ಸೋಮವಾರಪೇಟೆ, ಮಾ. 25: ರಾಜ್ಯ ಸರ್ಕಾರದ ‘ನಮ್ಮ ಗ್ರಾಮ ನಮ್ಮ ರಸ್ತೆ’ ಯೋಜನೆಯಡಿ 5.23 ಕೋಟಿ ವೆಚ್ಚದಲ್ಲಿ ಕೈಗೊಳ್ಳಲಾಗುತ್ತಿರುವ ಅಬ್ಬೂರುಕಟ್ಟೆ-ಹೊಸಳ್ಳಿ ರಸ್ತೆ ಕಾಮಗಾರಿ ಸಂಪೂರ್ಣ ಕಳಪೆ ಯಾಗಿದ್ದು, ತಕ್ಷಣ ಮರು ಡಾಂಬರೀಕರಣ ಮಾಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಹಳೆಯ ರಸ್ತೆಯ ಮೇಲಿದ್ದ ಧೂಳು ತೆಗೆಯದೇ, ಅಗತ್ಯ ಪ್ರಮಾಣದಲ್ಲಿ ಡಾಂಬರು ಹಾಕದ ಪರಿಣಾಮ ಕಾಮಗಾರಿ ಕಳಪೆಯಾಗಿದ್ದು, ಡಾಂಬರು ಹಾಕಿದ ಮರುದಿನವೇ ಕಿತ್ತುಬರುತ್ತಿದೆ. 5 ಕೋಟಿ ವೆಚ್ಚದ ಕಾಮಗಾರಿ ಕಳಪೆಯಾಗುತ್ತಿದ್ದರೂ ಸಂಬಂಧಿಸಿದ ಅಭಿಯಂತರರು ಗಮನಹರಿಸದೇ ಗುತ್ತಿಗೆದಾರರೊಂದಿಗೆ ಕೈಜೋಡಿಸಿ ದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವರ್ಷದ ನಂತರ ಪ್ರಾರಂಭವಾದ ಕಾಮಗಾರಿ ತೀರಾ ಕಳಪೆಯಾಗಿದ್ದು, ಅಗತ್ಯ ಪ್ರಮಾಣದ “ಟಾರ್ ಟೆಂಪರೇಚರ್” ಪಾಲಿಸುತ್ತಿಲ್ಲ. ಪರಿಣಾಮ ಡಾಂಬರು ರಸ್ತೆ ಚಾಪೆಯಂತೆ ಕಿತ್ತುಬರುತ್ತಿದೆ ಎಂದು ಗ್ರಾಮದ ಪ್ರಮುಖರಾದ ಪ್ರಕಾಶ್, ಮೋಹನ್‍ದಾಸ್, ಪ್ರದೀಪ್, ಸಚಿನ್, ಜಗದೀಶ್, ಸತೀಶ್, ವಿರೂಪಾಕ್ಷ ಸೇರಿದಂತೆ ಗ್ರಾಮಸ್ಥರು ಆರೋಪಿಸಿದ್ದಾರೆ.