ಜೈಪುರ, ಮಾ. 23: ಕರ್ನಾಟಕದ ಈರಪ್ಪ ಹುರುಳಿ ಎಂಬ ಸೇನಾ ಹವಲ್ದಾರ್ ರಾಜಸ್ಥಾನದ ಅಲ್ವಾರ್ ಜಿಲ್ಲೆಯಲ್ಲಿಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವದಾಗಿ ವರದಿಯಾಗಿದೆ ಹವಲ್ದಾರ್ ಈರಪ್ಪ ಹುರುಳಿ ಅವರನ್ನು ಭಾರತೀಯ ಸೇನೆಯ ಜೈ ಪಲ್ತಾನ್ಲೈನ್ನಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಸೀಲಿಂಗ್ ಫ್ಯಾನಿಗೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಅವರ ಶವ ಪತ್ತೆಯಾಯಿತು. ಅವರ ಮೃತ ದೇಹವನ್ನು ಸೇನಾ ಆಸ್ಪತ್ರೆಯಲ್ಲಿ ಇರಿಸಲಾಗಿದ್ದು, ಅವರ ಕುಟುಂಬ ಸದಸ್ಯರಿಗೆ ವಿಷಯವನ್ನು ತಿಳಿಸಲಾಗಿದೆ. ಅರಾವಳಿ ಪೆÇಲೀಸರು ಸಿಆರ್‍ಪಿಸಿ 174ರ ಪ್ರಕಾರ ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಏರ್ ಇಂಡಿಯಾ ಸಿಬ್ಬಂದಿಗೆ ಚಪ್ಪಲಿಯಿಂದ ಹಲ್ಲೆ

ನವದೆಹಲಿ-ಪುಣೆ, ಮಾ. 23: ಟಿಕೆಟ್ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಕ್ಯಾತೆ ತೆಗೆದ ಶಿವಸೇನಾ ಸಂಸದ ರವೀಂದ್ರ ಗಾಯಕ್ವಾಡ್ ಏರ್ ಇಂಡಿಯಾ ಸಂಸ್ಥೆಯ ಸಿಬ್ಬಂದಿಯೊಬ್ಬರಿಗೆ 25 ಬಾರಿ ಚಪ್ಪಲಿಯಿಂದ ಹೊಡೆದು ಗೂಂಡಾಗಿರಿ ಪ್ರದರ್ಶಿಸಿರುವ ಘಟನೆ ನಡೆದಿದೆ. ಶಿವಸೇನಾ ಸಂಸದ ರವೀಂದ್ರ ಬ್ಯುಸಿನೆಸ್ ಕ್ಲಾಸ್ ಟಿಕೆಟ್ ಬೇಕೆಂದು ಕೇಳಿದ್ದು, ಏರ್ ಇಂಡಿಯಾ ಎಕಾನಮಿ ಕ್ಲಾಸ್ ಟಿಕೆಟ್ ಅನ್ನು ಕೊಟ್ಟಿರುವದಾಗಿ ಆರೋಪಿಸಿದ್ದಾರೆ. ಪುಣೆಯಿಂದ ನವದೆಹಲಿಗೆ ಪ್ರಯಾಣಿಸುತ್ತಿದ್ದ ಏರ್ ಇಂಡಿಯಾ ವಿಮಾನದಲ್ಲಿ ಈ ಘಟನೆ ನಡೆದಿದೆ. ನನ್ನ ಜೊತೆ ಅನುಚಿತವಾಗಿ ವರ್ತಿಸಿದ್ದಕ್ಕೆ ನಾನು ಏರ್ ಇಂಡಿಯಾ ಮ್ಯಾನೇಜರ್‍ಗೆ 25 ಬಾರಿ ಚಪ್ಪಲಿಯಿಂದ ಹೊಡೆದಿದ್ದೇನೆ. ನಾನು ಈ ಬಗ್ಗೆ ಯಾವದೇ ರೀತಿಯಲ್ಲೂ ಕ್ಷಮೆ ಕೇಳಲ್ಲ ಎಂದು ಹೇಳುವ ಮೂಲಕ ತನ್ನ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ.

ಮಹಾರಾಷ್ಟ್ರದ 19 ಶಾಸಕರ ಅಮಾನತು

ಮುಂಬೈ, ಮಾ. 23: ಮಹಾರಾಷ್ಟ್ರ ವಿಧಾನಸಭೆಯಲ್ಲಿ ನಡೆದ ಕ್ಷಿಪ್ರ ಬೆಳವಣಿಗೆಯೊಂದರಲ್ಲಿ ಪ್ರತಿಪಕ್ಷ ಕಾಂಗ್ರೆಸ್ ಮತ್ತು ಎನ್ಸಿಪಿಯ 19 ಶಾಸಕರನ್ನು ಮುಂದಿನ 9 ತಿಂಗಳ ಕಾಲ ಅಮಾನತು ಮಾಡಲಾಗಿದೆ. ಬಜೆಟ್ ಮಂಡನೆ ವೇಳೆ ದಾಂಧಲೆ ನಡೆಸುವ ಜತೆಗೆ ಅಸಾಂವಿಧಾನಿಕ ವರ್ತನೆ ತೋರಿದ ಹಿನ್ನೆಲೆಯಲ್ಲಿ ಕಾಂಗ್ರೆಸ್‍ನ 9 ಹಾಗೂ ಎನ್ಸಿಪಿಯ 10 ಶಾಸಕರನ್ನು ಡಿಸೆಂಬರ್ 31 ರವರೆಗೆ ಅಮಾನತು ಮಾಡಲಾಗಿದ್ದು, ಅಮಾನತು ಅವಧಿ ಮುಗಿಯುವವರೆಗೆ ಶಾಸನಸಭೆಯ ಯಾವದೇ ಕಲಾಪಗಳಲ್ಲಿ ಪಾಲ್ಗೊಳ್ಳುವಂತಿಲ್ಲ ಎಂದು ಅಲ್ಲಿನ ಸಂಸದೀಯ ವ್ಯವಹಾರಗಳ ಸಚಿವ ಗಿರೀಶ್ ತಿಳಿಸಿದ್ದಾರೆ.

ಯುಪಿಯಲ್ಲಿ ಮೂರೇ ದಿನದಲ್ಲಿ 100 ಪೊಲೀಸರ ಅಮಾನತು

ಲಖನೌ, ಮಾ. 23: ಕಾನೂನು ಸುವ್ಯವಸ್ಥೆ ವಿಚಾರದಲ್ಲಿ ರಾಜಿ ಮಾಡಿಕೊಳ್ಳುವದಿಲ್ಲ ಎಂಬ ಕಠಿಣ ಸಂದೇಶ ರವಾನಿಸಲು ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೂರೇ ದಿನದಲ್ಲಿ ಸುಮಾರು 100 ಪೆÇಲೀಸರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಇಂದು ಹಜರತ್ ಗಂಜ್ ಪೆÇಲೀಸ್ ಠಾಣೆಗೆ ದಿಢೀರ್ ಭೇಟಿ ನೀಡಿದ ಬೆನ್ನಲ್ಲೇ, ಲಖನೌ, ಘಾಜಿಯಾಬಾದ್, ಮೀರತ್ ಹಾಗೂ ನೋಯ್ಡಾ ಏಳು ಇನ್ಸ್‍ಪೆಕ್ಟರ್‍ಗಳು ಸೇರಿದಂತೆ ಸುಮಾರು 100 ಪೆÇಲೀಸರನ್ನು ಅಮಾನತುಗೊಳಿಸಲಾಗಿದೆ. ಪೆÇಲೀಸ್ ಮಹಾ ನಿರ್ದೇಶಕ ಜಾವೀದ್ ಅಹ್ಮದ್ ಅವರು ಪೆÇಲೀಸ್ ಇಲಾಖೆಯಲ್ಲಿರುವ ಕೆಲವು ಕಪ್ಪು ಕುಳಗಳನ್ನು ಗುರುತಿಸಿ ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಂಡಿದ್ದಾರೆ. ಪೆÇಲೀಸ್ ಮಹಾ ನಿರ್ದೇಶಕರ ಸೂಚನೆಯಂತೆ 100ಕ್ಕೂ ಹೆಚ್ಚು ಪೆÇಲೀಸರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ ಎಂದು ಉತ್ತರ ಪ್ರದೇಶ ಪೆÇಲೀಸ್ ಪಿಆರ್ ಒ ರಾಹುಲ್ ಶ್ರೀವತ್ಸವ್ ಅವರು ತಿಳಿಸಿದ್ದಾರೆ.

ಬ್ರಿಟನ್ ಧಾಳಿ: 7 ಮಂದಿ ಬಂಧನ

ಲಂಡನ್, ಮಾ. 23: ಅಧಿವೇಶನ ನಡೆಯುತ್ತಿದ್ದ ವೇಳೆ ಬ್ರಿಟನ್ ಸಂಸತ್ ಬಳಿ ಪಾದಚಾರಿಗಳ ಸೋಗಿನಲ್ಲಿ ಬಂದ ಉಗ್ರರು ಏಕಾಏಕಿ ಗುಂಡಿನ ಧಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ರಿಟಿಷ್ ಪೆÇಲೀಸರು ವಿವಿಧ ಕಡೆ ಧಾಳಿ ಮಾಡಿ ಏಳು ಮಂದಿಯನ್ನು ಬಂಧಿಸಿದ್ದಾರೆ. ನಾವು ಇಂದು ಲಂಡನ್ ಮತ್ತು ಬರ್ಮಿಂಗ್ ಹ್ಯಾಮ್ ಸೇರಿದಂತೆ ಆರು ಕಡೆ ಶೋಧ ನಡೆಸಿ ಏಳು ಮಂದಿಯನ್ನು ಬಂಧಿಸಿದ್ದೇವೆ ಎಂದು ಬ್ರಿಟನ್ ಉಗ್ರ ನಿಗ್ರಹ ಪಡೆಯ ಹಿರಿಯ ಅಧಿಕಾರಿ ಮಾರ್ಕ್ ರೊವ್ಲಿ ಅವರು ಲಂಡನ್‍ನಲ್ಲಿ ವರದಿಗಾರರಿಗೆ ತಿಳಿಸಿದ್ದಾರೆ. ಸಂಸತ್ ಒಳಗೆ ಸುಮಾರು 200ಕ್ಕೂ ಹೆಚ್ಚು ಸದಸ್ಯರು ಸೇರಿದಂತೆ ಪ್ರಧಾನಿಯೂ ಭಾಗಿಯಾಗಿದ್ದರು. ಅಧಿವೇಶನ ನಡೆಯುತ್ತಿದ್ದ ವೇಳೆ ಹೊರಭಾಗದಲ್ಲಿ ಈ ಧಾಳಿ ನಡೆದಿದೆ. ಧಾಳಿಯಲ್ಲಿ ಐವರು ಸಾವನ್ನಪ್ಪಿದ್ದು, ಪೆÇಲೀಸರು ಸೇರಿದಂತೆ 40ಕ್ಕೂ ಹೆಚ್ಚು ಜನರು ತೀವ್ರವಾಗಿ ಗಾಯಗೊಂಡಿದ್ದಾರೆ.

ರಂಗ ಸ್ಥಳದಲ್ಲೇ ಅಸುನೀಗಿದ ಗೇರುಕಟ್ಟೆ ಗಂಗಯ್ಯ ಶೆಟ್ಟಿ

ಮಂಗಳೂರು, ಮಾ. 23: ಕಟೀಲು ಮೇಳದ ಮೇರು ಕಲಾವಿದ ಗೇರುಕಟ್ಟೆ ಗಂಗಯ್ಯ ಶೆಟ್ಟಿ (63) ಅವರು ಪಾತ್ರ ನಿರ್ವಹಿಸುತ್ತಿರುವ ವೇಳೆಯಲ್ಲೇ ವೇದಿಕೆಯಲ್ಲೇ ಕುಸಿದು ಇಹಲೋಕ ತ್ಯಜಿಸಿದ್ದಾರೆ. ಎಕ್ಕಾರಿನ ದುರ್ಗಾ ನಗರದಲ್ಲಿ ನಡೆದ ಯಕ್ಷಗಾನ ಪ್ರದರ್ಶನ ಕಟೀಲು ಕ್ಷೇತ್ರ ಮಹಾತ್ಮೆ ಪ್ರಸಂಗದಲ್ಲಿ ಅರುಣಾಸುರ ಪಾತ್ರವನ್ನು ನಿರ್ವಹಿಸಿ ದುಂಬಿಯನ್ನು ಕೊಲ್ಲಲು ಬಂಡೆಯನ್ನು ಒಡೆಯುವ ದೃಶ್ಯದಲ್ಲಿ ಮನೋಜ್ಞ ಅಭಿನಯ ನೀಡುತ್ತಿದ್ದ ವೇಳೆ ವೇದಿಕೆಯಲ್ಲೇ ಕುಸಿದು ಬಿದ್ದರು. ಕೂಡಲೇ ಅವರನ್ನು ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅದಾಗಲೇ ಅವರ ಪ್ರಾಣ ಪಕ್ಷಿ ಹಾರಿ ಹೋಗಿತ್ತು. ಕಟೀಲು ಮೇಳವೊಂದರಲ್ಲೇ ಸುದೀರ್ಘ 47 ವರ್ಷಗಳ ಕಾಲ ಸೇವೆ ಸಲ್ಲಿಸಿದ ಅವರಿಗೆ ದೇವಿ ಮಹಾತ್ಮೆಯಲ್ಲಿನ ಮಹಿಷಾಸುರ ಪಾತ್ರ ಅಪಾರ ಖ್ಯಾತಿ ತಂದು ಕೊಟ್ಟಿತ್ತು. ದುರದೃಷ್ಟವಷಾತ್ 15 ವರ್ಷಗಳ ಹಿಂದೆ ಹೃದಯಾಘಾತಕ್ಕೊಳಗಾದ ಬಳಿಕ ಅವರು ವೈದ್ಯರ ಸಲಹೆಯಂತೆ ಮಹಿಷಾಸುರನ ಪಾತ್ರವನ್ನು ನಿರ್ವಹಿಸುತ್ತಿರಲಿಲ್ಲ. ಗೇರು ಕಟ್ಟೆ ಶೆಟ್ಟರು ಪತ್ನಿ, ಮೂವರು ಪುತ್ರರು ಸೇರಿದಂತೆ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.