ಕೂಡಿಗೆ, ಮಾ. 31: ಕ್ರೀಡಾಕೂಟಗಳು ಯುವಕರನ್ನು ಒಗ್ಗೂಡಿಸುವದರ ಜೊತೆಗೆ ಸಾಮರಸ್ಯವನ್ನು ಬೆಸೆಯುತ್ತದೆ. ಇದರ ಜೊತೆಯಲ್ಲಿ ಯುವಕರು ಕ್ರೀಡೆಗೆ ಒತ್ತು ಕೊಡುವ ನಿಟ್ಟಿನಲ್ಲಿ ಸಾಮಾಜಿಕ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವದರ ಮೂಲಕ ಸಮಾಜದ ಬೆಳವಣಿಗೆಗೆ ಸಹಕಾರಿಗಳಾಗಬೇಕು ಎಂದು ರಾಜ್ಯ ಐಎನ್ಟಿಯೂಸಿ ಉಪಾಧ್ಯಕ್ಷ ನಾಪಂಡ ಮುತ್ತಪ್ಪ ಹೇಳಿದರು.
ಯುಗಾದಿ ಹಬ್ಬದ ಅಂಗವಾಗಿ ಶ್ರೀ ಬಸವೇಶ್ವರ ಯುವಕ ಸಂಘದ ವತಿಯಿಂದ ಆಯೋಜಿಸಿದ್ದ ಮುಕ್ತ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ (ಸೂಪರ್-8) 5ನೇ ವರ್ಷದ ಬಸವೇಶ್ವರ ಕಪ್ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಪಂಚಾಯಿತಿ ಸದಸ್ಯೆ ಕೆ.ಆರ್. ಮಂಜುಳಾ ಭಾಗವಹಿಸಿ ಮಾತನಾಡಿ, ಕ್ರೀಡೆಯು ಮನಸ್ಸಿಗೆ ಉಲ್ಲಾಸವನ್ನು ನೀಡಿದರೂ ಯುವಕರು ಕ್ರೀಡಾ ಮನೋಭಾವವನ್ನು ಬೆಳೆಸಿಕೊಳ್ಳುವ ಮೂಲಕ ಸ್ನೇಹ ಮಿಲನವನ್ನು ಹೆಚ್ಚಿಸಿಕೊಳ್ಳಬೇಕೆಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಳ್ಳುಸೋಗೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಭವ್ಯ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಗ್ರಾಮ ಪಂಚಾಯಿತಿ ಸದಸ್ಯರಾದ ಎಂ.ಆರ್. ಗಣೇಶ್, ಅರುಣ್ ಚಂದ್ರ, ಸುರೇಶ್, ಶಿವಾನಂದ, ಸಂಘದ ಅಧ್ಯಕ್ಷ ಮಣಿ ಸೇರಿದಂತೆ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.