ಸೋಮವಾರಪೇಟೆ,ಏ.11: ರಾಜ್ಯ ಸರ್ಕಾರದ ಯೋಜನೆಯಾದ ಅನ್ನಭಾಗ್ಯದಡಿ ಉಚಿತ ಅಕ್ಕಿ ವಿತರಿಸಬೇಕಿದ್ದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಸಂಚಾರಿ ನ್ಯಾಯಬೆಲೆ ಅಂಗಡಿಯ ಸಿಬ್ಬಂದಿಗಳು, ಗ್ರಾಹಕರಿಂದ ಹಣ ವಸೂಲಿ ಮಾಡಿದ ಘಟನೆ ನಡೆದಿದ್ದು, ಈ ಬಗ್ಗೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾದ ಹಿನ್ನೆಲೆ ವಸೂಲಿ ಮಾಡಿದ್ದ ಹಣ ವಾಪಸ್ ನೀಡಿದ್ದಾರೆ.ತಾಲೂಕಿನ ಹರಗ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಸಂಚಾರಿ ನ್ಯಾಯಬೆಲೆ ಅಂಗಡಿಯ ವಾಹನವನ್ನು ಕೆಲಗಂಟೆಗಳ ಕಾಲ ಗ್ರಾಮದಲ್ಲಿಯೇ ದಿಗ್ಬಂಧನ ವಿಧಿಸಿ, ಸಿಬ್ಬಂದಿಗಳಿಂದ ಹಣ ವಾಪಸ್ ಪಡೆದ ನಂತರ ಗ್ರಾಮಸ್ಥರು ಬಿಟ್ಟುಕಳುಹಿಸಿದ್ದಾರೆ.

ಹರಗ ವ್ಯಾಪ್ತಿಗೆ ಆಗಮಿಸುವ ಈ ಸಂಚಾರಿ ನ್ಯಾಯಬೆಲೆ ಅಂಗಡಿಗೆ 130ಕ್ಕೂ ಅಧಿಕ ಗ್ರಾಹಕರು ಒಳಪಡಲಿದ್ದು, ಈ ಹಿಂದೆ ಅಕ್ಕಿಯೊಂದಿಗೆ ಎಣ್ಣೆ, ಸಕ್ಕರೆ, ಗೋಧಿ, ಹೆಸರುಕಾಳು ಮತ್ತು ಉಪ್ಪನ್ನು ವಿತರಿಸಲಾಗುತ್ತಿತ್ತು.

ಆದರೆ ಇಂದು ಆಗಮಿಸಿದ ವಾಹನದಲ್ಲಿ ಕೇವಲ ಅಕ್ಕಿ ಮಾತ್ರ ಇದ್ದು, ಈ ಅಕ್ಕಿಯನ್ನು ವಿತರಿಸಲು ಪ್ರತಿ ಕಾರ್ಡ್‍ದಾರರಿಂದ ತಲಾ 10 ರೂಪಾಯಿ ಅನಧಿಕೃತವಾಗಿ ವಸೂಲಿ ಮಾಡುತ್ತಿದ್ದರು.

ಗ್ರಾಮದ ಸುಮಾರು 50ಕ್ಕೂ ಅಧಿಕ ಗ್ರಾಹಕರಿಂದ ಹಣ ವಸೂಲಿ ಮಾಡಿದ್ದು, ಈ ಬಗ್ಗೆ ಮಾಹಿತಿ ಪಡೆದ ಗ್ರಾಮಸ್ಥರಾದ ಶರಣ್, ಮೇದಪ್ಪ, ಯೋಗೇಶ್, ರಶಿಕಾ, ಪುಪ್ಪಯ್ಯ, ಹೇಮಲತಾ, ನೀಲಮ್ಮ ಸೇರಿದಂತೆ ಇತರರು ಸ್ಥಳಕ್ಕೆ ತೆರಳಿ ವಾಹನದಲ್ಲಿದ್ದ ಇಲಾಖಾ ಸಿಬ್ಬಂದಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

ಸರ್ಕಾರ ಅನ್ನಭಾಗ್ಯ ಯೋಜನೆಯಡಿ ಉಚಿತವಾಗಿ ಅಕ್ಕಿ ನೀಡುತ್ತಿದ್ದು, ಇದನ್ನು ನಮಗೆ ತಲುಪಿಸಲು ಹಣ ಪಡೆಯುತ್ತಿದೀರಾ? ಈ ಬಗ್ಗೆ ಸರ್ಕಾರದ ಆದೇಶವಿದೆಯೇ? ಎಂದು ಪ್ರಶ್ನಿಸಿದರು. ಈ ಸಂದರ್ಭ ಹಣ ಪಡೆಯುವ ಬಗ್ಗೆ ತಾಲೂಕು ಆಹಾರ ನಿರೀಕ್ಷಕರಿಗೆ ತಿಳಿಸಿದ್ದೇವೆ ಎಂದು ಸಿಬ್ಬಂದಿಗಳು ಉತ್ತರಿಸಿದರು.

ಇದರಿಂದ ಆಕ್ರೋಶಗೊಂಡ ಸಾರ್ವಜನಿಕರು ಆಹಾರ ನಿರೀಕ್ಷಕರಿಗೆ ಕರೆ ಮಾಡಿ ಮಾಹಿತಿ ಬಯಸಿದರು. ಅನ್ನಭಾಗ್ಯ ಯೋಜನೆಯಡಿ ಅಕ್ಕಿಯನ್ನು ಉಚಿತವಾಗಿ ನೀಡಲಾಗುತ್ತಿದ್ದು, ಹಣ ಪಡೆಯುವಂತೆ ಇಲಾಖೆಯಿಂದ ಯಾವದೇ ನಿರ್ದೇಶನ ನೀಡಿಲ್ಲ ಎಂದು ಅಧಿಕಾರಿ ತಿಳಿಸಿದರು.

ನಂತರ ಗ್ರಾಹಕರಿಂದ ವಸೂಲಿ ಮಾಡಿರುವ ಹಣವನ್ನು ಸ್ವತಃ ಸಿಬ್ಬಂದಿಯೇ ವಾಪಸ್ ಮಾಡಿದರು. 50ಕ್ಕೂ ಅಧಿಕ ಮಂದಿಯಿಂದ ಹಣ ಪಡೆಯಲಾಗಿದ್ದು, ಸುಮಾರು 30 ಮಂದಿಗೆ ಹಣವನ್ನು ವಾಪಸ್ ನೀಡಲಾಯಿತು. ನಂತರ ಸಂಚಾರಿ ನ್ಯಾಯಬೆಲೆ ಅಂಗಡಿಗೆ ಗ್ರಾಮದಿಂದ ಹೊರತೆರಳಲು ಅವಕಾಶ ನೀಡಲಾಯಿತು.