ಬೆಂಗಳೂರು, ಏ. 11: ರಾಜ್ಯದಲ್ಲಿ ಜೀತ ಪದ್ಧತಿ ಸಂಪೂರ್ಣವಾಗಿ ರದ್ದಾಗಿದ್ದರೂ ಕೊಡಗಿನ ಕೆಲವೆಡೆ ಇಂದಿಗೂ ಜೀತ ಪದ್ಧತಿ ಜೀವಂತವಿರುವದರ ಬಗ್ಗೆ ದೂರುಗಳು ಬರುತ್ತಿದೆ. ಪರಿಶೀಲನೆ ವೇಳೆ ‘ಜೀತ ಪದ್ಧತಿ’ ಪತ್ತೆಯಾದರೆ ಅಂತಹವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಠಿಣ ಕ್ರಮ ಜರುಗಿಸಿ ಕಾನೂನಿನ ಮುಂದೆ ತಂದು ನಿಲ್ಲಿಸಲಾಗುವದು ಎಂದು ರಾಜ್ಯ ಕಂದಾಯ ಸಚಿವರಾದ ಕಾಗೋಡು ತಿಮ್ಮಪ್ಪ ಅವರು ಗಂಭೀರವಾದ ಎಚ್ಚರಿಕೆ ನೀಡಿದ್ದಾರೆ.
ಮಂಗಳವಾರದಂದು ದಿಡ್ಡಳ್ಳಿ ನಿರಾಶ್ರಿತರ ಪುನರ್ವಸತಿ ಕಲ್ಪಿಸುವ ಬಗ್ಗೆ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಸಭೆಯ ಬಳಿಕ ವಿಧಾನ ಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಕೊಡಗಿನ ಕೆಲವೆಡೆ ಕೂಲಿ ಕಾರ್ಮಿಕರ ಆಧಾರ್, ಪಡಿತರ, ಮತದಾರರ ಗುರುತಿನ ಚೀಟಿ ಮೊದಲಾದವುಗಳನ್ನು ಮಾಲೀಕರೆ ಇಟ್ಟುಕೊಂಡು ಕಾರ್ಮಿಕರನ್ನು ಕಡಿಮೆ ಸಂಬಳಕ್ಕೆ ದುಡಿಸಿ ಜೀತದಾಳುಗಳನ್ನಾಗಿ ಇಟ್ಟುಕೊಂಡಿರುವ ಬಗ್ಗೆ ಸರಕಾರಕ್ಕೆ ಮಾಹಿತಿ ದೊರೆತಿದೆ. ಆದ್ದರಿಂದ ಇದನ್ನು ಸರಕಾರ ಗಂಭೀರವಾಗಿ ಪರಿಗಣಿಸಿದ್ದು ಕೂಡಲೆ ಸಂಬಂಧಿಸಿದವರಿಂದ ಪರಿಶೀಲನೆ ನಡೆಸಲಾಗುವದು. ಈ ಸಂದರ್ಭದಲ್ಲಿ ಜೀತ ಪತ್ತೆಯಾದರೆ ಕಠಿಣ ಕ್ರಮ ಖಚಿತ ಎಂದರಲ್ಲದೆ, ಪತ್ತೆಯಾದ ಜೀತದಾಳುಗಳನ್ನು ಜೀತದಿಂದ ಮುಕ್ತಿಗೊಳಿಸಿ ಅವರಿಗೆ ಪುನರ್ವಸತಿ ಕಲ್ಪಿಸಲು ಸರಕಾರ ಮುಂದಾಗಲಿದೆ ಎಂದರು.
ದಿಡ್ಡಳ್ಳಿಯಲ್ಲಿ ವಾಸವಿದ್ದ ಆದಿವಾಸಿಗಳನ್ನು ಒಕ್ಕಲೆಬ್ಬಿಸಿದ್ದು ಕಾನೂನು ಬಾಹಿರ ಕ್ರಮ ಎಂದು ಒಪ್ಪಿಕೊಂಡ ಸಚಿವ ತಿಮ್ಮಪ್ಪ ಅವರು, ಆದಿವಾಸಿಗಳ ಸಂಪೂರ್ಣ ರಕ್ಷಣೆ ಸರಕಾರದ ಜವಾಬ್ದಾರಿಯಾಗಿದೆ. ಆದಿವಾಸಿಗಳ ದುಸ್ತರ ಬದುಕಿಗೆ ಅಂತ್ಯ ಹಾಡÀಬೇಕಿದೆ. ಆದ್ದರಿಂದ ಸರಕಾರ ಇದನ್ನು ಗಂಭೀರವಾಗಿ ಪರಿಗಣಿಸಿದೆ. ದಿಡ್ಡಳ್ಳಿ ಪ್ರದೇಶ ಅರಣ್ಯವೋ ಅಲ್ಲವೋ ಎಂಬ ಬಗ್ಗೆ ಗೊಂದಲ ಸೃಷ್ಟಿಯಾಗಿದ್ದು, ಇದನ್ನು ಶೀಘ್ರದಲ್ಲೇ ಖಾತ್ರಿಪಡಿಸಿಕೊಳ್ಳಲಾಗುವದು. ದಿಡ್ಡಳ್ಳಿ ಭೂ ಪ್ರದೇಶ ಅರಣ್ಯವಲ್ಲದಿದ್ದರೆ ಅಲ್ಲಿನ ಆದಿವಾಸಿಗಳಿಗೆ 8 ದಿನದಲ್ಲಿ ಹಕ್ಕುಪತ್ರ ವಿತರಿಸಲಾಗುವದು ಅಲ್ಲದೆ ಇಲಾಖೆ ವತಿಯಿಂದ ಮನೆಗಳನ್ನು ಅರ್ಹರಿಗೆ ನಿರ್ಮಿಸಿ ಕೊಡಲಾಗುವದು ಎಂದು ಹೇಳಿದರು.
ಕೊಡಗಿನ ಬಡ ಭೂರಹಿತರಿಗೆ ತಲಾ 3 ಎಕರೆ ಜಮೀನು ಮಂಜೂರುಗೊಳಿಸುವಂತೆ ಹಿರಿಯ ನ್ಯಾಯವಾದಿ ಎ.ಕೆ. ಸುಬ್ಬಯ್ಯ ಅವರು ನೀಡಿದ ಸಲಹೆಯನ್ನು ಸರಕಾರ ಗಂಭೀರವಾಗಿ ಪರಿಗಣಿಸುತ್ತದೆ. ಆದಿವಾಸಿ ಭೂಮಿ ವಂಚಿತರಿಗೆ ದರ್ಕಸರ್ಜಿ ನೀಡಿ ಕೃಷಿಗೆ ಯೋಗ್ಯ ಭೂಮಿಯನ್ನು ಶೀಘ್ರದಲ್ಲೇ ಒದಗಿಸಲಾಗುವದು. ಅದಕ್ಕಾಗಿ ಈಗಾಗಲೇ ಕಂದಾಯ ಜಾಗಗಳ ವಿವರ ನೀಡುವಂತೆ
(ಮೊದಲ ಪುಟದಿಂದ) ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಅವರು ವಿವರಿಸಿದರು.
ಕೊಡಗಿನಲ್ಲಿ ಒತ್ತುವರಿ ಮಾಡಿ ಕಾಫಿ ಕೃಷಿ ಮಾಡಿರುವ ಅಕ್ರಮ ಕಾಫಿ ತೋಟಗಳ ಬಗ್ಗೆ ಸರಕಾರ ಕ್ರಮಕ್ಕೆ ಮುಂದಾಗಿದೆ. ಈ ಕುರಿತು ಸಮಗ್ರ ವಾದ ಅಂಕಿ ಅಂಶ ನೀಡುವಂತೆ ಪ್ರತಿ ಗ್ರಾಮ ಮಟ್ಟದಲ್ಲಿರುವ ಅಕ್ರಮ ಕಾಫಿ ತೋಟಗಳ ಬಗ್ಗೆ ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದ ಸಚಿವ ಕಾಗೋಡು ತಿಮ್ಮಪ್ಪ ಅವರು ಈ ಹಿಂದೆ ಸಾಗುವಳಿಗೆ ಯೋಗ್ಯವಲ್ಲದ ಜಾಗಗಳನ್ನು ಅರಣ್ಯ ಬೆಳೆಸಲು ಅರಣ್ಯ ಇಲಾಖೆಗೆ ‘ಸಿ’ ಮತ್ತು ‘ಡಿ’ ಜಾಗ ಎಂದು ನೀಡಲಾಗಿತ್ತು. 1991ರಲ್ಲಿ ಬಗರ್ ಹುಕುಂ ಕಾನೂನು ಜಾರಿಯಾದಾಗ ಸಿ ಮತ್ತು ಡಿ ಜಾಗ ಮತ್ತೆ ಕಂದಾಯ ಇಲಾಖೆಗೆ ನೀಡುವಂತೆ ಹೊರಡಿ¸ Àಲಾಗಿದ್ದ ಆದೇಶ ಇದುವರೆಗೂ ಪಾಲನೆಯಾಗಿ ರಲಿಲ್ಲ. ಇದೀಗ ತಾವು ಕಂದಾಯ ಸಚಿವರಾದ ಬಳಿಕ ಇದನ್ನು ಗಂಭೀರವಾಗಿ ಪರಿಗಣಿಸಿದ್ದು, ಅರಣ್ಯ ಇಲಾಖೆಗೆ ಹಸ್ತಾಂತರಿಸಲಾಗಿದ್ದ ಸಿ ಮತ್ತು ಡಿ ಜಾಗಗಳ ಪೈಕಿ ಅರಣ್ಯ ಬೆಳೆಸದೇ ಇರುವ ಜಾಗವನ್ನು ಕಂದಾಯ ಇಲಾಖೆ ಸ್ವಾಧೀನ ಪಡಿಸಿ ಕೊಳ್ಳಲು ನೂತನ ಆದೇಶವೊಂದನ್ನು ಶೀಘ್ರದಲ್ಲೇ ಹೊರಡಿಸಲಾಗುವದು. ಈ ಜಾಗವನ್ನು ಫಾರಂ 50:50ರಲ್ಲಿ ಅರ್ಜಿ ಸಲ್ಲಿಸಿರುವ ಫಲಾನುಭವಿಗಳಿಗೆ ನೀಡಲು ಅಗತ್ಯ ಕ್ರಮ ತೆಗೆದುಕೊಳ್ಳ ಲಾಗುವದು ಎಂದು ಸಚಿವರು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿದ್ದ ಮಾಜಿ ಶಾಸಕ ಎ.ಕೆ. ಸುಬ್ಬಯ್ಯ ಮಾತನಾಡಿ, ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಇಂದು ನಡೆದ ದಿಡ್ಡಳ್ಳಿ ನಿರಾಶ್ರಿತರಿಗೆ ಪುನರ್ವಸತಿ ಕಲ್ಪಿಸುವ ಸಂಬಂಧ ನಡೆದ ಸಭೆ ತೃಪ್ತಿ ತಂದಿದೆ. ಸರಕಾರ ಸಕಾರಾತ್ಮಕವಾಗಿ ಸ್ಪಂದಿಸಿ ಬಡ ಜನರ ಪರವಾದ ನಿಲುವು ತೆಗೆದುಕೊಳ್ಳುವ ದೃಢ ವಿಶ್ವಾಸವಿದೆ. ಇದರಿಂದ ತಮ್ಮ ಹೋರಾಟಕ್ಕೆ ನ್ಯಾಯ ಸಿಗುವ ಭರವಸೆ ಮೂಡಿದೆ ಎಂದರು.
ಗೋಷ್ಠಿಯಲ್ಲಿ ಹಿರಿಯ ಸ್ವಾತಂತ್ರ ಹೋರಾಟಗಾರರಾದ ಹೆಚ್.ಎಸ್. ದೊರೆಸ್ವಾಮಿ, ಶಾಸಕ ಸೋಮಶೇಖರ್ ಮೊದಲಾದವರಿದ್ದರು.
ಚಿತ್ರ, ವರದಿ: ರಫೀಕ್ ತೂಚಮಕೇರಿ