*ಗೋಣಿಕೊಪ್ಪ, ಮಾ. 25: ಮೈಸೂರು ಸರಕಾರಿ ಆಯುರ್ವೇದ ವೈದ್ಯಕೀಯ ಕಾಲೇಜು ವತಿಯಿಂದ ಟಿ.ಎಸ್.ಪಿ. ಯೋಜನೆಯಿಂದ ಆಯುಷ್ ಪದ್ಧತಿ ರೋಗ ನಿರೋಧಕ ಔಷಧದ, ಕಿಟ್ ವಿತರಣೆ ಮತ್ತು ಆರೋಗ್ಯ ಶಿಬಿರ ನಡೆಸಲಾಯಿತು.ಪಂಚಾಯಿತಿ ಹಳೆ ಸಭಾಂಗಣದಲ್ಲಿ ಆರೋಗ್ಯ ಶಿಬಿರದಲ್ಲಿ ಆಯುರ್ವೇದ ಕಾಲೇಜಿನ ಡಾ. ರಾಧಕೃಷ್ಣ ಅವರು, ಪರಿಶಿಷ್ಟ ಪಂಗಡ ಮತ್ತು ಪರಿಶಿಷ್ಟ ವರ್ಗದವರಿಗೆ ಉಚಿತ ರೋಗ ನಿರೋಧಕ ಔಷಧದ ಕಿಟ್‍ಗಳನ್ನು ವಿತರಿಸಿದರು. ಪಟ್ಟಣದ ಸುಮಾರು 150ಕ್ಕೂ ಹೆಚ್ಚು ಫಲಾನುಭವಿಗಳು ಶಿಬಿರದ ಪ್ರಯೋಜನವನ್ನು ಪಡೆದುಕೊಂಡರು.

18 ಬಗೆಯ ಔಷಧಿಗಳಾದ ಮಹಾನಾರಾಯಣ ತೈಲ, ಯೋಗರಾಜ ಗುಗ್ಗುಲು, ಸಪ್ತಾಮೃತ ಲೋಹ, ದ್ರಾಕ್ಷಾರಿಷ್ಠ, ವಾಸಕಾಸವ, ಆಮಲಕಿ ರಸಾಯನ, ಕುಷ್ಮಾಂಡ ರಸಾಯನ, ಚಂದ್ರಪ್ರಭಾವಟಿ, ಜಾತ್ಯಾದಿ ತೈಲ, ಪಂಚವಲ್ಕಲ ಲೇಪ, ಸುದರ್ಶನ ಘನ ವಟಿ, ತ್ರಿಭುವನ ಕೀರ್ತಿ ರಸ, ಕಾಮದುಧಾ ರಸ, ದಂತ ಧಾವನ ಚೂರ್ಣ, ಕ್ರಿಮಿ ಕುಠಾರ ರಸ, ಸ್ವಾದಿಷ್ಟ ವಿರೇಚನ ಚೂರ್ಣ, ನಾಗಗುಟಿ, ಲಘು ಸೂತ ಶೇಖರ ಇವುಗಳನ್ನು ವಿತರಿಸಲಾಯಿತು.

ಡಾ. ರಾಧಕೃಷ್ಣ ಮಾತನಾಡಿ, ಸರಕಾರ ಪರಿಶಿಷ್ಟ ವರ್ಗ ಮತ್ತು ಪಂಗಡದ ಜನರಿಗೆ ಉಚಿತ ಔಷಧಿಗಳನ್ನು ನೀಡುವ ಯೋಜನೆ ರೂಪಿಸಿದೆ. ಇದರ ಸದುಪಯೋಗವನ್ನು ಪ್ರತಿಯೊಬ್ಬರು ಪಡೆದುಕೊಳ್ಳಬೇಕು. ವೈದ್ಯಕೀಯ ತಪಾಸಣೆಗೆ ಮೈಸೂರಿನ ಆರ್ಯುವೇದ ಕೇಂದ್ರಕ್ಕೆ ಭೇಟಿ ನೀಡಿ ಹೆಚ್ಚಿನ ಅನುಕೂಲ ಪಡೆದುಕೊಂಡು ರೋಗವನ್ನು ಗಣಪಡಿಸಿ ಕೊಳ್ಳಬಹುದು. ಈ ಶಿಬಿರದಲ್ಲಿ ಭಾಗಿಯಾದ ಫಲಾನುಭವಿಗಳು ಶಿಬಿರ ನಡೆಸಿದ ವೈದ್ಯರುಗಳ ಹೆಸರು ಹೇಳುವ ಮೂಲಕ ಮೈಸೂರಿನ ಆರ್ಯುವೇದಿಕ್ ಆರೋಗ್ಯ ಕೇಂದ್ರದಲ್ಲಿ ಉತ್ತಮ ಸೌಲಭ್ಯದ ಚಿಕಿತ್ಸೆ ಪಡೆಯಬಹುದೆಂದು ತಿಳಿಸಿದರು.

ಬೆಕ್ಕೆಸೊಡ್ಲೂರು ಸ್ವಸ್ಥ್ಯ ಆರೋಗ್ಯ ಸಂಸ್ಥೆಯ ಡಾ. ಸುಬ್ರಮಣ್ಯರಾವ್ ಮಾತನಾಡಿ, ಕೊಡಗಿನ ಸಮೃದ್ಧಿ ಸಸ್ಯ ಸಂಪತ್ತನ್ನು ಉಳಿಸಿ-ಬೆಳೆಸಬೇಕಾಗಿದೆ. ಸಸ್ಯ ಸಂಪನ್ಮೂಲಗಳಿಂದ ಮಾನವನಿಗೆ ಹೆಚ್ಚಿನ ಅನುಕೂಲವಿದೆ.

ಹಿರಿಯರು ಹಾಕಿಕೊಟ್ಟ ಆರ್ಯುವೇದಿಕ್ ಔಷಧಗಳು ಇಂದಿಗೂ ಹಲವು ರೋಗಗಳನ್ನು ಗುಣಪಡಿಸುವ ದಿವ್ಯತೆಯನ್ನು ಹೊಂದಿದೆ ಎಂದರು.

ಗ್ರಾ.ಪಂ. ಅಧ್ಯಕ್ಷೆ ಸೆಲ್ವಿ, ಸದಸ್ಯರುಗಳಾದ ರಾಮಕೃಷ್ಣ, ರತಿ ಅಚ್ಚಪ್ಪ, ಸುರೇಶ್ ರೈ, ಪಿ.ಡಿ.ಓ. ಚಂದ್ರಮೌಳಿ, ಸ್ವಸ್ಥ್ಯ ಸಂಸ್ಥೆಯ ನಿರ್ದೇಶಕ ಗುರುರಾಜ್ ಭಟ್ ಸೇರಿದಂತೆ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳು ಹಾಜರಿದ್ದರು.