ಮೂರ್ನಾಡು, ಮಾ. 31: ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ವೈಯುಕ್ತಿಕ ಕಾಮಗಾರಿಗೆ ನೆರವು ದೊರೆಯಲಿದೆ. ಈ ಕುರಿತು ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯ ಆದೇಶ ಹೊರಡಿಸಿದೆ. ಕರ್ನಾಟಕ ಸೇರಿದಂತೆ ದೇಶದ ವಿವಿಧ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ವಿನೂತನ ಯೋಜನೆಯು 2016 ಏಪ್ರಿಲ್ 1 ರಿಂದ ಜಾರಿಯಾಗಿದೆ.

ಇದರಿಂದ ಭೂ ಅಭಿವೃದ್ಧಿಯಡಿ ಒಡ್ಡು, ಬದು ನಿರ್ಮಾಣಕ್ಕೆ ಪ್ರತಿ ಏಕರೆಗೆ 10 ಸಾವಿರ ರೂಪಾಯಿ, ಕೃಷಿ ಹೊಂಡ ನಿರ್ಮಾಣಕ್ಕೆ 20 ಸಾವಿರ, ದನದ ದೊಡ್ಡಿ ನಿರ್ಮಾಣಕ್ಕೆ 35 ಸಾವಿರ, ತೆರೆದ ಬಾವಿ ನಿರ್ಮಾಣಕ್ಕೆ 82 ಸಾವಿರ, ವಿಭಿನ್ನ ಅಳತೆಗಳ ಇಂಗು ಗುಂಡಿಗಳ ನಿರ್ಮಾಣಕ್ಕೆ 10, 200; 14 ಸಾವಿರ, ವೈಯಕ್ತಿಕ ನೀರು ಮರುಪೂರಣ ಗುಂಡಿಗಳಿಗೆ 20, 68 ಸಾವಿರ ಹಂದಿಗೂಡು ನಿರ್ಮಾಣಕ್ಕೆ 80 ಸಾವಿರ, ಎರೆಹುಳ ಸಾಕಾಣಿಕೆ, ಗೊಬ್ಬರ ಗುಂಡಿ ತೆಗೆಯಲು 22 ರಿಂದ 30 ಸಾವಿರ ರೂಪಾಯಿ ದೊರೆಯಲಿದೆ.

ಅದೇ ರೀತಿ ವಿಭಿನ್ನ ಕೃಷಿ ಪೂರಕ ಚಟುವಟಿಕೆಗಳಿಗೂ ಕೇಂದ್ರ ಸರಕಾರದ ಅನುದಾನ ಲಭ್ಯವಾಗಲಿದೆ. ಇದರಂತೆ(ಪ್ರತಿ ಏಕರೆಗೆ) ತೆಂಗು ಬೆಳೆಯಲು ವಿಭಿನ್ನ ಮಾದರಿಗಳಿಗೆ ತಕ್ಕಂತೆ 83, 208/ 54, 252, 43, 627 ರೂಪಾಯಿಗಳನ್ನು ನಿಗದಿಪಡಿಸಲಾಗಿದೆ.

ಅದರಂತೆ ಅಡಿಕೆ ಕೃಷಿಗಾಗಿ 3. 61 ಲಕ್ಷ ರೂಪಾಯಿ, ಗೇರು ಕೃಷಿಗಾಗಿ 44, 477, ಮಾವು ಮತ್ತು ಸಪೋಟಾ ಬೆಳೆಗಳಿಗೆ 56, 507, 1. 34ಲಕ್ಷ ರೂಪಾಯಿ, ದಾಳಿಂಬೆ - 82, 096, ಪೇರಲ 58, 989, ದ್ರಾಕ್ಷಿ 4.38 ಲಕ್ಷ, ತಾಳೆ 49, 521, ದಾಲ್ಚಿನ್ನಿ 1. 82ಲಕ್ಷ, ಲವಂಗ 56, 262, ಕಾಳುಮೆಣಸು 1.39ಲಕ್ಷ, 23, 619, ನಿಂಬೆ 92, 105, ಹುಣಸೆ 53, 872, ನೇರಳೆ 69, 084, ಸೀತಾಫಲ 82, 456, ಬಾಳೆಹಣ್ಣು 56, 450, ನುಗ್ಗೆಕಾಯಿ 1.33 ಲಕ್ಷ ಸಹಾಯ ಧನವನ್ನು ನೀಡಲು ಕೇಂದ್ರ ಸರಕಾರ ಉದ್ದೇಶಿಸಿದೆ.

ಈ ಬಗ್ಗೆ ವಿವರಗಳಿಗೆ ತೋಟಗಾರಿಕಾ ಇಲಾಖಾ ಕಚೇರಿಯನ್ನು ಸಂಪರ್ಕಿಸಬಹುದು.

ಕೂಲಿ ಹೆಚ್ಚಳ

ಉದ್ಯೋಗ ಖಾತ್ರಿ ಯೋಜನೆಯ ಕೂಲಿಯು ಕರ್ನಾಟಕ ರಾಜ್ಯದಲ್ಲಿ ರೂ. 20 ಹೆಚ್ಚಳಗೊಂಡಿದೆ. ರಾಜ್ಯದಲ್ಲಿ ಈ ಮೊದಲು ರೂ. 204 ಕೂಲಿ ನೀಡಲಾಗುತ್ತಿತ್ತು.

ಮುಂಬರುವ ದಿನಗಳಲ್ಲಿ ಕೂಲಿ ಕಾರ್ಮಿಕರ ಹತ್ಯಾರುಗಳ ಸಾಗಣೆಗಾಗಿ ರೂ. 10 ಸೇರಿ ದಿನಕ್ಕೆ ರೂ. 234 ಕೂಲಿ ದೊರೆಯಲಿದೆ. ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿ ಪಡೆಯಲು, ಉದ್ಯೋಗ ಚೀಟಿಗಳಲ್ಲಿ ಆಧಾರ್ ಕಾರ್ಡ್ ನೋಂದಣಿ ಕಡ್ಡಾಯವಾಗಿದೆ.

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಸಮೀಪದ ಗ್ರಾಮ, ತಾಲೂಕು ಅಥವಾ ಜಿಲ್ಲಾ ಪಂಚಾಯಿತಿ ಕಚೇರಿಗಳನ್ನು ಸಂಪರ್ಕಿಸಿ ವೈಯಕ್ತಿಕ ಫಲಾನುಭವಿಗಳಾಗಿ ಅವುಗಳ ಲಾಭವನ್ನು ಪಡೆಯಬಹುದು.

- ಕೂಡಂಡ ರವಿ