ಶ್ರೀಮಂಗಲ: ತಿತಿಮತಿ ಸಮೀಪ ಕಾಡಾನೆ ಧಾಳಿಗೆ ಮೃತಪಟ್ಟ ವಿದ್ಯಾರ್ಥಿನಿ ಸಫಾನಾಳ ಸಾವು ಕಾಡಾನೆ ಧಾಳಿಯಿಂದ ಕೊನೆಯ ಸಾವಾಗಬೇಕು. ಜಿಲ್ಲೆಯಲ್ಲಿ ಕಾಡಾನೆಗಳಿಂದ ಮಾನವ ಪ್ರಾಣ ಹಾನಿ ಮತ್ತು ಬೆಳೆ ನಷ್ಟ ಪ್ರಕರಣಗಳನ್ನು ಸಂಪೂರ್ಣವಾಗಿ ತಡೆಗಟ್ಟಲು ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಸರಕಾರ ದೂರದೃಷ್ಟಿ ಇಟ್ಟುಕೊಂಡು ಗಂಭೀರವಾಗಿ ಪ್ರಯತ್ನಿಸಿ ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡು ಕೊಳ್ಳಬೇಕೆಂದು ಜಿಲ್ಲಾ ಬಿ.ಜೆ.ಪಿ. ಮಾಜಿ ಅಧ್ಯಕ್ಷ ಮಾಚಿಮಾಡ ಎಂ. ರವೀಂದ್ರ ಆಗ್ರಹಿಸಿದರು.ತಿತಿಮತಿ ಸಮೀಪ ಕಾಡಾನೆ ದಾಳಿಗೆ ಮೃತಪಟ್ಟ ವಿದ್ಯಾರ್ಥಿನಿ ಸಫಾನಾಳ ಮನೆಗೆ ತೆರಳಿ ಕುಟುಂಬಕ್ಕೆ ಸಾಂತ್ವನ ಹೇಳಿ ಅವರು ಮಾತನಾಡಿದರು.
ಸರಕಾರ ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ, ಪ್ರತಿಭಾವಂತ ವಿದ್ಯಾರ್ಥಿನಿ ಸಫಾನ ತನ್ನದಲ್ಲದ ತಪ್ಪಿಗೆ ಬಲಿಯಾಗಿದ್ದಾರೆ. ಕಳೆದ 10 ವರ್ಷದಿಂದ ಜಿಲ್ಲೆಯಲ್ಲಿ 75 ಜನ ಕಾಡಾನೆ ದಾಳಿಗೆ ಬಲಿಯಾಗಿದ್ದು, 93 ಜನ ಗಾಯಗೊಂಡಿದ್ದಾರೆ. 2016-17ರಲ್ಲಿ 12 ಜನರು ಸಾವನಪ್ಪಿದ್ದು, 5 ಜನ ಗಾಯಗೊಂಡಿದ್ದಾರೆ. 2015-16ರಲ್ಲಿ 13 ಜನ ಸಾವನಪ್ಪಿದ್ದು, 8 ಜನ ಗಾಯಗೊಂಡಿದ್ದಾರೆ ಎಂದು ರವೀಂದ್ರ ಅವರು ಮಾಹಿತಿ ನೀಡಿದರು.
ಭಾರತೀಯ ಕಿಸಾನ್ ಸಂಘದ ಜಿಲ್ಲಾಧ್ಯಕ್ಷ ಚೊಟ್ಟೆಕ್‍ಮಾಡ ರಾಜೀವ್ ಬೋಪಯ್ಯ ಮಾತನಾಡಿ, ವಿಧಾನಸಬೆ, ಸಭೆ ಸಮಾರಂಭದಲ್ಲಿ ಅನಗತ್ಯ ವಿಚಾರಗಳ ಬಗ್ಗೆ ಮಾತನಾಡುವದನ್ನು ಬಿಟ್ಟು ನಮ್ಮ ಜನಪ್ರತಿನಿಧಿಗಳು ಜಿಲ್ಲೆಯ ಪ್ರಜೆಗಳು ಎದುರಿಸುತ್ತಿರುವ ಗಂಭೀರ ಸಮಸ್ಯೆಗಳ ಬಗ್ಗೆ ಗಮನ ಹರಿಸಬೇಕು. ಕಳೆದ 15 ವರ್ಷದಿಂದ ದಿನೇ ದಿನೇ ಕಾಡಾನೆ ಹಾವಳಿ ತಾರಕಕ್ಕೇರುತ್ತಿದೆ. ಜಿಲ್ಲೆಯ ಶಾಸಕರು ತಮ್ಮದೇ ಸರಕಾರವಿದ್ದಾಗ ಕಾಡಾನೆ ಹಾವಳಿಗೆ ಅರಣ್ಯ ಅಧಿಕಾರಿಗಳನ್ನು ಬಯ್ಯುತ್ತಿದ್ದರು. ಶಾಸಕರು ವಿರೋಧ ಪಕ್ಷದಲ್ಲಿದ್ದಾಗ ಸರಕಾರವನ್ನು ಬಯ್ಯುತ್ತಾ ತಮ್ಮ ಹೊಣೆಗಾರಿಕೆಯಿಂದ ನುಣುಚಿಕೊಳ್ಳುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
ಭಾರತೀಯ ಕಿಸಾನ್ ಸಂಘದ ವೀರಾಜಪೇಟೆ ತಾಲೂಕು ಅಧ್ಯಕ್ಷ ಮುಕ್ಕಾಟಿರ ಪ್ರವೀಣ್ ಭೀಮಯ್ಯ ಮಾತನಾಡಿ, ಜನಪ್ರತಿನಿಧಿಗಳಿಗೆ ಶಾಶ್ವತ ಪರಿಹಾರ ಬೇಕಿಲ್ಲ. ಸಂತ್ರಸ್ತರಿಗೆ ಪರಿಹಾರ ಚೆಕ್‍ಕೊಟ್ಟು ಪ್ರಚಾರ ಗಿಟ್ಟಿಸಿಕೊಳ್ಳುವಲ್ಲಿಯೇ ಸಂತೋಷ ಪಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಜಿಲ್ಲೆಯ ಕಾಫಿ ತೋಟದೊಳಗೆ ಅರಣ್ಯದಿಂದ ಬಂದು ಬೀಡು ಬಿಟ್ಟಿರುವ ಕಾಡಾನೆ ಹಿಂಡುಗಳನ್ನು 15 ದಿನದ ಒಳಗೆ ಕಾರ್ಯಯೋಜನೆ ರೂಪಿಸಿ ಅರಣ್ಯಕ್ಕೆ ಅಟ್ಟಬೇಕು.
ಜಿಲ್ಲೆಯ ಅರಣ್ಯದಂಚಿನಲ್ಲಿ ಆನೆ ಕಂದಕ ಬಾಕಿ ಉಳಿದಿರುವದನ್ನು ಪೂರ್ತಿ ಮಾಡಿ, ಅದರೊಂದಿಗೆ ರೈಲ್ವೇ ಕಂಬಿಗಳ ಬೇಲಿಗಳನ್ನು ಅಳವಡಿಸಬೇಕು.
ಅರಣ್ಯದ ಒಳಗೆ ವನ್ಯಪ್ರಾಣಿಗಳಿಗೆ ಕುಡಿಯುವ ನೀರು ಒದಗಿಸಲು ಕೆರೆ ನಿರ್ಮಾಣ ಮಾಡುವದಕ್ಕೆ ಈಗ ಸಕಾಲವಾಗಿದ್ದು, ಮುಂಗಾರು ಆರಂಭದ ಒಳಗೆ 2. ಕಿ.ಮೀ. ಒಂದರಂತೆ ಕೆರೆ ನಿರ್ಮಾಣ ಮಾಡಬೇಕು ಎಂದು ಇವರುಗಳು ಒತ್ತಾಯಿಸಿದರು.
ಅರಣ್ಯದೊಳಗೆ ವನ್ಯಪ್ರಾಣಿಗಳಿಗೆ ಸೂಕ್ತ ಆಹಾರ ದೊರೆಯುತ್ತಿಲ್ಲ. ಆದ್ದರಿಂದ ಮಾವು, ಹಲಸು, ರಾಗಿ, ಜೋಳ, ಬಿದಿರು ಹಾಗೂ ಮೇವಿನ ಹುಲ್ಲು ಜೀಜಗಳನ್ನು ಮುಂಗಾರು ಆರಂಭದಲ್ಲಿ ಬಿತ್ತನೆ ಮಾಡಲು ಸರಕಾರ-ಇಲಾಖೆ ಮುಂದಾಗಬೇಕು.
ಸರಕಾರ ಅಥವಾ ಇಲಾಖೆ ಇದನ್ನು ಮಾಡಲು ಇಚ್ಚಾಶಕ್ತಿ ಇಲ್ಲದಿದ್ದರೆ ನಮಗೆ ಅನುಮತಿ ನೀಡಿದರೆ ಅಗತ್ಯವಿರುವಷ್ಟು ಬಿತ್ತನೆ ಬೀಜಗಳನ್ನು ಸಂಗ್ರಹಿಸಿ, ಬೆಳೆಗಾರರು ಹಾಗೂ ಸಾರ್ವಜನಿಕರ ಸಹಕಾರದೊಂದಿಗೆ ಹೆಲಿಕಾಪ್ಟರ್ ಬಳಸಿ ಅರಣ್ಯದೊಳಗೆ ಬೀಜ ಬಿತ್ತನೆ ಮಾಡಲು ಸಿದ್ದವಿದ್ದೇವೆ ಎಂದರು.
ಅರಣ್ಯದಲ್ಲಿ ಕಾಡ್ಗಿಚ್ಚು ಉಂಟಾಗದಂತೆ ಮುನ್ನೆಚ್ಚರಿಕೆಗೆ ವಿಶೇಷ ಟಾಸ್ಕ್ ಫೋರ್ಸ್ ರಚನೆ ಮಾಡಬೇಕು. ಒಂದು ವೇಳೆ ಕಾಡ್ಗಿಚ್ಚು ಕಂಡು ಬಂದರೆ ತಕ್ಷಣ ನಂದಿಸಲು ಬೆಟ್ಟಗುಡ್ಡ-ಅರಣ್ಯದೊಳಗೆ ಸಂಚರಿಸುವ ಆರ್ಮಿ ಟ್ಯಾಂಕರ್ ಮಾದರಿಯ ವಾಹನಗಳನ್ನು ದಿನದ 24 ಗಂಟೆಯೂ ಲಭ್ಯವಿರುವಂತೆ ವಿಶೇಷ ಯೋಜನೆ ತಯಾರಿಸಬೇಕು.
ಇಕೋ ಡೆವಲಪ್‍ಮೆಂಟ್ಸ್ ಫಂಡ್ಸ್ ಎಂದು ಅರಣ್ಯದಂಚಿನ ಗ್ರಾಮಸ್ಥರಿಂದ ಅರಣ್ಯ ಇಲಾಖೆ ಸಂಗ್ರಹಿಸಿದ ಹಣ ಕೋಟ್ಯಾಂತರ ರೂ. ಬಳಕೆಯಾಗದೆ ಬ್ಯಾಂಕ್ ಖಾತೆಯಲ್ಲಿ ಉಳಿದಿದೆ. ಅರಣ್ಯದಂಚಿನ ಗ್ರಾಮದ ಜನರ ಸಹಕಾರದಿಂದ ಅರಣ್ಯ ರಕ್ಷಣೆಯ ಉದ್ದೇಶದಿಂದ ಬಳಸಲು ಸಂಗ್ರಹಿಸಿದ ಈ ಹಣವನ್ನು ವನ್ಯಪ್ರಾಣಿಗಳ ಹಾವಳಿಯನ್ನು ಶಾಶ್ವತ ತಡೆಗಟ್ಟುವ ಯೋಜನೆಗೆ ಬಳಸಿಕೊಳ್ಳಬೇಕು. ಇದರ ಅನುಷ್ಠಾನ ಜನಪ್ರತಿನಿಧಿಗಳು-ಸರಕಾರದ ಹೊಣೆಯಾಗಬೇಕು ಎಂದು ಹೇಳಿದರು. ಈ ಸಂಧರ್ಭ ಕಿಸಾನ್ ಸಂಘದ ಜಿಲ್ಲಾ ಸದಸ್ಯ ಕೋಟೇರ ಕಿಸನ್ ಹಾಜರಿದ್ದರು.