ಮಡಿಕೇರಿ, ಏ. 11: ಕೊಡವ ಕೌಟುಂಬಿಕ ಹಾಕಿ ಉತ್ಸವಕ್ಕೆ ಕ್ಷಣಗಣನೆ ಆರಂಭಗೊಂಡಿದೆ. ನಾಪೋಕ್ಲುವಿನಲ್ಲಿ 27 ದಿನಗಳ ಕಾಲ ನಡೆಯಲಿರುವ ಬಿದ್ದಾಟಂಡ ಕಪ್ ಹಾಕಿ ಉತ್ಸವದ ಅಧಿಕೃತ ಟೈಸ್ ಕಾರ್ಡ್‍ನ ಬಿಡುಗಡೆ ಇಂದು ನಗರದ ಪತ್ರಿಕಾಭವನದಲ್ಲಿ ನಡೆಯಿತು.ಸರಳ ಕಾರ್ಯಕ್ರಮದಲ್ಲಿ ಬಿದ್ದಾಟಂಡ ಕಪ್ ಹಾಕಿ ಉತ್ಸವ ಸಮಿತಿಯ ಪ್ರಮುಖ ಮೈದಾನ ಸಮಿತಿಯ ಅಧ್ಯಕ್ಷ ಬೆಳ್ಯಪ್ಪ ಅವರು ಟೈಸ್ ಬಿಡುಗಡೆ ಗೊಳಿಸಿ ಉತ್ಸವದ ಯಶಸ್ಸಿಗೆ ಸರ್ವರ ಸಹಕಾರ ಕೋರಿದರು. ಈ ಸಂದರ್ಭ ಉಪಸ್ಥಿತರಿದ್ದ ಉತ್ಸವ ಸಮಿತಿ ಪ್ರಮುಖ ಬಿ.ಎಸ್. ತಮ್ಮಯ್ಯ ಅವರು ಹಾಕಿ ಉತ್ಸವದ ತಯಾರಿಯ ಕುರಿತು ಮಾಹಿತಿ ನೀಡಿದರು.
(ಮೊದಲ ಪುಟದಿಂದ) ಟೈಸ್ ಕಾರ್ಡ್ ಅಧಿಕೃತವಾಗಿ ಬಿಡುಗಡೆಯಾಗುವ ಮುನ್ನ ಅದು ಹೇಗೋ ಸಾಮಾಜಿಕ ಜಾಲ ತಾಣದಲ್ಲಿ ಹರಿದಾಡಿದೆ. ಆದರೆ ಅದು ಅಧಿಕೃತವಲ್ಲ. ಇಂದು ಬಿಡುಗಡೆಯಾದ ಟೈಸ್ ಅಧಿಕೃತವಾದದ್ದು ಎಂದು ಸ್ಪಷ್ಟ ಪಡಿಸಿದರು.
ತಾ. 17 ರಂದು ಪಂದ್ಯಾಟಕ್ಕೆ ಚಾಲನೆ ದೊರೆಯಲಿದ್ದು, ಮಾಜಿ ಒಲಂಪಿಯನ್ ಡಾ|| ಎ.ಬಿ. ಸುಬ್ಬಯ್ಯ ಸಮಾರಂಭ ಉದ್ಘಾಟಿಸಲಿದ್ದಾರೆ. ಬೆಳಿಗ್ಗೆ 11ಕ್ಕೆ ಸಭಾ ಕಾರ್ಯಕ್ರಮವಿದ್ದು, 12.30 ರಿಂದ ವಿ.ಆರ್. ರಘುನಾಥ್ ನೇತೃತ್ವದ ರೆಸ್ಟ್ ಆಫ್ ಇಂಡಿಯಾ ಹಾಗೂ ಕೂರ್ಗ್ ರೆಜಿಮೆಂಟ್ ತಂಡಗಳ ನಡುವೆ ಪ್ರದರ್ಶನ ಪಂದ್ಯ ನಡೆಯಲಿದೆ. ಬಿ.ಜೆ. ಕಾರ್ಯಪ್ಪ ಕೋಚ್ ಆಗಿ ಪಾಲ್ಗೊಳ್ಳಲಿದ್ದಾರೆ. ಇದಾದ ಬಳಿಕ ಅಧಿಕೃತ ಪಂದ್ಯಾಟಗಳು ಆರಂಭಗೊಳ್ಳಲಿವೆ. ಒಟ್ಟು ಮೂರು ಮೈದಾನಗಳಲ್ಲಿ ಪಂದ್ಯಾಟ ಜರುಗಲಿದ್ದು, ದಿನವೊಂದಕ್ಕೆ 18 ರಿಂದ 21 ಪಂದ್ಯಗಳು ನಡೆಯಲಿವೆ. ಒಂದೇ ಆವರಣದಲ್ಲಿ ಮೂರು ಮೈದಾಗಳು ಇದ್ದು, ಜನರಲ್ ತಿಮ್ಮಯ್ಯ ಕ್ರೀಡಾಂಗಣ ಮುಖ್ಯ ಮೈದಾನವಾಗಿದೆ. ಹೊಸದಾಗಿ 3.10 ಎಕರೆ ಜಾಗದಲ್ಲಿ ನೂತನ ಮೈದಾನ ಸಿದ್ದಪಡಿಸಲಾಗಿದೆ ಎಂದು ತಮ್ಮಯ್ಯ ಮಾಹಿತಿಯಿತ್ತರು.
ಟೈಸ್ ಕಾರ್ಡ್ ತಯಾರಿ ಕ್ಲಿಷ್ಟಕರವಾದದ್ದು, ವಿವಿಧೆಡೆ ಊರಹಬ್ಬ, ಮದುವೆಯಂತಹ ನಿಗದಿತ ಸಮಾರಂಭಗಳನ್ನು ಗಮನದಲ್ಲಿಟ್ಟುಕೊಂಡು ಟೈಸ್ ರಚಿಸಬೇಕಿದೆ. ಈ ನಿಟ್ಟಿನಲ್ಲಿ ತಾಂತ್ರಿಕ ಸಮಿತಿಯ ಬುಟ್ಟಿಯಂಡ ಚಂಗಪ್ಪ ನೇತೃತ್ವದ ತಂಡ ಶ್ರಮವಹಿಸಿದೆ. ಟೈಸ್ ತಯಾರಿ ಸಂದರ್ಭ ಇನ್ನೂ ನಾಲ್ಕು ತಂಡಗಳು ಮುಂದೆ ಬಂದರೂ ಸೇರ್ಪಡೆ ಸಾಧ್ಯವಾಗಿಲ್ಲ. 306 ತಂಡಗಳಿಗೇ ಸೀಮಿತವಾಗಿದೆ ಎಂದು ಅವರು ತಿಳಿಸಿದರು. ಈ ಸಂದರ್ಭ ತಾಂತ್ರಿಕ ಸಮಿತಿಯ ಬಿದ್ದಾಟಂಡ ಸಂಪತ್ ಹಾಜರಿದ್ದರು
.ಪೈಕೇರ ಕಪ್ ಕ್ರಿಕೆಟ್ - 208 ತಂಡಗಳು
ಮಡಿಕೇರಿ, ಏ. 11: ಕೊಡಗು ಗೌಡ ಯುವ ವೇದಿಕೆ ವತಿಯಿಂದ ಹತ್ತು ಕುಟುಂಬ ಹದಿನೆಂಟು ಗೋತ್ರದ ಗೌಡ ಜನಾಂಗದ ನಡುವೆ ನಡೆಯಲಿರುವ ಪೈಕೇರ ಕಪ್ ಕ್ರಿಕೆಟ್ ಪಂದ್ಯಾವಳಿಯ ಟೈಸ್ ಅನ್ನು ಇಂದು ಬಿಡುಗಡೆ ಮಾಡಲಾಯಿತು.
ಕೆಳಗಿನ ಗೌಡ ಸಮಾಜದಲ್ಲಿ ವೇದಿಕೆ ಅಧ್ಯಕ್ಷ ಮನೋಹರ್ ಮಾದಪ್ಪ ಬಿಡುಗಡೆ ಮಾಡಿದರು. ಈ ಬಾರಿ ಪಂದ್ಯಾಟದಲ್ಲಿ 208 ತಂಡಗಳು ಪ್ರಶಸ್ತಿಗಾಗಿ ಸೆಣಸಲಿವೆ ಎಂದು ವೇದಿಕೆ ಕಾರ್ಯದರ್ಶಿ ಕಟ್ಟೆಮನೆ ರೋಷನ್ ತಿಳಿಸಿದ್ದಾರೆ. ಟೈಸ್ ಬಿಡುಗಡೆ ಸಂದರ್ಭ ಗೌಡ ಯುವ ವೇದಿಕೆಯ ಪದಾಧಿಕಾರಿಗಳಾದ ಬಾಳಾಡಿ ಮನೋಜ್, ಯಾಲದಾಳು ಹರೀಶ್ ಮತ್ತಿತರರು ಇದ್ದರು.
ಮನ್ನಕಮನೆ ಕ್ರಿಕೆಟ್ ಲಾಂಛನ ಅನಾವರಣ
ಗೋಣಿಕೊಪ್ಪಲು, ಏ. 11: ಮೇ ತಿಂಗಳಿನಲ್ಲಿ ನಡೆಯುವ ಮನ್ನಕಮನೆ ಕ್ರಿಕೆಟ್ ಕಪ್ ಲಾಂಛನವನ್ನು ಅಖಿಲ ಅಮ್ಮಕೊಡವ ಸಮಾಜ ಅಧ್ಯಕ್ಷ ಬಾನಂಡ ಪ್ರತ್ಯು ಅನಾವರಣಗೊಳಿಸಿದರು.
ಅಖಿಲ ಅಮ್ಮಕೊಡವ ಸಮಾಜ ಹಾಗೂ ಮನ್ನಕಮನೆ ಕುಟುಂಬದ ಆಶ್ರಯದಲ್ಲಿ ಅಮ್ಮಕೊಡವ ಸಮಾಜದ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅನಾವರಣಗೊಳಿಸಿದರು. ನಂತರ ಮಾತನಾಡಿದ ಬಾನಂಡ ಪ್ರತ್ಯು, ಕಳೆದ 2 ವರ್ಷ ಅಮ್ಮಕೊಡವ ನಡೆಸುತ್ತಿದ್ದ
(ಮೊದಲ ಪುಟದಿಂದ) ಕ್ರಿಕೆಟ್ ಕಪ್‍ನ್ನು ಅಖಿಲ ಅಮ್ಮ ಕೊಡವ ಸಮಾಜ ನಡೆಸುತ್ತಾ ಬಂದಿತ್ತು. ಮನ್ನಕಮನೆ ಕುಟುಂಬ ಕ್ರಿಕೆಟ್ ಕಪ್ ಆಚರಿಸಲು ಮುಂದೆ ಬಂದಿರುವದರಿಂದ ಮನ್ನಕಮನೆ ಹೆಸರಿನಲ್ಲಿ ಪಂದ್ಯಾಟ ನಡೆಸುತ್ತಿದ್ದೇವೆ ಎಂದರು.
ಮೇ 6 ರಿಂದ ಮೂರು ದಿನ ಹಾತೂರು ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಮೈದಾನದಲ್ಲಿ ಕ್ರಿಕೆಟ್ ನಡೆಯಲಿದೆ. ಅಮ್ಮಕೊಡವ ಕುಟುಂಬದಲ್ಲಿ 27 ಕುಟುಂಬಗಳಿವೆ. ಕಳೆದ ಬಾರಿ 22 ತಂಡಗಳು ಪಾಲ್ಗೊಂಡಿದ್ದವು. ಈ ಬಾರಿ 25 ತಂಡಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದರು.
ಕಾರ್ಯದರ್ಶಿ ಮನ್ನಕಮನೆ ಬಾಲಕೃಷ್ಣ ಮಾತನಾಡಿ, ಮಹಿಳೆಯರು ಹಾಗೂ ಮಕ್ಕಳಿಗೂ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಈ ಬಾರಿ ಪುರುಷರು, ಮಹಿಳೆಯರಿಗೆ ಹಗ್ಗಜಗ್ಗಾಟ ಸ್ಪರ್ಧೆ ಏರ್ಪಡಿಸಲಾಗಿದೆ. ವಾಲಗತ್ತಾಟ್ ನಡೆಯಲಿದೆ. ಮೂರು ದಿನ ಅನ್ನದಾನದ ಮೂಲಕ ಹೆಚ್ಚು ಜನರು ಪಾಲ್ಗೊಳ್ಳಲು ಅವಕಾಶ ನೀಡಲಾಗುವದು ಎಂದರು.
ಮನ್ನಕಮನೆ ಕುಟುಂಬ ಅಧ್ಯಕ್ಷ ಮನ್ನಕಮನೆ ರವಿ ಮಾತನಾಡಿ, ಮೂರನೇ ವರ್ಷದ ಅಮ್ಮಕೊಡವ ಕ್ರೀಡಾಕೂಟವನ್ನು ಮೊದಲ ಬಾರಿಗೆ ಕುಟುಂಬವೊಂದು ಆಚರಿಸುತ್ತಿರುವದು ಹೆಮ್ಮೆಯ ವಿಚಾರವಾಗಿದೆ. ನಮ್ಮದೇ ಖರ್ಚಿನಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಗುವದು ಎಂದರು.
ಈ ಸಂದರ್ಭ ಕೋತೂರು ಶ್ರಿ ಕೃಷ್ಣ ಅಮ್ಮಕೊಡವ ಸಂಘದ ಅಧ್ಯಕ್ಷ ಮನ್ನಕಮನೆ ರಾಜು, ಕಾರ್ಯದರ್ಶಿ ಮನ್ನಕಮನೆ ಪ್ರಕಾಶ್, ಸಮಾಜದ ನಿರ್ದೇಶಕರುಗಳಾದ ಅಮ್ಮತ್ತೀರ ರಾಜೇಶ್, ಬಾಚಮಡ ರಾಜೇಶ್, ಬಲ್ಯಂಡ ಶೇಷಸೈನ, ಬಲ್ಯಂಡ ದಿನು ಅರುಣ ಉಪಸ್ಥಿತರಿದ್ದರು.