಿದ್ದು, ಮೂಗುಮುಚ್ಚಿಕೊಂಡು ತಿರುಗಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಇದೇ ಭಾಗದಲ್ಲಿ ಸೋಮವಾರಪೇಟೆ ತಾಲೂಕು ಪಂಚಾಯಿತಿಯ ಉಪಾಧ್ಯಕ್ಷರ ಮನೆಯೂ ಇದ್ದು, ಕಕ್ಕೆಹೊಳೆಯ ಶುಚಿತ್ವದ ಬಗ್ಗೆ ಸಂಬಂಧಿಸಿದ ಇಲಾಖೆ ಹಾಗೂ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಬೇಕೆಂದು ಸ್ಥಳೀಯರು ಪತ್ರಿಕೆ ಯೊಂದಿಗೆ ಆಗ್ರಹಿಸಿದ್ದಾರೆ. ಹೊಳೆಗೆ ಕಸವನ್ನು ಎಸೆಯುವ ಕೊಳಕು ಮನಸ್ಥಿತಿಯವರ ವಿರುದ್ಧ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲು ಉಪಾಧ್ಯಕ್ಷರು ಮುಂದಾಗಬೇಕೆಂದು ಒತ್ತಾಯಿಸಿ ದ್ದಾರೆ. ಒಟ್ಟಾರೆ ಮಳೆಗಾಲದಲ್ಲಿ ಮೈದುಂಬಿ ಹರಿದು ಸಾವಿರಾರು ಕೃಷಿಕರ ಕೃಷಿ ಕಾರ್ಯಕ್ಕೆ ಉಪಯೋಗಿಯಾಗಿರುವ, ಜನ-ಜಾನುವಾರುಗಳ ದಾಹವನ್ನು ನೀಗಿಸುವ ಕಕ್ಕೆಹೊಳೆ ಇದೀಗ ತ್ಯಾಜ್ಯಗಳಿಂದಾಗಿ ವಿಷಕಾರಿಯಾಗಿದೆ. ಈ ಪ್ರದೇಶದಲ್ಲಿ ಕಸವನ್ನು ಹಾಕುವದಕ್ಕೆ ಪಟ್ಟಣ ಪಂಚಾಯಿತಿ ನಿರ್ಬಂಧ ವಿಧಿಸಬೇಕಿದೆ. ಕಕ್ಕೆಹೊಳೆಯ ಶುಚಿತ್ವ ಕಾಪಾಡಲು ಸಂಬಂಧಿಸಿದ ಆಡಳಿತ ಯಂತ್ರ ಮುಂದಾಗಬೇಕಿದೆ.
- ವಿಜಯ್ ಹಾನಗಲ್