*ಗೋಣಿಕೊಪ್ಪಲು, ಮಾ. 23: ದೇವರಪುರ ಗ್ರಾ.ಪಂ. ಅಧೀನದ ದೇವರಕಾಡು ಪೈಸಾರಿ ನಿವಾಸಿಗಳು ಮೂಲಭೂತ ಸೌಕರ್ಯ ಪಡೆದುಕೊಳ್ಳಲು ಕಾನೂನು ಅರಿವು ಕಾರ್ಯಾಗಾರವನ್ನು ಜಿಲ್ಲಾ ಮತ್ತು ತಾಲೂಕು ದಲಿತ ಸಂಘರ್ಷ ಸಮಿತಿ ವತಿಯಿಂದ ನಡೆಸಲಾಯಿತು.
138 ಏಕ್ರೆ ಜಾಗದಲ್ಲಿ ಸುಮಾರು 60 ಎಕರೆಯಷ್ಟು ಪರಿಶಿಷ್ಟ ಪಂಗಡದವರು ವಾಸ ಮಾಡುತ್ತಿದ್ದಾರೆ. ತಲತಲಾಂತರಗಳಿಂದ ವಾಸ ಮಾಡುತ್ತಿದ್ದರೂ ಇಲ್ಲಿನ ನಿವಾಸಿಗಳಿಗೆ ಮೂಲಭೂತ ಸೌಕರ್ಯ ನೀಡಲು ಸಾಧ್ಯವಾಗಿಲ್ಲ ಎಂಬ ನಿಟ್ಟಿನಲ್ಲಿ ದಲಿತ ಸಂಘರ್ಷ ಸಮಿತಿ ಕಾರ್ಯಾಗಾರವನ್ನು ಆಯೋಜಿಸಿದ್ದು, 136 ಕುಟುಂಬಗಳು ಕಳೆದ 15 ವರ್ಷಗಳಿಂದ ಯಾವದೇ ಮೂಲಭೂತ ಸೌಕರ್ಯ ಪಡೆಯದೆ ವಂಚಿತರಾಗಿದ್ದಾರೆ. ಇದು ಬಡ ಜನರ ಮೇಲೆ ನಡೆಯುತ್ತಿರುವ ದೌರ್ಜನ್ಯ ಎಂದು ದಲಿತ ಸಂಘರ್ಷ ಸಮಿತಿಯ ಸಂಚಾಲಕ ಪರಶುರಾಮ್ ವಿಷಾದ ವ್ಯಕ್ತಪಡಿಸಿದರು.
ಮಾನವೀಯತೆಯಿಂದ ಈ ಜನರ ಬದುಕನ್ನು ಹಸನಾಗಿಸಲು ಮೂಲಭೂತ ಸೌಕರ್ಯ ಒದಗಿಸಲು ಸರಕಾರ ಮುಂದಾಗ ಬೇಕು ಎಂದು ಈ ಸಂದರ್ಭ ಒತ್ತಾಯಿಸಿದರು. ಡಿ.ವೈ.ಎಸ್.ಪಿ. ನಾಗಪ್ಪ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರ ಮೂಲಭೂತ ಹಕ್ಕನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ. 2005ರ ಹಿಂದೆ ವಾಸವಿರುವ ಪ್ರತಿಯೊಬ್ಬ ಬುಡಕಟ್ಟು ಆದಿವಾಸಿ ಕುಟುಂಬಕ್ಕೆ ಹಕ್ಕು ಪತ್ರ ನೀಡಬೇಕೆಂಬ ಕಾನೂನು ಇದೆ ಎಂದರು.
ವಕೀಲೆ ಜ್ಯೋತಿ ಪ್ರಮೋದ್ ಮಾತನಾಡಿ, ಇಲ್ಲಿನ ನಿವಾಸಿಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸಬಾರದು ಎಂದು ವಿರೋಧ ವ್ಯಕ್ತಪಡಿಸಿ ಭದ್ರಕಾಳಿ ಅಯ್ಯಪ್ಪ ದೇವಸ್ಥಾನ ಆಡಳಿತ ಮಂಡಳಿ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಿದೆ. ಸ್ಥಳೀಯ ಪಂಚಾಯಿತಿ, ತಾಲೂಕು ಕಾರ್ಯ ನಿರ್ವಹಣಾಧಿಕಾರಿಗಳ ಮೇಲೆ ಮೊಕದ್ದಮೆ ದಾಖಲಿಸಿರುವದರಿಂದ ಇಲ್ಲಿನ ನಿವಾಸಿಗಳಿಗೆ ನೇರವಾಗಿ ನ್ಯಾಯಾಲಯದಲ್ಲಿ ತಮ್ಮ ಅಳಲನ್ನು ವ್ಯಕ್ತಪಡಿಸಲು ಸಾಧ್ಯವಾಗುತ್ತಿಲ್ಲ.
ತಮ್ಮ ಹಕ್ಕಿಗಾಗಿ ಪ್ರತಿಯೊಂದು ಕುಟುಂಬ ಪ್ರತ್ಯೇಕವಾಗಿ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಿ ತಮ್ಮ ಹಕ್ಕನ್ನು ಪಡೆದುಕೊಳ್ಳಲು ಮುಂದಾಗಬೇಕು ಎಂದು ಸಲಹೆ ನೀಡಿದರು.
ವೃತ್ತ ನಿರೀಕ್ಷಕ ದಿವಾಕರ್, ಪೊನ್ನಂಪೇಟೆ ಠಾಣಾಧಿಕಾರಿ ಜಯರಾಮ್, ಗ್ರಾ.ಪಂ. ಸದಸ್ಯೆ ರಾಣಿ ಉಪಸ್ಥಿತರಿದ್ದರು.