ಮಡಿಕೇರಿ, ಮಾ. 25: ದಿಡ್ಡಳ್ಳಿ ಆದಿವಾಸಿಗಳ ನಿವೇಶನ ಬೇಡಿಕೆಯೊಂದಿಗೆ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ಕೊಡಗು ಜಿಲ್ಲಾ ಸಮಿತಿ ವತಿಯಿಂದ ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಮಡಿಕೇರಿ ಚಲೋ ಪ್ರತಿಭಟನಾ ಸಮಾವೇಶ ಹಮ್ಮಿಕೊಳ್ಳಲಾಗಿತ್ತು. ನಗರದ ಫೀ.ಮಾ. ಕಾರ್ಯಪ್ಪ ವೃತ್ತದಿಂದ ಗಾಂಧೀ ಮೈದಾನದ ತನಕ ಸುಮಾರು ಒಂದು ಸಾವಿರದಷ್ಟು ಸಂಖ್ಯೆಯಲ್ಲಿದ್ದ ಆದಿವಾಸಿಗಳು, ಇವರಿಗೆ ಬೆಂಬಲ ನೀಡುತ್ತಿರುವ ವಿವಿಧ ಸಂಘಟನೆಗಳ ಪ್ರಮುಖರು ಗಾಂಧಿ ಮೈದಾನದ ತನಕ ವಿವಿಧ ಘೋಷಣೆಗಳೊಂದಿಗೆ ತಮ್ಮ ಬೇಡಿಕೆಗಳ ಪುನರುಚ್ಚಾರ, ಭಿತ್ತಪತ್ರದೊಂದಿಗೆ ಮೆರವಣಿಗೆ ನಡೆಸಿದರು. ಸುಮಾರು 11 ಗಂಟೆಯ ವೇಳೆಗಾಗಲೇ ಕಾರ್ಯಪ್ಪ ವೃತ್ತದಲ್ಲಿ ಪ್ರತಿಭಟನಾಕಾರರು ಜಮಾಯಿಸಿದ್ದರು. ಆದರೆ ಸಮಾವೇಶ ನಿಗದಿಯಾಗಿದ್ದ ಗಾಂಧಿ ಮೈದಾನದ ಸನಿಹದಲ್ಲಿರುವ ಸಂತ ಮೈಕಲರ ಶಾಲೆ ಎಸ್.ಎಸ್.ಎಲ್.ಸಿ. ಪರೀಕ್ಷಾ ಕೇಂದ್ರ ವಾಗಿರುವದರಿಂದ ಈ ವ್ಯಾಪ್ತಿಯಲ್ಲಿ ಇಂದಿನ ಪರೀಕ್ಷೆ ಮುಗಿಯುವ ತನಕ ಸೆ. 144ರಂತೆ ನಿಷೇದಾಜ್ಞೆ ಜಾರಿಯಿದ್ದ ಕಾರಣ ಮೆರವಣಿಗೆ ವಿಳಂಬವಾಗ ಬೇಕಾಯಿತು. ಈ ಹಿನ್ನೆಲೆಯಲ್ಲಿ ಜಮಾಯಿಸಿದ್ದ ಮಂದಿ ಅಲ್ಲಿಯೇ ಹಾಡು, ನೃತ್ಯದ
(ಮೊದಲ ಪುಟದಿಂದ) ಮೂಲಕ ಕಾಲ ಕಳೆಯಬೇಕಾಯಿತು. ಈ ಸಂದರ್ಭ ಸ್ಥಳಕ್ಕೆ ಆಗಮಿಸಿದ ವಕೀಲ ಎ.ಕೆ. ಸುಬ್ಬಯ್ಯ ಅವರು, ಪರೀಕ್ಷೆಯ ಮಾಹಿತಿ ಇರದ ಕಾರಣ ಸೆ. 144 ಜಾರಿ ಮಾಡಿದ ಕುರಿತು ಸ್ಥಳದಲ್ಲಿದ್ದ ಎಸ್ಪಿ ರಾಜೇಂದ್ರ ಪ್ರಸಾದ್ ಅವರನ್ನು ಪ್ರಶ್ನಿಸಿದ ಪ್ರಸಂಗವೂ ನಡೆಯಿತು. ಎಸ್ಪಿ ಎಸ್.ಎಸ್.ಎಲ್.ಸಿ. ಪರೀಕ್ಷಾ ನಿಯಮವನ್ನು ಸ್ಪಷ್ಟಪಡಿಸಿದ ಬಳಿಕ ಸುಬ್ಬಯ್ಯ ಅವರು ಅಲ್ಲಿಂದ ತೆರಳಿದರು.
ಸುಮಾರು 12.30ರ ತನಕ ಹಾಡು, ನೃತ್ಯ, ಘೋಷಣೆಯೊಂದಿಗೆ ಕಾಲ ಕಳೆದ ಪ್ರತಿಭಟನಾಕಾರರು ನಂತರ ಮೆರವಣಿಗೆಗೆ ಮುಂದಾದರು. ಈ ಸಂದರ್ಭ ಖಾಕಿ ಪಡೆ ಅಧಿಕ ಸಂಖ್ಯೆಯಲ್ಲಿ ಮೆರವಣಿಯೊಂದಿಗೆ ಸಾಗಿತ್ತು. ನಿಧಾನಗತಿಯಲ್ಲಿ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು 2 ಗಂಟೆಯ ಸುಮಾರಿಗೆ ಗಾಂಧಿ ಮೈದಾನ ತಲುಪಿದರು. ಮೆರವಣಿಗೆಯ ಮುಂಚೂಣಿಯಲ್ಲಿದ್ದ ಯುವಕ ಯುವತಿಯರು ಘೋಷಣೆಯೊಂದಿಗೆ ಕುಣಿಯುತ್ತಾ ಸಾಗಿದರು. ಹಿರಿಯ ಪೊಲೀಸ್ ಅಧಿಕಾರಿಗಳು ಕೂಡ ಮೆರವಣಿಗೆಯೊಂದಿಗೆ ಹೆಜ್ಜೆ ಹಾಕಿದರು.
ಭಾರೀ ಪೊಲೀಸ್ ಬಂದೋಬಸ್ತ್
ಮಡಿಕೇರಿ ಚಲೋ ಸಮಾವೇಶದ ಹಿನ್ನೆಲೆಯಲ್ಲಿ ಭಾರೀ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ನಗರ ಠಾಣೆಯಲ್ಲಿ ಅಧಿಕ ಸಂಖ್ಯೆಯ ಪೊಲೀಸ್ ವಾಹನಗಳು ಕಂಡು ಬಂದರೆ ಜನರಲ್ ತಿಮ್ಮಯ್ಯ ವೃತ್ತ, ಗಾಂಧಿ ಮೈದಾನ, ಸುದರ್ಶನ ವೃತ್ತ ಹಾಗೂ ಮಾರ್ಗದುದ್ದಕ್ಕೂ ಖಾಕಿಧಾರಿಗಳು ಕರ್ತವ್ಯದಲ್ಲಿದ್ದರು. ಮಡಿಕೇರಿ ನಗರ ಪ್ರವೇಶಿಸುವ ರಸ್ತೆಗಳಲ್ಲೂ ಪೊಲೀಸರನ್ನು ನಿಯೋಜಿಸಲಾಗಿತ್ತು.
ಜಿಲ್ಲೆ ಮಾತ್ರವಲ್ಲದೆ ಹೊರ ಜಿಲ್ಲೆಯ ಪೊಲೀಸರನ್ನೂ ಬಂದೋಬಸ್ತ್‍ಗೆ ನಿಯೋಜಿಸಲಾಗಿತ್ತು.
ಸ್ವತಃ ಎಸ್ಪಿ ರಾಜೇಂದ್ರ ಪ್ರಸಾದ್ ನೇತೃತ್ವದಲ್ಲಿ ಇಬ್ಬರು ಡಿ.ವೈ.ಎಸ್.ಪಿ. ಗಳು, 7 ವೃತ್ತ ನಿರೀಕ್ಷಕರು, 10 ಎಸ್.ಐ.ಗಳು, 8 ಡಿ.ಎ.ಆರ್. ತುಕಡಿ, 2 ಕೆ.ಎಸ್.ಆರ್.ಪಿ. ಸೇರಿದಂತೆ 300ಕ್ಕೂ ಅಧಿಕ ಪೊಲೀಸರು ಬಂದೋಬಸ್ತ್‍ನಲ್ಲಿ ನಿರತರಾಗಿದ್ದರು.
ಸಮಾವೇಶದಲ್ಲಿ ಹೋರಾಟ ಸಮಿತಿಯೊಂದಿಗೆ ಕರ್ನಾಟಕ ರೈತ ಸಂಘ, ಎಸ್.ಡಿ.ಪಿ.ಐ., ಬಹುಜನ ಕಾರ್ಮಿಕ ಸಂಘ, ಬಿ.ಎಸ್.ಪಿ., ದಲಿತ ಸಂಘರ್ಷ ಸಮಿತಿ, ಕರ್ನಾಟಕ ಕೋಮು ಸೌಹಾರ್ದ ವೇದಿಕೆ ಸೇರಿದಂತೆ ಇತರ ಸಂಘಟನೆಗಳು ದಿಡ್ಡಳ್ಳಿ, ಪಾಲೆಮಾಡು ಪೈಸಾರಿ ಸೇರಿದಂತೆ ಇತರ ಹಾಡಿಗಳ ಆದಿವಾಸಿಗಳು ಪಾಲ್ಗೊಂಡಿದ್ದರು.