ವೀರಾಜಪೇಟೆ, ಮಾ. 23: ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ ನಿಯಮದ ಶೇ. 25ರ ಪ್ರಕಾರ ಮೀಸಲಾತಿ ಕೋಟಾದಲ್ಲಿ ವೀರಾಜಪೇಟೆ ತಾಲೂಕಿನಲ್ಲಿ ಒಟ್ಟು 32 ಶಾಲೆಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದ್ದು 288 ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣದ ಅವಕಾಶ ಲಭಿಸಲಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್.ಕೆ. ಪಾಂಡು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸಕ್ತ ಸಾಲಿನಲ್ಲಿ ಎಲ್‍ಕೆಜಿ ಹಾಗೂ 1ನೇ ತರಗತಿ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ. ತಾಲೂಕಿನಲ್ಲಿ ಒಟ್ಟು 32 ಶಾಲೆಗಳ ಪೈಕಿ 18 ಶಾಲೆಗಳಲ್ಲಿ ಎಲ್‍ಕೆಜಿ ಹಾಗೂ 1ನೇ ತರಗತಿಗೆ ಪ್ರವೇಶ ಅವಕಾಶ ಕಲ್ಪಿಸಲಾಗಿದೆ. 14 ಶಾಲೆಗಳಲ್ಲಿ ಎಲ್‍ಕೆಜಿಗೆ ಮಾತ್ರ ಅವಕಾಶ ಇರುತ್ತದೆ. ಅರ್ಜಿ ಸಲ್ಲಿಸುವವರು ಮಗುವಿನ ಹಾಗೂ ಪೋಷಕರ ಆಧಾರ್ ಸಂಖ್ಯೆ, ಹೆಸರು, ಜನ್ಮ ದಿನಾಂಕ, ಲಿಂಗ ಮತ್ತು ವಿಳಾಸದ ಮಾಹಿತಿಯನ್ನು ಆಧಾರ್ ಕಾರ್ಡಿನಲ್ಲಿ ನಮೂದಿಸಿರುವಂತೆ ಆನ್‍ಲೈನ್ ಅರ್ಜಿ ಸಲ್ಲಿಸುವ ಸಮಯದಲ್ಲಿ ಒದಗಿಸಬೇಕು. ವಿವರಗಳು ತಾಳೆಯಾಗದ ಅರ್ಜಿಯನ್ನು ತಿರಸ್ಕರಿಸಲಾಗುವದು. ಆಧಾರ್ ಕಾರ್ಡಿನಲ್ಲಿ ನಮೂದಿಸಿರುವ ವಿಳಾಸದ ಆಧಾರದ ಮೇಲೆ ನೆರೆಹೊರೆಯ ಖಾಸಗಿ ಅನುದಾನ ರಹಿತ ಶಾಲೆಗಳನ್ನು ಪ್ರವೇಶಕ್ಕೆ ಪರಿಗಣಿಸಲಾಗುವದು. ಮಗುವಿನ ಆಧಾರ್ ಸಮಯದಲ್ಲಿ ನೀಡಲಾದ ಮೊಬೈಲ್ ಸಂಖ್ಯೆಯನ್ನು ಅರ್ಜಿ ಸಲ್ಲಿಸುವ ಸಮಯದಲ್ಲಿ ಪೋಷಕರು ಇಟ್ಟು ಕೊಳ್ಳಬೇಕು. ಮಗು ಮತ್ತು ಪೋಷಕರು ಆಧಾರ್ ನೋಂದಣಿ ಮಾಡಿಸದಿದ್ದರೆ ಆಧಾರ್ ನೋಂದಣಿ ಕೇಂದ್ರಗಳನ್ನು ಸಂಪರ್ಕಿಸಿ ಕೂಡಲೇ ನೋಂದಣಿ ಮಾಡಿಕೊಳ್ಳುವದು. ಒಂದು ವೇಳೆ ಆಧಾರ್ ನೋದಣಿಯ ನಂತರವು ಆಧಾರ್ ಸಂಖ್ಯೆ ಲಭ್ಯವಾಗದಿದ್ದ ಸಂದರ್ಭದಲ್ಲಿ ಮಗುವಿನ ತಂದೆ ಅಥವಾ ತಾಯಿ ಇವರಲ್ಲಿ ಒಬ್ಬರ ಆಧಾರ್ ನೋಂದಣಿ ಸಂಖ್ಯೆ ಮತ್ತು ಮತದಾರರ ಗುರುತಿನ ಚೀಟಿಯ ಸಂಖ್ಯೆಯನ್ನು ಸಲ್ಲಿಸಬೇಕು. ಇದರ ಜೊತೆಗೆ ಮಗುವಿಗೆ ಆಧಾರ್ ಚೀಟಿ ಇಲ್ಲದಿದ್ದರೆ ಆಧಾರ್ ಸಂಖ್ಯೆ ಪಡೆಯಲು ನೋಂದಾಯಿಸಿದ ಸ್ವೀಕೃತಿಯ ಪ್ರತಿಯನ್ನು ಶಾಲಾ ಶಿಕ್ಷಣ ಇಲಾಖೆಯ ಪೋರ್ಟಲ್‍ನಲ್ಲಿ ಅಪ್‍ಲೋಡ್ ಮಾಡಬಹುದು. ಎಂದರು. ಅರ್ಜಿ ಸಲ್ಲಿಸಲು ಮಗುವಿನ ಭಾವಚಿತ್ರ, ಜನನ ಪತ್ರ, ಆಧಾರ್ ಕಾರ್ಡ್, ಪೋಷಕರ ಆಧಾರ್ ಕಾರ್ಡ್, ಪರಿಶಿಷ್ಟ ಜಾತಿ, ಮತ್ತು ವರ್ಗ, ಪ್ರವರ್ಗ 1, ಹಿಂದುಳಿದ ವರ್ಗಗಳಾಗಿದ್ದಲ್ಲಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ವಯೋಮಿತಿ 01.06.17ರಲ್ಲಿ ಇದ್ದಂತೆ ಎಲ್‍ಕೆಜಿಗೆ 3ವರ್ಷ 10 ತಿಂಗಳಿಂದ 4.10 ತಿಂಗಳು, 1ನೇ ತರಗತಿಗೆ 5 ವರ್ಷ10 ತಿಂಗಳಿಂದ 6 ವರ್ಷ 10 ತಿಂಗಳುಗಳಾಗಿರಬೇಕು. ಅರ್ಜಿ ಸಲ್ಲಿಸಲು ಮಕ್ಕಳ ಪೋಷಕರಿಗೆ ತೊಂದರೆ ಉಂಟಾಗದ ರೀತಿಯಲ್ಲಿ ಬಿಇಒ ಕಚೇರಿಯಲ್ಲಿ ಪ್ರತ್ಯೇಕ ಕಚೇರಿ ಪ್ರಾರಂಭಿಸಲಾಗಿದೆ. ಅರ್ಜಿ ಸಲ್ಲಿಸಲು ತಾ. 31 ಕೊನೆಯ ದಿನಾಂಕವಾಗಿದೆ. ಈ ಸಂಬಂಧದಲ್ಲಿ ಹೆಚ್ಚಿನ ಮಾಹಿತಿಗಾಗಿ ಬಿಇಒ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಹೇಳಿದರು.
ಗೋಷ್ಠಿಯಲ್ಲಿ ಬಿಆರ್‍ಸಿ ಕಚೇರಿಯ ಮಹಾದೇವ್ ಹಾಗೂ ಉತ್ತಪ್ಪ ಉಪಸ್ಥಿತರಿದ್ದರು.