ಮಡಿಕೇರಿ, ಮಾ. 25: ದಿಡ್ಡಳ್ಳಿಯಲ್ಲೇ ಜಾಗಕ್ಕೆ ಪಟ್ಟು ಹಿಡಿದಿರುವ ಆದಿವಾಸಿಗಳು ಬದಲಿ ನಿವೇಶನ ನೀಡುವದಾಗಿ ಭರವಸೆ ನೀಡಿ ಲಾಟರಿ ಮೂಲಕ ನಿವೇಶನ ಗುರುತಿಸಿರುವ ಜಿಲ್ಲಾಡಳಿತದ ಕ್ರಮವನ್ನು ಆದಿವಾಸಿಗಳು ನಿರಾಕರಣೆ ಮಾಡಿದ್ದು, ಮುಖ್ಯಮಂತ್ರಿಗಳು ವಿಧಾನಮಂಡಲದ ಅಧಿವೇಶನ ಮುಗಿದ ಕೂಡಲೇ ಆದಿವಾಸಿ ಮುಖಂಡರೊಂದಿಗೆ ಸಭೆ ಆಯೋಜಿಸದಿದ್ದಲ್ಲಿ ಏ. 7ರಂದು ದಿಡ್ಡಳ್ಳಿಯಿಂದ ಬೆಂಗಳೂರಿಗೆ ಕಾಲ್ನಡಿಗೆ ಜಾಥಾವನ್ನು ಹಮ್ಮಿಕೊಂಡು ಫ್ರೀಡಂ ಪಾರ್ಕ್‍ನಲ್ಲಿ ಸಮಾವೇಶ ನಡೆಸಿ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡುವ ನಿರ್ಣಯ ಕೈಗೊಳ್ಳಲಾಗಿದೆ.

ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ಜಿಲ್ಲಾ ಘಟಕದ ವತಿಯಿಂದ ನಗರದಲ್ಲಿ ಇಂದು ಪ್ರತಿಭಟನಾ ಮೆರವಣಿಗೆ ನಡೆಸಿದ ಬಳಿಕ ಗಾಂಧಿ ಮೈದಾನದಲ್ಲಿ ಆಯೋಜಿಸಲಾಗಿದ್ದ ಸಮಾವೇಶದಲ್ಲಿ ಹಕ್ಕೊತ್ತ್ತಾಯ ಕೇಳಿ ಬಂದಿತು.

ಹಿರಿಯ ವಕೀಲ ಎ.ಕೆ. ಸುಬ್ಬಯ್ಯ ಮಾತನಾಡಿ, ಕೊಡಗಿನಲ್ಲಿ ಕತ್ತಲೆ, ಅನಾಗರಿಕ ಜಗತ್ತು ಇದೆ. ನಾಗರಿಕರು ತಲೆ ತಗ್ಗಿಸುವಂತಹ ಚರಿತ್ರೆ ಇದೆ. ಆದಿವಾಸಿಗಳ ಬದುಕಿನಲ್ಲಿ ಮಂದ ಹಾಸ ಮೂಡುವಂತಹ ನಿಟ್ಟಿನಲ್ಲಿ ಹೋರಾಟ ಅಗತ್ಯವಿದೆ. ಆದಿವಾಸಿ ಗಳಿಗೂ ಬದುಕುವ ಹಕ್ಕಿದೆ ಎಂದು ನಾಗರಿಕ

(ಮೊದಲ ಪುಟದಿಂದ) ಜಗತ್ತು ಒಪ್ಪಿಕೊಂಡಿಲ್ಲ. ಆದಿವಾಸಿಗಳು ಜೀತದಾಳುಗಳಾಗಿಯೇ ಇರಬೇಕೆನ್ನುವ ಭಾವನೆಯನ್ನು ಭೂ ಮಾಲೀಕರು ಹೊಂದಿದ್ದಾರೆ ಎಂದು ಆರೋಪಿಸಿದರು.

ದಿಡ್ಡಳ್ಳಿ ವ್ಯಾಪ್ತಿಯಲ್ಲಿ 8500 ಎಕರೆ ಭೂಮಿ ಇರುವದರಿಂದ ಮೂರು ಸಾವಿರ ಮಂದಿಗೆ ಹಂಚಬಹುದಾಗಿದೆ. ಜಿಲ್ಲೆಯಲ್ಲಿ ಲಭ್ಯವಿರುವ ಸಿ ಅಂಡ್ ಡಿ ವರ್ಗದ 36 ಸಾವಿರ ಎಕರೆ ಜಾಗವನ್ನು ಸರ್ಕಾರ ಅರಣ್ಯ ಇಲಾಖೆಯಿಂದ ವಾಪಸು ಪಡೆದು ತಲಾ 2 ಎಕರೆ ಜಾಗ ವಿತರಿಸುವಂತೆ ಕ್ರಮ ಕೈಗೊಳ್ಳುವ ಮೂಲಕ ಆದಿವಾಸಿ ಪುನರ್‍ವಸತಿ ಕೇಂದ್ರ ಸ್ಥಾಪನೆಗೆ ಮುಂದಾಗಬೇಕೆಂದು ಹೇಳಿದರು.

ದಿಡ್ಡಳ್ಳಿ ಜನರ ಬೇಡಿಕೆಗಳನ್ನು ರಾಜ್ಯದ ಮುಖ್ಯಮಂತ್ರಿ, ಕಂದಾಯ ಸಚಿವರು ಹಾಗೂ ಸಮಾಜ ಕಲ್ಯಾಣ ಸಚಿವರು ಈಡೇರಿಸುವ ಭರವಸೆ ಇದೆ ಎಂದ ಅವರು ಆದಿವಾಸಿಗಳ ಹೋರಾಟ ಬೆಂಬಲಿಸದ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾ ಕಾಂಗ್ರೆಸ್ ಮುಖಂಡರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ದಿಡ್ಡಳ್ಳಿ ಹೋರಾಟಗಾರರಿಗೆ ಆದಿವಾಸಿಗಳಲ್ಲೇ ಹಿತಶತ್ರುಗಳು ಇದ್ದು, ಕಾಂಗ್ರೆಸ್ ಎರಡನೇ ಶತ್ರುವಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾ ಕಾಂಗ್ರೆಸ್ಸಿಗರು ದಿಡ್ಡಳ್ಳಿ ಹೋರಾಟದಲ್ಲಿ ಭಾಗಿಯಾಗಬಾರದೆಂದು ಆದೇಶ ಹೊರಡಿಸಿದ್ದಾರೆಂದು ಆರೋಪಿಸಿದ ಸುಬ್ಬಯ್ಯ ಅವರು, ಈ ಕಾರಣದಿಂದಾಗಿ ವಿಧಾನಸಭಾ ಟಿಕೆಟ್ ಆಕಾಂಕ್ಷಿಗಳ್ಯಾರು ಹೋರಾಟದಲ್ಲಿ ಭಾಗಿಯಾಗುತ್ತಿಲ್ಲ ಎಂದು ಟೀಕಿಸಿದರು.

ಪಾಲೇಮಾಡು, ಗೊಂದಿ ಬಸವನಹಳ್ಳಿ, ಚೆರಿಯಪರಂಬು ಸೇರಿದಂತೆ ಜಿಲ್ಲೆಯ ವಿವಿಧೆಡೆ ವಾಸಿಸುತ್ತಿರುವ ಆದಿವಾಸಿಗಳಿಗೆ ಹಕ್ಕು ಪತ್ರ ನೀಡಿದ ನಂತರ ದಿಡ್ಡಳ್ಳಿ ನಿವಾಸಿಗಳಿಗೆ ನೀಡಲು ಕ್ರಮ ಕೈಗೊಳ್ಳಲಿ. ಮುಂದಿನ ಚುನಾವಣೆಯಲ್ಲಿ ದಿಡ್ಡಳ್ಳಿ ಹೋರಾಟಕ್ಕೆ ಬೆಂಬಲ ಸೂಚಿಸದ ಎಲ್ಲಾ ಪಕ್ಷಗಳನ್ನು ತಿರಸ್ಕರಿಸುವಂತೆ ಕರೆ ನೀಡಿದರು.

ಸಮಿತಿಯ ಪ್ರಮುಖ ಡಿ.ಎಸ್. ನಿರ್ವಾಣಪ್ಪ ಮಾತನಾಡಿ ವಿಶೇಷ ಸಭೆ ಕರೆದು ಚರ್ಚಿಸುವದಾಗಿ ಮುಖ್ಯ ಮಂತ್ರಿಗಳು ಭರವಸೆ ನೀಡಿದ್ದರೂ ಜಿಲ್ಲಾಡಳಿತ ನಿರಾಶ್ರಿತರನ್ನು ಒಕ್ಕಲೆಬ್ಬಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು. ದಿಡ್ಡಳ್ಳಿಯಲ್ಲೇ ಭೂಮಿ ಹಂಚಿಕೆಯಾಗದಿದ್ದಲ್ಲಿ ಹೋರಾಟವನ್ನು ತೀವ್ರಗೊಳಿಸುವದಾಗಿ ಎಚ್ಚರಿಕೆ ನೀಡಿದರು.

ಎಸ್‍ಡಿಪಿಐ ಜಿಲ್ಲಾಧ್ಯಕ್ಷ ಹಾಗೂ ಸಮಿತಿಯ ಸದಸ್ಯ ಅಮಿನ್ ಮೊಹಿಸಿನ್ ಮಾತನಾಡಿ ಏ.7 ರಂದು ಡಿಡ್ಡಳ್ಳಿಯಿಂದ ಬೆಂಗಳೂರಿಗೆ ಕಾಲ್ನಡಿಗೆ ಜಾಥಾ ನಡೆಸಲಾಗುವದು. ಏ.14 ರಂದು ನಡೆಯುವ ಡಾ.ಅಂಬೇಡ್ಕರ್ ದಿನದಂದು ಬೆಂಗಳೂರಿನ ಫ್ರೀಡಂ ಪಾರ್ಕ್‍ನಲ್ಲಿ ಸಮಾವೇಶ ನಡೆಯಲಿದೆ ಎಂದು ಹೇಳಿದರು.

ಸಭೆಯಲ್ಲಿ ಕರ್ನಾಟಕ ರೈತ ಸಂಘದ ರಾಜ್ಯ ಅಧ್ಯಕ್ಷ ಡಿ.ಹೆಚ್.ಪೂಜಾರ್, ಜಿಲ್ಲಾಧ್ಯಕ್ಷ ಎಸ್.ಆರ್. ಮಂಜುನಾಥ್, ಎಸ್‍ಡಿಪಿಐ ರಾಜ್ಯ ಕಾರ್ಯದರ್ಶಿ ಮಜೀóದ್, ಹೋರಾಟ ಸಮಿತಿಯ ಪ್ರಮುಖರಾದ ಸಿರಿಮನೆ ನಾಗರಾಜು, ಪ್ರಮುಖರಾದ ಜೆ.ಕೆ.ಮುತ್ತಮ್ಮ, ಅಪ್ಪಾಜಿ, ಮಹೇಂದ್ರಕುಮಾರ್, ಮೊಣ್ಣಪ್ಪ, ಪಿಎಫ್‍ಐ ನ ಹ್ಯಾರಿಸ್ ಮತ್ತಿತರರು ಉಪಸ್ಥಿತರಿದ್ದರು.ಸೂಕ್ಷ್ಮ ಪರಿಸರ ವಲಯ ಹೋರಾಟ ಬೆಂಬಲಕ್ಕೆ ಸುಬ್ಬಯ್ಯ ಷರತ್ತು

ಡಾ.ಕಸ್ತೂರಿ ರಂಗನ್ ವರದಿ ವಿರುದ್ಧ ಈ ಹಿಂದೆ ಹೋರಾಟ ನಡೆಸಿದ ಪ್ರಮುಖರಲ್ಲಿ ಒಬ್ಬರಾಗಿರುವ ವಿಧಾನ ಪರಿಷತ್ ಮಾಜಿ ಸದಸ್ಯ ಎ.ಕೆ. ಸುಬ್ಬಯ್ಯ ಅವರು ಸೂಕ್ಷ್ಮ ಪರಿಸರ ವಲಯದ ಕುರಿತು ಮತ್ತೆ ಹೊರಡಿಸಲಾಗಿರುವ ಕರಡು ಅಧಿಸೂಚನೆ ವಿರುದ್ಧ ಹೋರಾಟ ನಡೆಸದೆ ಇರಲು ನಿರ್ಧರಿಸಿದ್ದಾರೆ. ನಿರ್ಗತಿಕರಾದ ಆದಿವಾಸಿಗಳು ಭೂಮಿಯ ಹಕ್ಕಿಗಾಗಿ ನಡೆಸುತ್ತಿರುವ ಹೋರಾಟಕ್ಕೆ ಪ್ರಬಲ ಜನಾಂಗಗಳು ಬೆಂಬಲ ಸೂಚಿಸಿದರೆ ಮಾತ್ರ ಸೂಕ್ಷ್ಮ ಪರಿಸರ ವಲಯ ಹೋರಾಟದಲ್ಲಿ ಪಾಲ್ಗೊಳ್ಳುವ ಬಗ್ಗೆ ಚಿಂತನೆ ನಡೆಸುವದಾಗಿ ಅವರು ಸಷ್ಟಪಡಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಎ.ಕೆ.ಸುಬ್ಬಯ್ಯ, ಸೂಕ್ಷ್ಮ ಪರಿಸರ ವಲಯ ಪ್ರಸ್ತಾಪದ ವಿರುದ್ಧ ಹೋರಾಟ ನಡೆಸಲು ತಮಗೆ ಸಮಯ ಹಾಗೂ ಶಕ್ತಿಯ ಕೊರತೆ ಇದೆ ಎಂದು ತಿಳಿಸಿದರು. ದಿಡ್ಡಳ್ಳಿ ಸೇರಿದಂತೆ ಕೊಡಗಿನಲ್ಲಿರುವ ನಿರ್ಗತಿಕ ಆದಿವಾಸಿಗಳ ಭೂಮಿಯ ಹಕ್ಕಿನ ಹೋರಾಟಕ್ಕೆ ಪ್ರಬಲ ಜನಾಂಗಗಳು ಬೆಂಬಲ ನೀಡುತ್ತಿಲ್ಲ. ಅಲ್ಲದೆ ದುರ್ಬಲರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಪ್ರಬಲರೆಲ್ಲರೂ ಸೂಕ್ಷ್ಮ ಪರಿಸರ ವಲಯ ಪ್ರಸ್ತಾಪದ ವಿರುದ್ಧ ಹೋರಾಟ ನಡೆಸುತ್ತಿರುವುದರಿಂದ ನಾನು ದುರ್ಬಲರ ಪರವಾದ ಹೋರಾಟದಲ್ಲಿ ತೊಡಗಿದ್ದೇನೆ ಎಂದು ಸ್ಪಷ್ಟಪಡಿಸಿದರು.

ಕೇಂದ್ರದ ತಪ್ಪು : ಸೂಕ್ಷ್ಮ ಪರಿಸರ ವಲಯದ ಕುರಿತು ಮತ್ತೊಂದು ಕರಡು ಅಧಿಸೂಚನೆ ಹೊರಬಿದ್ದಿದ್ದು, ಇದಕ್ಕೆ ಕೇಂದ್ರ ಸರಕಾರವೇ ನೇರ ಹೊಣೆ ಎಂದು ಸುಬ್ಬಯ್ಯ ಆರೋಪಿಸಿದರು. ರಾಜ್ಯ ಸರಕಾರ ಸೂಕ್ತ ರೀತಿಯಲ್ಲಿ ಆಕ್ಷೇಪಣೆ ಸಲ್ಲಿಸಿಲ್ಲವೆಂದಾದರೆ ಕೊಡಗಿನ ಜನ ಸಾವಿರಾರು ಸಂಖ್ಯೆಯಲ್ಲಿ ಸಲ್ಲಿಸಿದ ಆಕ್ಷೇಪಣೆಗಳಿಗೆ ಕೇಂದ್ರ ಸರಕಾರ ಯಾಕೆ ಸ್ಪಂದಿಸಲಿಲ್ಲವೆಂದು ಪ್ರಶ್ನಿಸಿದರು. ಜಿಲ್ಲೆಯನ್ನು ಪ್ರತಿನಿಧಿಸುತ್ತಿರುವ ಜವಾಬ್ದಾರಿಯುತ ಸಂಸದ ಪ್ರತಾಪ್ ಸಿಂಹ ಅವರು ಈಗ ಯಾಕೆ ಮಾತನಾಡುತ್ತಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು.

ಮತ್ತೆ ಕರಡು ಅಧಿಸೂಚನೆ ಹೊರಡಲು ಪರಿಸರವಾದಿಗಳ ಅಂತರರಾಷ್ಟ್ರೀಯ ಮಟ್ಟದ ಲಾಬಿಯೇ ಕಾರಣವೆಂದು ಆರೋಪಿಸಿದ ಎ.ಕೆ.ಸುಬ್ಬಯ್ಯ ಕೃಷಿ ವಲಯದ ಬದಲು ಅರಣ್ಯ ಪ್ರದೇಶದಲ್ಲಿ ಪರಿಸರ ಹಾಳಾಗಿದೆ ಎಂದು ಟೀಕಿಸಿದರು. ಕೃಷಿ ರಕ್ಷಣೆಗಾಗಿ ಕೃಷಿ ವಲಯವನ್ನು ಪ್ರತ್ಯೇಕಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.

ದಿಡ್ಡಳ್ಳಿ ಸಮಸ್ಯೆಗೆ ಕಾಂಗ್ರೆಸ್ ಕಾರಣ

ಮುಖ್ಯಮಂತ್ರಿಗಳು ಸಭೆ ನಡೆಸಿ ದಿಡ್ಡಳ್ಳಿ ನಿರಾಶ್ರಿತರಿಗೆ ಸೂಕ್ತ ನ್ಯಾಯ ಒದಗಿಸುವ ಭರವಸೆ ನೀಡುತ್ತಿದ್ದರೂ ಅಧಿಕಾರಿಗಳು ನಿರ್ಗತಿಕರನ್ನು ಒಕ್ಕಲೆಬ್ಬಿಸುವ ಪ್ರಯತ್ನ ಮಾಡುತ್ತಿದ್ದು, ಇದರ ಹಿಂದೆ ಕೊಡಗು ಜಿಲ್ಲಾ ಕಾಂಗ್ರೆಸ್‍ನ ಪಿತೂರಿ ಅಡಗಿದೆ ಎಂದು ಎ.ಕೆ.ಸುಬ್ಬಯ್ಯ ಆರೋಪಿಸಿದರು. ಜಿಲ್ಲಾ ಉಸ್ತುವಾರಿ ಸಚಿವರು, ವಿಧಾನ ಪರಿಷತ್ ಸದಸ್ಯರಾದ ವೀಣಾಅಚ್ಚಯ್ಯ, ಪ್ರಮುಖರಾದ ಬ್ರಿಜೇಶ್ ಕಾಳಪ್ಪ ಅವರುಗಳಿಂದಾಗಿ ಸಮಸ್ಯೆ ಜೀವಂತವಾಗಿದೆ ಎಂದು ಟೀಕಿಸಿದ ಅವರು ಸರಿತಾಪೂಣಚ್ಚ ಸೇರಿದಂತೆ ಕಾಂಗ್ರೆಸ್‍ನ ಯಾರೊಬ್ಬರೂ ಆದಿವಾಸಿಗಳ ಪರವಾದ ಹೋರಾಟದಲ್ಲಿ ಪಾಲ್ಗೊಳ್ಳುತ್ತಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು.

ದಿಡ್ಡಳ್ಳಿಯಲ್ಲಿರುವವರನ್ನು ಎತ್ತಂಗಡಿ ಮಾಡುವದಕ್ಕಾಗಿ ನಿರಂತರ ಪ್ರಯತ್ನಗಳು ನಡೆಯುತ್ತಿದ್ದು, ಮುಖ್ಯಮಂತ್ರಿಗಳ ಸಭೆಯನ್ನು ನಡೆಯದಂತೆ ಪಿತೂರಿ ನಡೆಯುತ್ತಿದೆ ಎಂದು ಆರೋಪಿಸಿದ ಸುಬ್ಬಯ್ಯ, ಹೋರಾಟ ಸಮಿತಿಯೊಂದಿಗೆ ಚರ್ಚಿಸದೆ ಅಧಿಕಾರಿಗಳು ಏಕಪಕ್ಷೀಯ ನಿರ್ಧಾರವನ್ನು ಯಾಕೆ ತೆಗೆದುಕೊಂಡಿದ್ದಾರೆ ಎಂದು ಪ್ರಶ್ನಿಸಿದರು.

ಜಿಲ್ಲೆಯಲ್ಲಿರುವ ಸುಮಾರು 5 ಸಾವಿರ ಮಂದಿ ನಿರಾಶ್ರಿತರಿಗೆ ತಲಾ ಎರಡು ಎಕರೆ ಭೂಮಿ ನೀಡಲು ಸರಕಾರ ಯೋಜನೆ ರೂಪಿಸಬೇಕು. ಇದಕ್ಕಾಗಿ 36 ಸಾವಿರ ಎಕರೆಯಷ್ಟಿರುವ ಸಿ ಮತ್ತು ಬಿ ವರ್ಗದ ಭೂಮಿಯನ್ನು ಸರಕಾರ ವಾಪಾಸ್ ಪಡೆಯಬೇಕು. ದಿಡ್ಡಳ್ಳಿಯಲ್ಲೇ 8,500 ಎಕರೆಯಷ್ಟು ಕಂದಾಯ ಭೂಮಿಯಿದ್ದು, ಮೂರು ಸಾವಿರ ಮಂದಿಗೆ ಹಂಚಿಕೆ ಮಾಡಬಹುದಾಗಿದೆ ಎಂದು ಅಭಿಪ್ರಾಯಪಟ್ಟರು.

ಜಿಲ್ಲೆಯ ವಿವಿಧೆಡೆ ತಲತಲಾಂತರಗಳಿಂದ ವಾಸಿಸುತ್ತಿರುವ ಆದಿವಾಸಿಗಳಿಗೆ ಇಲ್ಲಿಯವರೆಗೆ ಹಕ್ಕುಪತ್ರ ನೀಡಿಲ್ಲ. ಆದರೆ ದಿಡ್ಡಳ್ಳಿಯಲ್ಲಿರುವ ನಿರ್ಗತಿಕರಿಗೆ ದಿಢೀರ್ ಆಗಿ ಲಾಟರಿ ಮೂಲಕ ಹಕ್ಕುಪತ್ರ ನೀಡಲು ಜಿಲ್ಲಾಡಳಿತ ಮುಂದಾಗಿದೆ. ಇದರ ಹಿಂದೆ ಒಕ್ಕಲೆಬ್ಬಿಸುವ ಹುನ್ನಾರ ಅಡಗಿದೆ ಎಂದು ಆರೋಪಿಸಿದರು. ಹಕ್ಕುಪತ್ರವನ್ನು ಮಾತ್ರ ನೀಡಿದರೆ ವಸತಿ ಹಾಗೂ ಉದ್ಯೋಗವನ್ನು ಯಾರು ನೀಡುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಎ.ಕೆ.ಸುಬ್ಬಯ್ಯ ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿಗಳು ನಡೆಸುವ ಸಭೆಯಲ್ಲಿ ಬೇಡಿಕೆಗಳು ಈಡೇರುತ್ತವೆ ಎನ್ನುವ ವಿಶ್ವಾಸವಿದೆ ಎಂದರು.